ಚೆನ್ನೈ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ಕಿಂಗ್ಸ್ ತಂಡಕ್ಕೆ ಅದರದೇ ತವರು ನೆಲದಲ್ಲಿ ಯುವ ಸ್ಪಿನ್ ಬೌಲರ್ಗಳಿಂದ ನಿಯಂತ್ರಣ ಹೇರಿದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್-17ರಲ್ಲಿ 7 ವಿಕೆಟ್ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ ಸ್ಯಾಮ್ ಕರನ್ ಹಂಗಾಮಿ ಸಾರಥ್ಯದ ಪಂಜಾಬ್ ತಂಡ ಪ್ಲೇಆ್ ಆಸೆಯನ್ನು ಜೀವಂತ ಉಳಿಸಿಕೊಂಡಿದ್ದರೆ, ಸಿಎಸ್ಕೆ ತಂಡ ಕಳೆದ 4 ಪಂದ್ಯಗಳಲ್ಲಿ 3ನೇ ಸೋಲು ಅನುಭವಿಸಿ ಪ್ಲೇಆಫ್ ರೇಸ್ನಲ್ಲಿ ಇಕ್ಕಟ್ಟಿಗೆ ಸಿಲುಕಿದೆ.
ಚಿದಂಬರಂ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಸಿಎಸ್ಕೆ, ಉತ್ತಮ ಆರಂಭದ ಬಳಿಕ ಹರ್ಪ್ರೀತ್ ಬ್ರಾರ್ (17ಕ್ಕೆ 2), ರಾಹುಲ್ ಚಹರ್ (16ಕ್ಕೆ 2) ಸ್ಪಿನ್ ದಾಳಿಗೆ ಲಯ ತಪ್ಪಿತು. ಅಂತಿಮವಾಗಿ ನಾಯಕ ಋತುರಾಜ್ ಗಾಯಕ್ವಾಡ್ (62 ರನ್, 48 ಎಸೆತ, 5 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ಗೆ 162 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಪಂಜಾಬ್ 17.5 ಓವರ್ಗಳಲ್ಲಿ 3 ವಿಕೆಟ್ಗೆ 163 ರನ್ ಗಳಿಸಿ ಜಯಿಸಿತು. 4 ದಿನಗಳ ಬಳಿಕ ಮೇ 5ರಂದು ಉಭಯ ತಂಡಗಳು ಧರ್ಮಶಾಲಾದಲ್ಲಿ ಮರುಮುಖಾಮುಖಿ ಆಗಲಿವೆ.
ಪಂಜಾಬ್ಗೆ ನೆರವಾದ ಬೇರ್ಸ್ಟೋ-ರೋಸೌ: ಪಂಜಾಬ್ ಚೇಸಿಂಗ್ ವೇಳೆ ಆರಂಭಿಕರಾಗಿ ಕಣಕ್ಕಿಳಿದ ಇಂಪ್ಯಾಕ್ಟ್ ಪ್ಲೇಯರ್ ಪ್ರಭ್ಸಿಮ್ರಾನ್ ಸಿಂಗ್ (13) ಇನಿಂಗ್ಸ್ನ 4ನೇ ಎಸೆತದಲ್ಲೇ ಡಗೌಟ್ಗೆ ಮರಳಿದರು. ಆಗ ಜತೆಗೂಡಿದ ಜಾನಿ ಬೇರ್ಸ್ಟೋ (46 ರನ್, 30 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ರಿಲೀ ರೋಸೌ (43 ರನ್, 23 ಎಸೆತ, 5 ಬೌಂಡರಿ, 2 ಸಿಕ್ಸರ್) 2ನೇ ವಿಕೆಟ್ಗೆ 37 ಎಸೆತಗಳಲ್ಲಿ 64 ರನ್ ಸೇರಿಸುವ ಮೂಲಕ ಪಂಜಾಬ್ ಚೇಸಿಂಗ್ಗೆ ಬಲ ತುಂಬಿದರು. ಶಿವಂ ದುಬೆ ಈ ಜೋಡಿಯನ್ನು ಬೇರ್ಪಡಿಸಿದರು. ಬಳಿಕ ಶಶಾಂಕ್ ಸಿಂಗ್ (23*) ಮತ್ತು ನಾಯಕ ಸ್ಯಾಮ್ ಕರನ್ (26*) ಮುರಿಯದ 4ನೇ ವಿಕೆಟ್ಗೆ 37 ಎಸೆತಗಳಲ್ಲಿ 50 ರನ್ ಸೇರಿಸಿ 2.1 ಓವರ್ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿದರು.