ಕ್ರೀಡೆ

ಗುಜರಾತ್ ಟೈಟಾನ್ಸ್​ಗೆ 7ನೇ ಜಯ, ಪ್ಲೇಆಫ್​ಗೆ ಸನಿಹ; ಸನ್​ರೈಸರ್ಸ್​ ಆಸೆ ಬಹುತೇಕ ಭಗ್ನ

ಅಹಮದಾಬಾದ್​: ನಾಯಕ ಶುಭಮಾನ್​ ಗಿಲ್​ (76 ರನ್​, 38 ಎಸೆತ, 10 ಬೌಂಡರಿ, 2 ಸಿಕ್ಸರ್​) ಮತ್ತು ಜೋಸ್​ ಬಟ್ಲರ್​ (64 ರನ್​, 37 ಎಸೆತ, 3 ಬೌಂಡರಿ, 4 ಸಿಕ್ಸರ್​) ಭರ್ಜರಿ ಬ್ಯಾಟಿಂಗ್​ ಬಲದಿಂದ ರನ್​ಮಳೆ ಹರಿಸಿದ ಗುಜರಾತ್​ ಟೈಟಾನ್ಸ್​ ತಂಡ ಐಪಿಎಲ್​ 18ನೇ ಆವೃತ್ತಿಯಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಎದುರು 38 ರನ್​ಗಳಿಂದ ಗೆಲುವು ದಾಖಲಿಸಿದೆ. 7ನೇ ಗೆಲುವಿನೊಂದಿಗೆ ಶುಭಮಾನ್​ ಗಿಲ್​ ಪಡೆ ಪ್ಲೇಆ್​ ಸನಿಹ ತಲುಪಿದರೆ, ಸನ್​ರೈಸರ್ಸ್​ ಆಸೆ ಬಹುತೇಕ ಕೊನೆಗೊಂಡಿದೆ.

ನಮೋ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಕಾದಾಟದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಗುಜರಾತ್​ ತಂಡ 6 ವಿಕೆಟ್​ಗೆ 224 ರನ್​ ಪೇರಿಸಿತು. ಗುಜರಾತ್​ ಹಾಲಿ ಆವೃತ್ತಿಯ 10 ಪಂದ್ಯಗಳಲ್ಲಿ 5ನೇ ಬಾರಿ 200 ಪ್ಲಸ್​ ಮೊತ್ತ ಕಲೆಹಾಕಿತು. ಪ್ರತಿಯಾಗಿ ಅಭಿಷೇಕ್​ ಶರ್ಮ (74 ರನ್​, 41 ಎಸೆತ, 4 ಬೌಂಡರಿ, 6 ಸಿಕ್ಸರ್​) ದಿಟ್ಟ ಆಟದ ಹೊರತಾಗಿಯೂ ಸನ್​ರೈಸರ್ಸ್​ -6 ವಿಕೆಟ್​ಗೆ 186 ರನ್​ ಗಳಿಸಲಷ್ಟೇ ಶಕ್ತವಾಯಿತು.

ಅಭಿಷೇಕ್​ ಹೋರಾಟ ವ್ಯರ್ಥ: ಇಂಪ್ಯಾಕ್ಟ್​ ಪ್ಲೇಯರ್​ ಟ್ರಾವಿಸ್​ ಹೆಡ್​ (20) ಮತ್ತು ಅಭಿಷೇಕ್​ ಶರ್ಮ ಮೊದಲ ವಿಕೆಟ್​ಗೆ 27 ಎಸೆತಗಳಲ್ಲಿ 49 ರನ್​ ಸಿಡಿಸುವ ಮೂಲಕ ಸನ್​ರೈಸರ್ಸ್​ ಚೇಸಿಂಗ್​ಗೆ ಬಿರುಸಿನ ಆರಂಭ ಒದಗಿಸಿದರು. ನಂತರ ಕಣಕ್ಕಿಳಿದ ಇಶಾನ್​ ಕಿಶನ್​ (13 ರನ್​, 17 ಎಸೆತ) ರನ್​ ಗಳಿಸಲು ತಿಣುಕಾಡಿದರು. ಇದರಿಂದ 2ನೇ ವಿಕೆಟ್​ ಜತೆಯಾಟದಲ್ಲಿ 30 ಎಸೆತಗಳಲ್ಲಿ ಕೇವಲ 33 ರನ್​ ಬಂತು. ನಂತರ ಕ್ಲಾಸೆನ್​ ಮತ್ತ ಅಭಿಷೇಕ್​ 3ನೇ ವಿಕೆಟ್​ಗೆ 33 ಎಸೆತಗಳಲ್ಲಿ 57 ರನ್​ ಗಳಿಸಿ ಸನ್​ ಗೆಲುವಿನಾಸೆ ಆಸೆ ಜೀವಂತವಿಟ್ಟರು. ಆದರೆ ಅಭಿಷೇಕ್​, ಅನುಭವಿ ವೇಗಿ ಇಶಾಂತ್​ ಶರ್ಮ ಎಸೆತದಲ್ಲಿ ಔಟಾದ ನಂತರ ಸನ್​ರೈಸರ್ಸ್​ ತಂಡ ದಿಢೀರ್​ ಕುಸಿತ ಕಂಡು 6 ರನ್​ ಅಂತರದಲ್ಲಿ 4 ವಿಕೆಟ್​ ಕೈಚೆಲ್ಲಿತು. ಜತೆಗೆ ಪಂದ್ಯವೂ ಕೈಜಾರಿತು.