ಕೋಲ್ಕತ: ಪಂಚ ಗೆಲುವಿನೊಂದಿಗೆ ಭರ್ಜರಿ ಲಯದಲ್ಲಿರುವ ಗುಜರಾತ್ ಟೈಟಾನ್ಸ್ ಮತ್ತು ಅಸ್ಥಿರ ನಿರ್ವಹಣೆಯೊಂದಿಗೆ ತಿಣುಕಾಡುತ್ತಿರುವ ಹಾಲಿ ಚಾಂಪಿಯನ್ ಕೋಲ್ಕತ ನೈಟ್ರೈಡರ್ಸ್ ತಂಡಗಳು ಐಪಿಎಲ್ 18ನೇ ಆವೃತ್ತಿಯಲ್ಲಿ ಸೋಮವಾರ ಮುಖಾಮುಖಿ ಆಗಲಿವೆ. ಶುಭಮಾನ್ ಗಿಲ್ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಳ್ಳುವ ಹಂಬಲದಲ್ಲಿದ್ದರೆ, ಅಜಿಂಕ್ಯ ರಹಾನೆ ಪಡೆ ಅಂಕಪಟ್ಟಿಯಲ್ಲಿ ಪ್ರಗತಿ ಕಾಣುವ ಮೂಲಕ ಪ್ಲೇಆಫ್ ಅವಕಾಶ ವೃದ್ಧಿಸಿಕೊಳ್ಳುವ ತವಕದಲ್ಲಿದೆ.
ಕೆಕೆಆರ್ ತಂಡ ಕಳೆದ ಪಂದ್ಯದಲ್ಲಿ 112 ರನ್ ಸವಾಲು ಬೆನ್ನಟ್ಟಲಾಗದೆ ಸೋತಿತ್ತು. ತಂಡದ ದಯನೀಯ ಬ್ಯಾಟಿಂಗ್ ವೈಫಲ್ಯ ಇದಕ್ಕೆ ಕಾರಣವಾಗಿತ್ತು. ಈ ಬಾರಿ ತವರಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬ್ಯಾಟರ್ಗಳು ಲಯಕ್ಕೆ ಮರಳುವ ನಿರೀಕ್ಷೆ ಕೆಕೆಆರ್ ತಂಡದ್ದಾಗಿದೆ. ಕೆಕೆಆರ್ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 4ರಲ್ಲಿ ಸೋತಿದೆ.
ಮತ್ತೊಂದೆಡೆ ಗುಜರಾತ್ ತಂಡ ಕಳೆದ ಪಂದ್ಯದಲ್ಲಿ ಡೆಲ್ಲಿ ಎದುರು ಗೆದ್ದ ವಿಶ್ವಾಸದಲ್ಲಿದೆ. ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 2ರಲ್ಲಿ ಮಾತ್ರ ಸೋತಿರುವ ಗುಜರಾತ್ಗೆ ಬೌಲಿಂಗ್ನಲ್ಲಿ ಭರ್ಜರಿ ಲಯದಲ್ಲಿರುವ ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ (14 ವಿಕೆಟ್) ಪ್ರಮುಖ ಅಸ್ತ್ರ ಎನಿಸಿದ್ದಾರೆ. ಜತೆಗೆ ಮೊಹಮದ್ ಸಿರಾಜ್ ಮತ್ತು ಸ್ಪಿನ್ನರ್ ಸಾಯಿ ಕಿಶೋರ್ (ತಲಾ 11 ವಿಕೆಟ್) ಉತ್ತಮ ಬೆಂಬಲ ಒದಗಿಸುತ್ತಿದ್ದಾರೆ. ರಶೀದ್ ಖಾನ್ ವಿಕೆಟ್ ಬರ ಮತ್ತು ವೇಗಿ ಕಗಿಸೊ ರಬಾಡ ಇನ್ನೂ ಕೆಲ ಪಂದ್ಯಗಳಿಗೆ ಅಲಭ್ಯರಾಗಿರುವುದು ಮಾತ್ರ ಗುಜರಾತ್ಗೆ ಹಿನ್ನಡೆ ಎನಿಸಿದೆ. ಬ್ಯಾಟಿಂಗ್ನಲ್ಲಿ ಸಾಯಿ ಸುದರ್ಶನ್ (365) ಮತ್ತು ಜೋಸ್ ಬಟ್ಲರ್ (315) ಟೂರ್ನಿಯಲ್ಲಿ 300ಕ್ಕೂ ಅಧಿಕ ರನ್ ಸೇರಿಸಿ ಉತ್ತಮ ಲಯದಲ್ಲಿದ್ದಾರೆ.
ಕೆಕೆಆರ್ಗೆ ನಾಯರ್ ಬಲ
ಟೀಮ್ ಇಂಡಿಯಾದ ಸಹಾಯಕ ಕೋಚ್ ಹುದ್ದೆಯಿಂದ ವಜಾಗೊಂಡ ಬೆನ್ನಲ್ಲೇ ಅಭಿಷೇಕ್ ನಾಯರ್ ಕೆಕೆಆರ್ ತಂಡದ ತರಬೇತಿ ಬಳಗವನ್ನು ಕೂಡಿಕೊಂಡಿದ್ದಾರೆ. ಕಳೆದ ಆವೃತ್ತಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ನಾಯರ್ ಆಗಮನ ಕೆಕೆಆರ್ಗೆ ಹೊಸ ಹುರುಪು ತುಂಬಲಿದೆ. ಉಪನಾಯಕ ವೆಂಕಟೇಶ್ ಅಯ್ಯರ್ ಮತ್ತು ರಮಣ್ದೀಪ್ ಬ್ಯಾಟಿಂಗ್ ತಾಂತ್ರಿಕತೆ ಸುಧಾರಣೆ ದೃಷ್ಟಿಯಿಂದ ನಾಯರ್ ಈಗಾಗಲೆ ಕೆಲಸ ಆರಂಭಿಸಿದ್ದಾರೆ. ದಾಖಲೆಯ 23.75 ಕೋಟಿ ರೂ.ಗೆ ಕೆಕೆಆರ್ ಸೇರಿರುವ ವೆಂಕಟೇಶ್ ಇದುವರೆಗೆ 121 ರನ್ ಮಾತ್ರ ಗಳಿಸಿದ್ದರೆ, ರಮಣ್ದೀಪ್ 6 ಇನಿಂಗ್ಸ್ಗಳಲ್ಲಿ 29 ರನ್ ಮಾತ್ರ ಬಾರಿಸಿದ್ದಾರೆ. ಇದಲ್ಲದೆ ಆಂಡ್ರೆ ರಸೆಲ್ (34) ಮತ್ತು ರಿಂಕು ಸಿಂಗ್ (116) ಕೂಡ ನಿರಾಸೆ ಮೂಡಿಸಿದ್ದಾರೆ. ನಾಯಕ ರಹಾನೆ (221) ಮತ್ತು 20 ವರ್ಷದ ಅಂಗಕೃಷ್ ರಘುವಂಶಿ (170) ಮಾತ್ರ ಸ್ಥಿರ ನಿರ್ವಹಣೆ ತೋರಿದ್ದಾರೆ. ಸುನೀಲ್ ನಾರಾಯಣ್-ಕ್ವಿಂಟನ್ ಡಿಕಾಕ್ ಮತ್ತೆ ತಂಡಕ್ಕೆ ಬಿರುಸಿನ ಆರಂಭ ಒದಗಿಸಬೇಕಾಗಿದೆ.
ಮುಖಾಮುಖಿ: 4
ಗುಜರಾತ್: 2
ಕೆಕೆಆರ್: 1
ರದ್ದು: 1
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್
2 ವರ್ಷ ನಂತರ ಮುಖಾಮುಖಿ!
ಗುಜರಾತ್-ಕೆಕೆಆರ್ ತಂಡಗಳು ಐಪಿಎಲ್ನಲ್ಲಿ ಎರಡು ವರ್ಷಗಳ ನಂತರ ಮುಖಾಮುಖಿ ಆಗಲಿವೆ! ಕಳೆದ ವರ್ಷ ಅಹಮದಾಬಾದ್ನಲ್ಲಿ ನಿಗದಿಯಾಗಿದ್ದ ಉಭಯ ತಂಡಗಳ ನಡುವಿನ ಏಕೈಕ ಪಂದ್ಯ ಭಾರಿ ಮಳೆಯಿಂದಾಗಿ ಒಂದೂ ಎಸೆತವಿಲ್ಲದೆ ರದ್ದುಗೊಂಡಿದ್ದು ಇದಕ್ಕೆ ಕಾರಣವಾಗಿದೆ. ಈ ಸಲವೂ ಉಭಯ ತಂಡಗಳ ಏಕೈಕ ಕಾದಾಟ ಇದಾಗಿದೆ.