ಕ್ರೀಡೆ

ವಿಶ್ವ ಚೆಸ್​ ಟ್ರೋಫಿ ಸ್ವೀಕರಿಸಿ ತಂದೆ-ತಾಯಿಯೊಂದಿಗೆ ಸಂಭ್ರಮಿಸಿದ ಗುಕೇಶ್​; ಸಮಾರೋಪದವರೆಗೆ ಟ್ರೋಫಿ ಮುಟ್ಟಲಿಲ್ಲ!

ಸಿಂಗಾಪುರ/ಚೆನ್ನೈ: ಚೆಸ್​ ವಿಶ್ವ ಚಾಂಪಿಯನ್​ ಪಟ್ಟವೇರಿದ ಅತಿಕಿರಿಯ ಆಟಗಾರ ಎಂಬ ಐತಿಹಾಸಿಕ ಸಾಧನೆಯ ನಂತರ ಭಾವುಕರಾಗಿ ಆನಂದಬಾಷ್ಪ ಸುರಿಸಿ, ಅಭಿನಂದನೆಗಳ ಸುರಿಮಳೆಗಳಿಗೆ ತಲೆಬಾಗಿ, ಚೆಸ್​ ಬೋರ್ಡ್​ಗಳ ಮೇಲೆ ಹಸ್ತಾಕ್ಷರ ನೀಡಿ ಕೈದಣಿದಿದ್ದರೂ ಲೆಕ್ಕಿಸದೆ, ನಿದ್ದೆ ಇಲ್ಲದೆ ಕಣ್ಣುಗಳು ಉರಿಯುತ್ತಿದ್ದರೂ ಮುಖದ ಮೇಲೆ ಹೆಮ್ಮೆಯ ನಗು ಮೂಡಿಸುತ್ತ, ತ್ರಿವರ್ಣ ಧ್ವಜವನ್ನು ಗರ್ವದಿಂದ ಭುಜದ ಮೇಲೆ ಹಾಕಿಕೊಂಡು 18 ವರ್ಷದ ದೊಮ್ಮರಾಜು ಗುಕೇಶ್​ ಶುಕ್ರವಾರ ವಿಶ್ವ ಚೆಸ್​ ಚಾಂಪಿಯನ್​ಷಿಪ್​ ಟ್ರೋಫಿಯನ್ನು ಸ್ವೀಕರಿಸಿದರು.

ಹಾಲಿ ಚಾಂಪಿಯನ್​ ಚೀನಾದ ಡಿಂಗ್​ ಲಿರೆನ್​ಗೆ 14ನೇ ಹಾಗೂ ಕೊನೇ ಕ್ಲಾಸಿಕ್​ ಪಂದ್ಯದಲ್ಲಿ ಸೋಲುಣಿಸುವ ಮೂಲಕ 7.5 ಅಂಕಗಳೊಂದಿಗೆ ಗುರುವಾರ 18ನೇ ವಿಶ್ವ ಚದುರಂಗ ಚಕ್ರವರ್ತಿಯಾಗಿ ಹೊರಹೊಮ್ಮಿದ ಗುಕೇಶ್​ಗೆ ಸರಿಸುಮಾರು 24 ಗಂಟೆಗಳ ಬಳಿಕ ಸಿಂಗಾಪುರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಫಿಡೆ ಅಧ್ಯಕ್ಷ ಅರ್ಕಾಡಿ ಡ್ವೊಕೋರ್ವಿಚ್​ ಟ್ರೋಫಿ ಪ್ರದಾನ ಮಾಡಿದರು. "ನಾನು ಈ ಕ್ಷಣವನ್ನು ಲಕ್ಷಾಂತರ ಸಲ ಜೀವಿಸಿರುವಂತೆ ಅನುಭವವಾಗುತ್ತಿದೆ. ಪ್ರತಿ ಮುಂಜಾನೆಯೂ ನಾನು, ಈ ಒಂದು ಕ್ಷಣದ ಕಾರಣದಿಂದಲೇ ಎದ್ದೇಳುತ್ತೇನೆ. ಈ ಟ್ರೋಫಿಯನ್ನು ಕೈಯಲ್ಲಿ ಹಿಡಿದುಕೊಂಡಿರುವುದು ಮತ್ತು ಇದನ್ನು ನನಸಾಗಿಸಿಕೊಂಡಿರುವುದು ನನ್ನ ಜೀವನದಲ್ಲಿ ಎಲ್ಲಕ್ಕಿಂತ ಮಿಗಿಲಾದುದು' ಎಂದು ಗುಕೇಶ್​ ಟ್ರೋಫಿ ಸ್ವೀಕರಿಸಿ ಹೇಳಿದರು.

"ಇದೊಂದು ಕನಸಿನಂಥ ಜರ್ನಿಯಾಗಿದೆ. ಹಲವಾರು ಏಳು-ಬೀಳು, ಸವಾಲುಗಳನ್ನು ಎದುರಿಸಿರುವೆ. ಆದರೆ ಹಿಂದೆ ಆಗಿ ಹೋಗಿರುವುದರಲ್ಲಿ ನಾನು ಯಾವುದನ್ನು ಬದಲಾಯಿಸಲಾರೆ. ನನ್ನ ಜತೆಗಿರುವ ಜನರಿಂದ ಇದು ಸುಂದರವೆನಿಸಿದೆ. ನನಗೆ ಆಟದಲ್ಲಿ ಪರಿಹಾರ ಕಾಣಿಸದೆ ಇದ್ದಾಗ ದೇವರೇ ನನಗೆ ದಾರಿ ತೋರಿಸುತ್ತಿದ್ದರು' ಎಂದು ಗುಕೇಶ್​ ಹೇಳಿದರು.

ತಂದೆ-ತಾಯಿ ಜತೆ ಟ್ರೋಫಿ ಸಂಭ್ರಮ: ತಂದೆ ಡಾ. ರಜನಿಕಾಂತ್​ ಟೂರ್ನಿಯುದ್ದಕ್ಕೂ ಗುಕೇಶ್​ ಜತೆಯಲ್ಲೇ ಇದ್ದರೆ, ಗುರುವಾರದವರೆಗೂ ಚೆನ್ನೆ$ನಲ್ಲೇ ಇದ್ದ ತಾಯಿ ಡಾ. ಪದ್ಮಾ ಮಗ ಟ್ರೋಫಿ ಸ್ವೀಕರಿಸುವುದನ್ನು ನೋಡಲು ಶುಕ್ರವಾರ ಸಿಂಗಾಪುರಕ್ಕೆ ತೆರಳಿದರು. ಟ್ರೋಫಿ ಸ್ವೀಕರಿಸಿದ ಬಳಿಕ ಗುಕೇಶ್​ ತಂದೆ-ತಾಯಿಗೆ ಅದನ್ನು ತೋರಿಸಿ ಸಂಭ್ರಮಿಸಿದರು.

ಸಮಾರೋಪದಲ್ಲೇ ಟ್ರೋಫಿ ಕೊನೆಗೂ ಮುಟ್ಟಿದ ಗುಕೇಶ್​

ಸಮಾರೋಪ ಸಮಾರಂಭಕ್ಕೆ ಪೂರ್ವಭಾವಿಯಾಗಿ ಶುಕ್ರವಾರ ಬೆಳಗ್ಗೆ ಗುಕೇಶ್​ ವಿಶ್ವ ಚೆಸ್​ ಚಾಂಪಿಯನ್​ಷಿಪ್​ ಟ್ರೋಫಿಯೊಂದಿಗೆ ಫೋಟೋಸೆಷನ್​ನಲ್ಲಿ ಪಾಲ್ಗೊಂಡರು. ಆದರೆ ಅವರು ಈ ವೇಳೆ ಟ್ರೋಫಿಯನ್ನು ಸ್ಪರ್ಶಿಸಲು ನಿರಾಕರಿಸಿದರು. ಸಂಜೆ ಟೂರ್ನಿಯ ಸಮಾರೋಪ ಸಮಾರಂಭದಲ್ಲೇ ಅದನ್ನು ಕೈಯಲ್ಲಿ ಹಿಡಿದುಕೊಳ್ಳುವುದಾಗಿ ಗುಕೇಶ್​ ಹೇಳಿದರು. ಅಂತಿಮವಾಗಿ ಸಮಾರಂಭದ ವೇದಿಕೆಯಲ್ಲಿ ಗುಕೇಶ್​ ಟ್ರೋಫಿ ತೆಗೆದುಕೊಂಡು "ವಿಶ್ವ ಚಾಂಪಿಯನ್​ ಪಟ್ಟ'ದ ಸಂಭ್ರಮವನ್ನು ಆನಂದಿಸಿದರು.