

ನವದೆಹಲಿ: ದಿನದಿಂದ ದಿನಕ್ಕೆ ಕರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 31ರವರೆಗೆ ದೇಶಾದ್ಯಂತ ಎಲ್ಲ ಪ್ಯಾಸೆಂಜರ್ ರೈಲು ಪ್ರಯಾಣವನ್ನು ಭಾರತೀಯ ರೈಲ್ವೆ ಇಲಾಖೆ ರದ್ದುಪಡಿಸಿದೆ.
ಇಂದು ದೇಶದೆಲ್ಲೆಡೆ ಪ್ರಧಾನಿ ಮೋದಿ ಕರೆ ನೀಡಿರುವ ಜನತಾ ಕರ್ಪ್ಯೂಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಆದರೆ, ದುರಾದೃಷ್ಟವಶಾತ್ ಇಂದು ಇಬ್ಬರು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಅಲ್ಲದೆ, ಸೋಂಕಿತರ ಸಂಖ್ಯೆಯು ಹೆಚ್ಚಾಗಿರುವ ಕಾರಣದಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮಾರ್ಚ್ 31ರವರೆಗೆ ಎಲ್ಲ ಪ್ಯಾಸೆಂಜರ್ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ.
ದೇಶದಲ್ಲಿ ಈವರೆಗೆ 300ಕ್ಕೂ ಅಧಿಕ ಮಂದಿಗೆ ಕರೊನಾ ಸೋಂಕು ತಗುಲಿದ್ದು, ಓರ್ವ ಇಟಲಿ ಪ್ರಜೆ ಸೇರಿ ಒಟ್ಟು 7 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. (ಏಜೆನ್ಸೀಸ್)