ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ(India V/S South Africa) ನಡುವಿನ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ನ. 22ರಿಂದ ಗುವಾಹಟಿಯ ಬರ್ಸಪಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಲಿದ್ದು, ಈ ಹಿನ್ನೆಲೆ ಪಂದ್ಯದ ಸಮಯ ಮತ್ತು ವೇಳಾಪಟ್ಟಿಯನ್ನು ಬಿಸಿಸಿಐ ಬದಲಾವಣೆ ಮಾಡಿದೆ.
ಈಶಾನ್ಯ ಭಾರತದ ಭಾಗವಾದ ಗುವಾಹಟಿಯಲ್ಲಿ ಸೂರ್ಯೋದಯ ಮತ್ತು ಸೂರ್ಯಸ್ತ ಬೇಗನೇ ಆಗುವುದರಿಂದ ಐದು ದಿನಗಳಲ್ಲಿ ಪಂದ್ಯ ಸಾಮಾನ್ಯವಾಗಿ 30 ನಿಮಿಷ ಮುಂಚಿತವಾಗಿ ಆರಂಭವಾಗಲಿದ್ದು, ಜೊತೆಗೆ ಊಟಕ್ಕೂ ಮುನ್ನವೇ ಚಹಾ ವಿರಾಮ ಇರಲಿದ್ದು, ಹಗಲಿನಲ್ಲಿ ಟೆಸ್ಟ್ ನಡೆಸಲು ಬಿಸಿಸಿಐ ವಿಶೇಷ ನಿರ್ಧಾರ ತೆಗೆದುಕೊಂಡಿದೆ.
ಗುವಾಹಟಿಯಲ್ಲಿ ನಿಗದಿಯಾಗಿರುವ ಪಂದ್ಯದ ವೇಳಾಪಟ್ಟಿಯ ಪ್ರಕಾರ, ಭಾರತೀಯ ಕಾಲಮಾನದ ಪ್ರಕಾರ ಟಾಸ್ ಬೆಳಿಗ್ಗೆ 8:30ಕ್ಕೆ ನಡೆಯಲಿದ್ದು, ಆರಂಭಿಕ ಅವಧಿ ಬೆಳಿಗ್ಗೆ 9:00 ರಿಂದ 11:00 ರವರೆಗೆ ನಡೆಯಲಿದೆ. ಬಳಿಕ 20 ನಿಮಿಷಗಳ ಚಹಾ ವಿರಾಮವಿರಲಿದೆ. ಎರಡನೇ ಅವಧಿಗೆ ಬೆಳಿಗ್ಗೆ 11:20 ರಿಂದ ಮಧ್ಯಾಹ್ನ 1:20 ರವರೆಗೆ ಆಟ ನಡೆಯಲಿದೆ. ಮಧ್ಯಾಹ್ನ 1:20 ರಿಂದ 2:00 ರವರೆಗೆ ಊಟದ ವಿರಾಮ. ಸಂಜೆ 4 ಗಂಟೆಗೆ ದಿನದ ಪಂದ್ಯ ಮುಕ್ತಾಯವಾಗಲಿದೆ.
ಈ ಟೆಸ್ಟ್ ಪಂದ್ಯವು ಗುವಾಹಟಿಯಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯವಾಗಿದೆ. ಇತ್ತೀಚೆಗೆ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಹಲವಾರು ಪಂದ್ಯಗಳು ಗುವಾಹಟಿಯಲ್ಲಿ ಆಯೋಜಿಸಲಾಗಿತ್ತು. ಟೆಸ್ಟ್ ಸರಣಿಯ ಮೊದಲ ಪಂದ್ಯ ನ. 14ರಿಂದ 18ರವರೆಗೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದೆ. (ಏಜೆನ್ಸೀಸ್)