ಕ್ರೀಡೆ

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ವಿನೋದ್ ಕಾಂಬ್ಳಿಗೆ ಸಿಹಿ ಸುದ್ದಿ; ರಕ್ಷಕನಂತೆ ನಿಂತ ಸುನೀಲ್ ಗವಾಸ್ಕರ್| sunil gavaskar

sunil gavaskar | ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿಗೆ ಸುನಿಲ್ ಗವಾಸ್ಕರ್ ಅವರ 'ದಿ ಚಾಂಪ್ಸ್ ಫೌಂಡೇಶನ್' ಆರ್ಥಿಕ ನೆರವು ನೀಡಲಿದೆ. ಕಾಂಬ್ಳಿ ಅವರ ಜೀವನದುದ್ದಕ್ಕೂ ಪ್ರತಿ ತಿಂಗಳು 30,000 ರೂ. ಹಾಗೂ ಅವರ ವೈದ್ಯಕೀಯ ವೆಚ್ಚಗಳಿಗಾಗಿ ವಾರ್ಷಿಕವಾಗಿ 30,000 ರೂ. ಹೆಚ್ಚುವರಿಯಾಗಿ ನೀಡುವ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿನೋದ್ ಕಾಂಬ್ಳಿ ಅವರ ಆರೋಗ್ಯ ಗಮನಾರ್ಹವಾಗಿ ಹದಗೆಟ್ಟಿತ್ತು. ಮೂತ್ರದ ಸೋಂಕಿಗೆ ತುತ್ತಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸುದ್ದಿ ತಿಳಿಯುತ್ತಿದಂತೆ ನೆರವಿನ ಹಸ್ತ ಚಾಚುವುದಾಗಿ ಗವಾಸ್ಕರ್ ತಿಳಿಸಿದ್ದರು.

ಮುಂಬೈನ ವಾಂಖೆಡೆ ಕ್ರೀಡಾಂಗಣದ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗವಾಸ್ಕರ್ ಕಾಂಬ್ಳಿ ಅವರನ್ನು ಭೇಟಿಯಾಗಿದ್ದರು. ಇತ್ತೀಚೆಗೆ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡು 2025 ರ ಜನವರಿಯಲ್ಲಿ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಾವಸ್ಕರ್ ಕಾಂಬ್ಳಿ ಅವರೊಂದಿಗೆ ಸಂಭಾಷಣೆ ನಡೆಸಿದ್ದರು.

1999 ರಲ್ಲಿ ಶುರುವಾದ ಚಾಂಪ್ಸ್ ಫೌಂಡೇಶನ್ ಆರ್ಥಿಕ ಸಂಕಷ್ಟದಲ್ಲಿರುವ ಅಂತರರಾಷ್ಟ್ರೀಯ ಕ್ರಿಕೆಟಿಗರಿಗೆ ಸಹಾಯ ಮಾಡುತ್ತಾ ಬರುತ್ತಿದೆ. ಇದೀಗ ಇದೇ ಫೌಂಡೇಷನ್ ಮೂಲಕ ವಿನೋದ್ ಕಾಂಬ್ಳಿಗೆ ತಿಂಗಳಿಗೆ 30000 ರೂಪಾಯಿಗಳನ್ನು ನೀಡುವ ಪ್ರಕ್ರಿಯೆಯನ್ನು ಏಪ್ರಿಲ್ 1 ರಿಂದ ಜಾರಿಗೆ ತರಲಾಗಿದೆ. 53 ವರ್ಷದ ಕಾಂಬ್ಳಿ ಅವರಿಗೆ ಜೀವನಪರ್ಯಂತ ಈ ಮೊತ್ತವನ್ನು ಪಾವತಿಸುವುದಾಗಿ ಚಾಂಪ್ಸ್ ಫೌಂಡೇಶನ್ ತಿಳಿಸಿದೆ.

ವರದಿಯ ಪ್ರಕಾರ, ವಾಂಖೆಡೆ ಕ್ರೀಡಾಂಗಣದಲ್ಲಿ ಕ್ರಿಕೆಟಿಗರನ್ನು ಭೇಟಿಯಾದ ಮರುದಿನ ಗವಾಸ್ಕರ್ ಕಾಂಬ್ಳಿ ಅವರ ವೈದ್ಯರನ್ನು ಭೇಟಿಯಾಗಿದ್ದಾಗಿ ತಿಳಿದು ಬಂದಿದೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದ ನಂತರ, ಚಾಂಪ್ಸ್ ಫೌಂಡೇಶನ್‌ಗೆ ಆರ್ಥಿಕ ಮತ್ತು ವೈದ್ಯಕೀಯ ನೆರವು ನೀಡಲು ಪ್ರಾರಂಭಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದ್ದು, ಏಪ್ರಿಲ್ 1 ರಿಂದ ಕಾಂಬ್ಳಿಗೆ ತಿಂಗಳಿಗೆ 30,000 ರೂ. ಸಿಗಲಿದೆ ಎನ್ನಲಾಗಿದೆ.

(ಏಜೆನ್ಸೀಸ್)