ಕ್ರೀಡೆ

ರಣಜಿ ಟ್ರೋಫಿಯಲ್ಲಿ ಕರ್ನಾಟಕದ ದಾಳಿಗೆ ಗೋವಾ ಕಂಗಾಲು; ಮೈಸೂರಿನಲ್ಲಿ ಪ್ರವಾಸಿ ತಂಡಕ್ಕೆ ವೈಶಾಕ್​, ರೋಹಿತ್​ ಕಡಿವಾಣ

ಮೈಸೂರು: ಉತ್ತಮ ಬೌಲಿಂಗ್​ ನಿರ್ವಹಣೆ ಪ್ರದರ್ಶಿಸಿದ ಆತಿಥೇಯ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಯ ಸಿ ಗುಂಪಿನ ತನ್ನ ಮೂರನೇ ಲೀಗ್​ ಪಂದ್ಯದಲ್ಲಿ ಗೋವಾ ವಿರುದ್ಧ ಮೊದಲ ದಿನವೇ ಮೇಲುಗೈ ಸಾಧಿಸಿದೆ. ವೇಗಿ ವೈಶಾಕ್​ ವಿಜಯಕುಮಾರ್​(45ಕ್ಕೆ 3), ಎಡಗೈ ಸ್ಪಿನ್ನರ್​ ರೋಹಿತ್​ ಕುಮಾರ್​(66ಕ್ಕೆ 3) ದಾಳಿಗೆ ಕಂಗಾಲಾದ ಪ್ರವಾಸಿ ಗೋವಾ ತಂಡ ಮೊದಲ ಇನಿಂಗ್ಸ್​ನಲ್ಲಿ ಸಾಧಾರಣ ಮೊತ್ತಕ್ಕೆ ಕುಸಿದಿದೆ.

ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್​(ಗ್ಲೇಡ್ಸ್​) ಮೈದಾನದಲ್ಲಿ ಶುಕ್ರವಾರ ಪ್ರಾರಂಭಗೊಂಡ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ಗೋವಾ ತಂಡ ದಿನದಂತ್ಯಕ್ಕೆ 87 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 228 ರನ್​ ಪೇರಿಸಿದೆ. ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಪುತ್ರ ಅರ್ಜುನ್​ ತೆಂಡುಲ್ಕರ್​(10*), ಹೆರಾಂಬ್​ ಪರಬ್​(6*) ಎರಡನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಆರಂಭಿಕ ಆಘಾತ ನೀಡಿದ ವೇಗಿಗಳು

ಪ್ರವಾಸಿ ಗೋವಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಕರ್ನಾಟಕ ತಂಡದ ವೇಗಿಗಳಾದ ವೈಶಾಕ್​ ವಿಜಯಕುಮಾರ್​ ಹಾಗೂ ವಾಸುಕಿ ಕೌಶಿಕ್​ ಯಶಸ್ವಿಯಾದರು. ವೈಶಾಕ್​ 4ನೇ ಓವರ್​ನಲ್ಲೇ ಆರಂಭಿಕ ಇಶಾನ್​ ಗಡೇಕರ್​(6) ವಿಕೆಟ್​ ಕಬಳಿಸಿ ಗೋವಾಗೆ ಆಘಾತ ನೀಡಿದರು. ಬಳಿಕ ಕೌಶಿಕ್​ 13ನೇ ಓವರ್​ನಲ್ಲಿ ಕೆ.ವಿ.ಸಿದ್ಧಾರ್ಥ್​ (2) ಅವರನ್ನು ಔಟ್​ ಮಾಡಿ ಒತ್ತಡ ಹೇರಿದರು. ಈ ಮಧ್ಯೆ ಎಡಗೈ ಸ್ಪಿನ್ನರ್​ ರೋಹಿತ್​ ಕುಮಾರ್​, ಸುಯಶ್​ ಪ್ರಭುದೇಸಾಯಿ (24) ವಿಕೆಟ್​ ಪಡೆದು ಸಾಥ್​ ನೀಡಿದರು. ಪರಿಣಾಮ ಪ್ರವಾಸಿ ತಂಡ ಭೋಜನ ವಿರಾಮದ ವೇಳೆಗೆ 33 ಓವರ್​ಗಳಲ್ಲಿ 60 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟ ಎದುರಿಸಿತು.

ಪ್ರತಿರೋಧ ತೋರಿದ ಸ್ನೇಹಲ್​

ಮೊದಲ ಅವಧಿಯಲ್ಲಿ ಗೋವಾ ಬ್ಯಾಟರ್​ಗಳು ಪೆವಿಲಿಯನ್​ ಪರೇಡ್​ ನಡೆಸಿದರೂ, ಸ್ನೇಹಲ್​ ಕೌತಾಂಕರ್​(83ರನ್​, 193 ಎಸೆತ, 9 ಬೌಂಡರಿ, 1 ಸಿಕ್ಸರ್​) ಜೀವದಾನಗಳ ನೆರವು ಪಡೆದು ಎರಡನೇ ಅವಧಿಯಲ್ಲಿ ಕರ್ನಾಟಕ ಬೌಲರ್​ಗಳನ್ನು ಕಾಡುವ ಮೂಲಕ ಪ್ರತಿರೋಧ ತೋರಿದರು. ಸುಯಶ್​ ಪ್ರಭುದೇಸಾಯಿ ಪೆವಿಲಿಯನ್​ ಸೇರಿದ ಬಳಿಕ ನಾಯಕ ದರ್ಶನ್​ ಮಿಸಾಲ್​ (39) ಜತೆಗೂಡಿ ಇನಿಂಗ್ಸ್​ ಕಟ್ಟಲು ಮುಂದಾದರು. 4ನೇ ವಿಕೆಟ್​ಗೆ 182 ಎಸೆತದಲ್ಲಿ 82 ರನ್​ ಗಳಿಸುವ ಮೂಲಕ ಆರಂಭಿಕ ಆಘಾತಕ್ಕೆ ಸಿಲುಕಿದ್ದ ತಂಡಕ್ಕೆ ನೆರವಾದರು. 56ನೇ ಓವರ್​ನಲ್ಲಿ ದರ್ಶನ್​ ಮಿಸಾಲ್​ ವಿಕೆಟ್​ ಪಡೆದ ರೋಹಿತ್​ಕುಮಾರ್​ ಈ ಜೋಡಿಯನ್ನು ಬೇರ್ಪಡಿಸಿದರು. ಬಳಿಕ 58ನೇ ಓವರ್​ನಲ್ಲಿ ದೀಪರಾಜ್​ ಗಾಂವ್ಕರ್​(0) ಔಟ್​ ಮಾಡುವ ಮೂಲಕ ಗೋವಾ ತಂಡಕ್ಕೆ ಶಾಕ್​ ನೀಡಿದರು. ಬಳಿಕ ಸಮರ್​ ದುಭಾಷಿ ಜತೆಗೂಡಿದ ಸ್ನೇಹಲ್​ ಕೌತಾಂಕರ್​ 6ನೇ ವಿಕೆಟ್​ಗೆ 81 ಎಸೆತಗಳಲ್ಲಿ 50 ರನ್​ ಪೇರಿಸಿ ತಂಡಕ್ಕೆ ಕೊಂಚ ಚೇತರಿಕೆ ನೀಡಿದರೂ ದೊಡ್ಡ ಇನಿಂಗ್ಸ್​ ಕಟ್ಟುವಲ್ಲಿ ವಿಫಲರಾದರು. ಎಂ.ವೆಂಕಟೇಶ್​ ಎಸೆದ 75ನೇ ಓವರ್​ನಲ್ಲಿ ನಿಕಿನ್​ ಜೋಸ್​ಗೆ ಕ್ಯಾಚ್​ ನೀಡಿ ಪೆವಿಲಿಯನ್​ ಸೇರಿದರು.

ಕೈಕೊಟ್ಟ ಫೀಲ್ಡಿಂಗ್​

ಕಳೆದ ಪಂದ್ಯದಲ್ಲಿ ಬ್ಯಾಟಿಂಗ್​ ವೈಲ್ಯದಿಂದ ಸೋತಿರುವ ಕರ್ನಾಟಕ ಈ ಬಾರಿ ಮೊದಲ ದಿನವೇ ಗೋವಾ ತಂಡವನ್ನು ಆಲೌಟ್​ ಬಲೆಗೆ ಬೀಳಿಸಲು ಫೀಲ್ಡಿಂಗ್​ ವೈಲ್ಯ ಅಡ್ಡಿಯಾಯಿತು. ಸ್ನೇಹಲ್​ 2 ರನ್​ ಗಳಿಸಿದ್ದಾಗ ವೆಂಕಟೇಶ್​ ಓವರ್​ನಲ್ಲಿ ನೀಡಿದ್ದ ಕ್ಯಾಚ್​ಗಳನ್ನು ಮನೀಶ್​ ಪಾಂಡೆ ಕೈಚೆಲ್ಲಿದ್ದರು. ಸಮರ್​ ದುಭಾಷಿ ಕೂಡ 2 ಜೀವದಾನ ಪಡೆದರು.

ನಿಶ್ಚಲ್​, ವೆಂಕಟೇಶ್​ ಕಣಕ್ಕೆ

ಗಾಯಾಳು ವೇಗಿ ಪ್ರಸಿದ್ಧಿ ಕೃಷ್ಣ ಬದಲು ಆಡಿದ ಎಂ.ವೆಂಕಟೇಶ್​ ಒಂದು ವಿಕೆಟ್​ ಕಬಳಿಸಿ ಗಮನ ಸೆಳೆದರು. ಆರ್​.ಸಮರ್ಥ್​ ಅನಾರೋಗ್ಯಕ್ಕೆ ತುತ್ತಾಗಿರುವ ಕಾರಣ ಅವರ ಬದಲು ಡಿ.ನಿಶ್ಚಲ್​ ಆಡುತ್ತಿದ್ದಾರೆ. ಗೋವಾ ಪರ ಆಡುತ್ತಿರುವ ದಿಗ್ಗಜ ಸಚಿನ್​ ತೆಂಡುಲ್ಕರ್​ ಪುತ್ರ ಅರ್ಜುನ್​ ಆಕರ್ಷಣೆಯ ಕೇಂದ್ರವಾಗಿದ್ದಾರೆ.

ಗೋವಾ: 87 ಓವರ್​ಗಳಲ್ಲಿ 8 ವಿಕೆಟ್​ಗೆ 228 (ಇಶಾನ್​ ಗಡೇಕರ್​ 6, ಕೆ.ವಿ. ಸಿದ್ಧಾರ್ಥ್​ 2, ಸುಯಶ್​ ಪ್ರಭುದೇಸಾಯಿ 24, ಸ್ನೇಹಲ್​ ಕೌತಾಂಕರ್​ 83, ದರ್ಶನ್​ ಮಿಸಾಲ್​ 39, ದೀಪರಾಜ್​ 0, ಸಮರ್​ 19, ಅರ್ಜುನ್​ 10*, ಮೋಹಿತ್​ 16, ಹೆರಾಂಬ್​ 6*, ವಿ. ಕೌಶಿಕ್​ 36ಕ್ಕೆ 7, ವೈಶಾಕ್​ 45ಕ್ಕೆ 3, ವೆಂಕಟೇಶ್​ 25ಕ್ಕೆ 1, ರೋಹಿತ್​ 66ಕ್ಕೆ 3).