ನವದೆಹಲಿ: ಮಹಾಮಾರಿ ಕರೊನಾ ವಿರುದ್ಧದ ಜಾಗೃತಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಇಡೀ ದೇಶವೇ ಒಂದಾಗಿ ಬೆಂಬಲ ನೀಡಿದ್ದು, ಇದೇ ವೇಳೆ ಅಗತ್ಯ ಸೇವೆಯಲ್ಲಿ ನಿರತರಾಗಿದ್ದವರಿಗೆ ಧನ್ಯವಾದ ಸಮರ್ಪಣೆಯಲ್ಲಿ ಕ್ರೀಡಾತಾರೆಯರೂ ಭಾಗಿಯಾಗಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸಹಿತ ದೇಶದ ಎಲ್ಲ ಕ್ರೀಡಾತಾರೆಯರು ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿರುವ ಸಂದೇಶ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ಇಂದು ಎಲ್ಲರೂ ತಮ್ಮ ಮನೆಯಲ್ಲೇ ಉಳಿದುಕೊಂಡಿದ್ದರೂ ಒಗ್ಗಟ್ಟಾಗಿದ್ದಾರೆ. ನಾವಿಲ್ಲಿ ಮನೆಯಲ್ಲೇ ಇದ್ದರೂ, ಹಲವಾರು ಜನರು ನಿಸ್ವಾರ್ಥದಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ನಮ್ಮ ಸುರಕ್ಷತೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟಿರುವ ಎಲ್ಲರಿಗೂ ಧನ್ಯವಾದಗಳು. ನಮ್ಮ ಈ ಶಿಸ್ತು ಮತ್ತು ಬದ್ಧತೆ ಮುಂದುವರಿಯುವುದು ಅಗತ್ಯವಾಗಿದೆ’ ಎಂದು ಸಚಿನ್ ತೆಂಡುಲ್ಕರ್ ಮನೆಯಿಂದಲೇ ಚಪ್ಪಾಳೆ ತಟ್ಟಿರುವ ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ತರಬೇತಿ ಮುಂದುವರಿಸಿರುವ ಭಾರತದ ಪುರುಷರ ಹಾಕಿ ತಂಡದ ಕೋಚ್ ಜೋಯೆರ್ಡ್ ಮರಿಜ್ನೆ, ಎಲ್ಲ ಆಟಗಾರರ ಜತೆಗೂಡಿ ಚಪ್ಪಾಳೆ ತಟ್ಟಿರುವ ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಹಾಗೂ ಮಾಜಿ ಅಥ್ಲೀಟ್ ಪಿ.ಟಿ. ಉಷಾ ಕೂಡ ಟ್ವಿಟರ್ನಲ್ಲಿ ಕೃತಜ್ಞತೆ ಸಲ್ಲಿಸಿದ್ದು, ಮಾಜಿ ನಾಯಕ, ಕೋಚ್ ಅನಿಲ್ ಕುಂಬ್ಳೆ, ಕೋವಿಡ್-19 ವಿರುದ್ಧ ಹೋರಾಡಲು ನಮಗೆ ನೆರವಾಗುತ್ತಿರುವ ಎಲ್ಲ ಹೀರೋಗಳಿಗೆ ಧನ್ಯವಾದಗಳು ಎಂದು ಟ್ವೀಟಿಸಿದ್ದಾರೆ.
ವೇಟ್ಲಿಫ್ಟರ್ ಮೀರಾಬಾಯಿ ಚಾನು, ಅಥ್ಲೀಟ್ ಹಿಮಾದಾಸ್ ಕೂಡ ಪಟಿಯಾಲಾದ ಸಾಯ್ ಕೇಂದ್ರದಲ್ಲಿ ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ವಿಶ್ವ ಚಾಂಪಿಯನ್ ಪಿವಿ ಸಿಂಧು, ಶೂಟರ್ ಹೀನಾ ಸಿಧು ತಮ್ಮ ಮನೆಯ ಬಾಲ್ಕನಿಯಿಂದ ವಿಡಿಯೋ ಮಾಡಿದ್ದಾರೆ.