ಕ್ರೀಡೆ

ಮ್ಯಾಕ್ಸಿ ವರ್ತನೆಗೆ ಬೇಸತ್ತು ಇನ್​​ಸ್ಟಾದಲ್ಲಿ ಬ್ಲಾಕ್​ ಮಾಡಿದ್ದರು ಕೊಹ್ಲಿ! ಆಸಿಸ್​ ಆಲ್​ರೌಂಡರ್ ಬಿಚ್ಚಿಟ್ರು ಸ್ವಾರಸ್ಯಕರ ಸಂಗತಿ | Glenn Maxwell

Glenn Maxwell : ವಿರಾಟ್​ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡದ ಸಹ ಆಟಗಾರರಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಮ್ಯಾಕ್ಸ್‌ವೆಲ್ ಆಸಿಸ್​ ತಂಡದ ಸ್ಟಾರ್​ ಆಲ್​ರೌಂಡರ್​ ಆಗಿದ್ದು, ಮುಂಬರುವ ಆಸ್ಟ್ರೇಲಿಯಾದ ಟಿ-20 ಸರಣಿಯಲ್ಲಿ ತಂಡದ ನಾಯಕತ್ವಕ್ಕೆ ಪರಿಗಣಿಸಲಾಗಿದೆ. ಐಪಿಎಲ್‌ನಲ್ಲಿ ಆರ್​ಸಿಬಿ ಪರ ಆಡುವ ಮೊದಲು, ಕೊಹ್ಲಿ ಮತ್ತು ಮ್ಯಾಕ್ಸ್‌ವೆಲ್ ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯಗಳಲ್ಲಿ ಎದುರಾಳಿಗಳಾಗಿ ಹೋರಾಡಿದ್ದಾರೆ.

ಮ್ಯಾಕ್ಸಿ ಎಂದೇ ಕ್ರೀಡಾಭಿಮಾನಿಗಳ ಮನದಲ್ಲಿ ಭದ್ರವಾದ ಸ್ಥಾನ ಪಡೆದಿರುವ ಮ್ಯಾಕ್ಸ್​ವೆಲ್​, ಇತ್ತೀಚೆಗಷ್ಟೇ ತನ್ನ ಬರವಣಿಗೆಯಲ್ಲಿ ಮೂಡಿಬಂದಿರುವ 'ದಿ ಶೋಮ್ಯಾನ್' ಹೆಸರಿನ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅವರು ಕೊಹ್ಲಿ ಮತ್ತು ತಮ್ಮ ನಡುವೆ ನಡೆದ ಸ್ವಾರಸ್ಯಕರ ಘಟನೆಯ ಬಗ್ಗೆ ವಿವರಿಸಿದ್ದಾರೆ.

ಈ ಹಿಂದೆ ಕೊಹ್ಲಿ, ಮ್ಯಾಕ್ಸ್​ವೆಲ್​ ಅವರನ್ನು ಇನ್​ಸ್ಟಾಗ್ರಾಂನಲ್ಲಿ ಬ್ಲಾಕ್​ ಮಾಡಿದ್ದರಂತೆ. ಮ್ಯಾಕ್ಸ್‌ವೆಲ್ ಅವರು ಈ ಹಿಂದೆ ಪಂಜಾಬ್ ಕಿಂಗ್ಸ್‌ ತಂಡದಲ್ಲಿದ್ದರು. ಅಲ್ಲಿಂದ ಬಿಡುಗಡೆಯಾದಾಗ ಆರ್‌ಸಿಬಿಗೆ ಸೇರಿಸಿಕೊಳ್ಳುವಂತೆ ಆಗಿನ ನಾಯಕ ಕೊಹ್ಲಿ, ಫ್ರಾಂಚೈಸಿಗೆ ಸಲಹೆ ನೀಡಿದರು. ಕೊಹ್ಲಿಯ ಈ ಬೆಂಬಲಕ್ಕೆ ಮ್ಯಾಕ್ಸ್‌ವೆಲ್ ತಮ್ಮ ಪುಸ್ತಕದಲ್ಲಿ ಧನ್ಯವಾದ ಸಹ ಹೇಳಿದ್ದಾರೆ.

2021ರಲ್ಲಿ ಮ್ಯಾಕ್ಸ್​ವೆಲ್​ ಆರ್​ಸಿಬಿ ತಂಡಕ್ಕೆ ಆಗಮಿಸಿದರು. ಅದಕ್ಕೂ ನಾಲ್ಕು ವರ್ಷಗಳ ಮುಂಚೆ ಅಂದರೆ, 2017ರಲ್ಲಿ ಆಸ್ಟ್ರೇಲಿಯಾ, ಭಾರತ ಪ್ರವಾಸ ಕೈಗೊಂಡಿತ್ತು. ರಾಂಚಿಯಲ್ಲಿ ನಡೆದ ಟೆಸ್ಟ್​ ಸರಣಿಯ ಮೂರನೇ ಪಂದ್ಯದ ವೇಳೆ ಕೊಹ್ಲಿಯ ಬಲ ಭುಜಕ್ಕೆ ಗಾಯವಾಗಿತ್ತು. ಇದಾದ ನಂತರ ಆಸ್ಟ್ರೇಲಿಯಾದ ಫೀಲ್ಡಿಂಗ್ ಸಮಯ ಬಂದಾಗ ಮ್ಯಾಕ್ಸ್​ವೆಲ್ ಅವರು ಕೊಹ್ಲಿಯನ್ನು ಹಿಡಿದುಕೊಂಡು ಬಲ ಭುಜವನ್ನು ಒತ್ತಿ ಕೀಟಲೆ ಮಾಡಿದ್ದರು.

ಈ ಘಟನೆ ಕೊಹ್ಲಿಯನ್ನು ಕೆರಳಿಸಿತ್ತು. ಇದಾದ ಬಳಿಕ ಮ್ಯಾಕ್ಸಿಯನ್ನು Instagram ನಲ್ಲಿ ಕೊಹ್ಲಿ ನಿರ್ಬಂಧಿಸಿದರು. ಇದಾದ ವರ್ಷಗಳ ಬಳಿಕ ಐಪಿಎಲ್‌ನಲ್ಲಿ ಆರ್​ಸಿಬಿ ತಂಡವನ್ನು ಸೇರಿಕೊಂಡಾಗ ಇನ್‌ಸ್ಟಾಗ್ರಾಮ್‌ನಲ್ಲಿ ಕೊಹ್ಲಿಯನ್ನು ಹುಡುಕಿದರೂ ಮಾಕ್ಸಿಗೆ ಅವರು ಸಿಗಲಿಲ್ಲ. ಬಳಿಕ ಈ ಬಗ್ಗೆ ಕೊಹ್ಲಿ ಬಳಿ ಮ್ಯಾಕ್ಸಿ ವಿಚಾರಿಸಿದರು. ಗೇಲಿ ಮಾಡಿದ್ದರಿಂದ ಬ್ಲಾಕ್ ಮಾಡಿದ್ದಾಗಿ ಕೊಹ್ಲಿ ಬಹಿರಂಗಪಡಿಸಿದರು. ನಂತರ ಕೊಹ್ಲಿ, ಮ್ಯಾಕ್ಸ್​ವೆಲ್​ ಅವರನ್ನು ಅನ್‌ಬ್ಲಾಕ್ ಮಾಡಿದರು ಮತ್ತು ಇಬ್ಬರೂ ಉತ್ತಮ ಸ್ನೇಹಿತರಾದರು ಎಂದು ಮ್ಯಾಕ್ಸ್‌ವೆಲ್ ಪುಸ್ತಕದಲ್ಲಿ ಹೇಳಿದ್ದಾರೆ.

2021ರ ಋತುವಿನಲ್ಲಿ ಆರ್‌ಸಿಬಿಗೆ ಸೇರ್ಪಡೆಗೊಂಡ ಮ್ಯಾಕ್ಸ್‌ವೆಲ್ ಆ ಋತುವಿನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ್ದರು. ಆ ಋತುವಿನಲ್ಲಿ RCB 14.25 ಕೋಟಿಗೆ ಮ್ಯಾಕ್ಸಿಯನ್ನು ಖರೀದಿಸಿತು. (ಏಜೆನ್ಸೀಸ್​)