ಕ್ರೀಡೆ

ಗಿಲ್​ಗೆ ಗಾಯ, ರೋಹಿತ್​ ಅಲಭ್ಯ; ಮೀಸಲು ಬ್ಯಾಟರ್​ ಆಗಿ ಆಸೀಸ್​ನಲ್ಲೇ ಉಳಿದುಕೊಂಡ ಕನ್ನಡಿಗ!

ಪರ್ತ್​: ಕಳೆದ 20 ದಿನಗಳಿಂದ ಆಸ್ಟ್ರೆಲಿಯಾ ಪ್ರವಾಸದಲ್ಲಿದ್ದ ಋತುರಾಜ್​ ಗಾಯಕ್ವಾಡ್​ ಸಾರಥ್ಯದ ಭಾರತ ಎ ತಂಡ ಭಾರತ ಟೆಸ್ಟ್​ ತಂಡದೆದುರಿನ ಅಭ್ಯಾಸ ಪಂದ್ಯವನ್ನು ಭಾನುವಾರ ಮುಗಿಸಿ ತವರಿನತ್ತ ಹೊರಟಿದೆ. ಆದರೆ ಎಡಗೈ ಬ್ಯಾಟರ್​ ಹಾಗೂ ಕನ್ನಡಿಗ ದೇವದತ್​ ಪಡಿಕ್ಕಲ್​ ಮಾತ್ರ ಆಸೀಸ್​ನಲ್ಲೇ ಉಳಿದುಕೊಳ್ಳಲಿದ್ದಾರೆ.

ಶುಭಮಾನ್​ ಗಿಲ್​ ಎಡಗೈ ಹೆಬ್ಬೆರಳಿನ ಮೂಳೆ ಮುರಿತಕ್ಕೆ ಒಳಗಾಗಿರುವುದರಿಂದ ಮತ್ತು 2ನೇ ಮಗುವಿನ ನಿರೀಕ್ಷೆಯಲ್ಲಿ ರೋಹಿತ್​ ಶರ್ಮ ತವರಿನಲ್ಲೇ ಉಳಿದುಕೊಂಡಿರುವುದರಿಂದ ಪಡಿಕ್ಕಲ್​ರನ್ನು ಆಸೀಸ್​ ವಿರುದ್ಧದ ಮೊದಲ ಟೆಸ್ಟ್​ಗೆ ಮೀಸಲು ಬ್ಯಾಟರ್​ ಆಗಿ ಉಳಿಸಿಕೊಳ್ಳಲು ಟೀಮ್​ ಮ್ಯಾನೇಜ್​ಮೆಂಟ್​ ನಿರ್ಧರಿಸಿದೆ ಎನ್ನಲಾಗಿದೆ. ಇದರಿಂದಾಗಿ ಪಡಿಕ್ಕಲ್​ ನ.23ರಿಂದ ನಡೆಯಲಿರುವ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20 ಟೂರ್ನಿಯ ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ಆಸ್ಟ್ರೆಲಿಯಾ ಎ ವಿರುದ್ಧದ 2 ಚತುರ್ದಿನ ಪಂದ್ಯಗಳ 4 ಇನಿಂಗ್ಸ್​ಗಳಲ್ಲಿ ಪಡಿಕ್ಕಲ್​ 36, 88, 26 ಮತ್ತು 1 ರನ್​ ಗಳಿಸಿದ್ದರು. ಇದುವರೆಗೆ ಭಾರತ ಪರ ಏಕೈಕ ಟೆಸ್ಟ್​ ಆಡಿರುವ 24 ವರ್ಷದ ಪಡಿಕ್ಕಲ್​, 65 ರನ್​ ಬಾರಿಸಿ ಮಿಂಚಿದ್ದರು. ಇಂಗ್ಲೆಂಡ್​ ವಿರುದ್ಧ ಹಾಲಿ ವರ್ಷ ಮಾರ್ಚ್​ನಲ್ಲಿ ಆಡಿದ ಈ ಟೆಸ್ಟ್​ ಬಳಿಕ ಪಡಿಕ್ಕಲ್​ ಅವಕಾಶ ಪಡೆದಿಲ್ಲ.

ರೋಹಿತ್​ ಪ್ರಯಾಣ ವಿಳಂಬ

ಪತ್ನಿ ರಿತಿಕಾ ಕಳೆದ ಶುಕ್ರವಾರವೇ 2ನೇ ಮಗುವಿಗೆ ಜನ್ಮ ನೀಡಿದ್ದರೂ, ನಾಯಕ ರೋಹಿತ್​ ಶರ್ಮ ಅವರ ಆಸ್ಟ್ರೆಲಿಯಾ ಪ್ರಯಾಣ ವಿಳಂಬವಾಗಲಿದೆ. ಪತ್ನಿ ಮತ್ತು ಮಗುವಿನ ಜತೆಗೆ ಹೆಚ್ಚಿನ ಸಮಯ ಕಳೆಯಲು ಬಯಸಿರುವುದಾಗಿ ರೋಹಿತ್​, ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಶುಕ್ರವಾರದಿಂದ ಪರ್ತ್​ನಲ್ಲಿ ನಡೆಯಲಿರುವ ಮೊದಲ ಟೆಸ್ಟ್​ ಪಂದ್ಯಕ್ಕೆ ಅವರು ಅಲಭ್ಯರಾಗಲಿದ್ದು, ಉಪನಾಯಕ ಜಸ್​ಪ್ರೀತ್​ ಬುಮ್ರಾ ಭಾರತ ತಂಡವನ್ನು ಮುನ್ನಡೆಸುವುದು ಬಹುತೇಕ ಖಚಿತಗೊಂಡಿದೆ. ಡಿಸೆಂಬರ್​ 6ರಿಂದ ಅಡಿಲೇಡ್​ನಲ್ಲಿ ಪಿಂಕ್​ಬಾಲ್​ನಲ್ಲಿ ನಡೆಯಲಿರುವ 2ನೇ ಟೆಸ್ಟ್​ಗೆ ಮುನ್ನ ರೋಹಿತ್​ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮೊದಲ ಟೆಸ್ಟ್​ ಬಳಿಕ 2ನೇ ಪಂದ್ಯಕ್ಕೆ ಮುನ್ನ 9 ದಿನಗಳ ಅಂತರವಿದೆ.