ನವದೆಹಲಿ: ಐಪಿಎಲ್ನಲ್ಲಿ ಸಿಕ್ಸರ್ ಕಿಂಗ್ ಆಗಿ ಮಿಂಚಿರುವ ಸ್ಫೋಟಕ ಬ್ಯಾಟರ್ ರಾಹುಲ್ ತೆವಾಟಿಯಾ ಹಾಲಿ ದೇಶೀಯ ಕ್ರಿಕೆಟ್ ಋತುವಿನಲ್ಲಿ ರಣಜಿ ಟ್ರೋಫಿಯಲ್ಲಿ ಹರಿಯಾಣ ತಂಡದ ಪರ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನಸೆಳೆದಿದ್ದಾರೆ.
ರಾಹುಲ್ ತೆವಾಟಿಯಾ ಅವರ ರೆಟ್ರೋ ಲುಕ್ಗೆ ಕ್ರಿಕೆಟ್ ಪ್ರೇಮಿಗಳು ಫಿದಾ ಆಗಿದ್ದು, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಮತ್ತು ಭಾರತದ ಮಾಜಿ ಆಲ್ರೌಂಡರ್ ಮನೋಜ್ ಪ್ರಭಾಕರ್ರನ್ನು ನೆನೆಸಿಕೊಂಡಿದ್ದಾರೆ.
ತೆವಾಟಿಯಾ ಅವರ ಮೀಸೆಯ ಲುಕ್ನ ಚಿತ್ರವನ್ನು ಹರಿಯಾಣ ಕ್ರಿಕೆಟ್ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಬೆನ್ನಲ್ಲೇ ವೈರಲ್ ಆಗಿದೆ. ಜಾರ್ಖಂಡ್ ವಿರುದ್ಧದ ಈ ಪಂದ್ಯದಲ್ಲಿ ತೆವಾಟಿಯಾ 212 ಎಸೆತಗಳಲ್ಲಿ 144 ರನ್ ಸಿಡಿಸಿ ಬ್ಯಾಟಿಂಗ್ನಲ್ಲೂ ಮಿಂಚಿದ್ದಾರೆ.
ರಾಹುಲ್ ತೆವಾಟಿಯಾ 80-90ರ ದಶಕದ ಕ್ರಿಕೆಟಿಗರನ್ನು ನೆನಪಿಸಿದ್ದಾರೆ ಎಂದು ಕೆಲವರು ಹೇಳಿದ್ದರೆ, ಜಾವೇದ್ ಮಿಯಾಂದಾದ್ರ ಬಯೋಪಿಕ್ನಲ್ಲಿ ತೆವಾಟಿಯಾ ನಟಿಸುತ್ತಿರುವಂತಿದೆ ಎಂದು ಇನ್ನು ಕೆಲವರು ಟ್ರೋಲ್ ಮಾಡಿದ್ದಾರೆ. ಐಪಿಎಲ್ನಲ್ಲಿ ಈ ಮುನ್ನ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದ ತೆವಾಟಿಯಾ ಸದ್ಯ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದಾರೆ.