ಬೆಂಗಳೂರು: ಕರ್ನಾಟಕ ತಂಡ 1974ರಲ್ಲಿ ಸಾಧಿಸಿದ ಚೊಚ್ಚಲ ರಣಜಿ ಟ್ರೋಫಿ ಗೆಲುವು ನಮಗೆಲ್ಲರಿಗೂ ಸ್ಫೂರ್ತಿ ತುಂಬಿತ್ತು. 15, 17 ವಯೋಮಿತಿ ಕ್ರಿಕೆಟ್ನಲ್ಲಿ ಆಡುವಾಗ, ಕರ್ನಾಟಕ ತಂಡ ಸೆಮಿಫೈನಲ್ನಲ್ಲಿ ಹೇಗೆ ಬಲಿಷ್ಠ ಬಾಂಬೆ (ಈಗಿನ ಮುಂಬೈ) ತಂಡವನ್ನು ಹಿಮ್ಮೆಟ್ಟಿಸಿತ್ತು ಎಂಬುದನ್ನು ಹಿರಿಯರು ಹೇಳಿದ್ದನ್ನು ಕೇಳಿದ್ದೆವು. ಅದು ಕರ್ನಾಟಕ ಕ್ರಿಕೆಟ್ ಮಾತ್ರವಲ್ಲ, ದೇಶದ ಇತರ ತಂಡಗಳಿಗೂ ಮುಂಬೈಯನ್ನು ಮಣಿಸಬಹುದು ಎಂಬ ವಿಶ್ವಾಸ ತುಂಬಿತ್ತು ಎಂದು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಹೇಳಿದರು.
ಇಎಎಸ್ ಪ್ರಸನ್ನ ಸಾರಥ್ಯದಲ್ಲಿ ಜಿಆರ್ ವಿಶ್ವನಾಥ್, ಬ್ರಿಜೇಶ್ ಪಟೇಲ್, ಸಯ್ಯದ್ ಕಿರ್ಮಾನಿ, ಬಿಎಸ್ ಚಂದ್ರಶೇಖರ್ ಒಳಗೊಂಡ ಕರ್ನಾಟಕ ತಂಡದ ಚೊಚ್ಚಲ ರಣಜಿ ಗೆಲುವಿಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಮಾರಂಭದಲ್ಲಿ ದ್ರಾವಿಡ್ ಮಾತನಾಡಿದರು. 15 ವರ್ಷಗಳಲ್ಲಿ ಮೊದಲ ಬಾರಿ ಮುಂಬೈ ತಂಡ ಫೈನಲ್ಗೇರುವುದನ್ನು ತಡೆದಿದ್ದ ಕರ್ನಾಟಕ ತಂಡ ಪ್ರಶಸ್ತಿ ಸುತ್ತಿನಲ್ಲಿ ರಾಜಸ್ಥಾನವನ್ನು 185 ರನ್ಗಳಿಂದ ಮಣಿಸಿತ್ತು. ನಾಯಕ ಪ್ರಸನ್ನ 9 ವಿಕೆಟ್ ಕಬಳಿಸಿ ಗೆಲುವಿನ ರೂವಾರಿಯಾಗಿದ್ದರು. ಸೆಮೀಸ್ನಲ್ಲಿ ಜಿಆರ್ವಿ ಮತ್ತು ಬ್ರಿಜೇಶ್ ಪಟೇಲ್ ಶತಕ ಸಿಡಿಸಿದ್ದರೆ, ಪ್ರಸನ್ನ-ಚಂದ್ರಶೇಖರ್ 9 ವಿಕೆಟ್ ಹಂಚಿಕೊಂಡು ಮುಂಬೈ ಎದುರು ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ಡ್ರಾ ಸಾಧಿಸಲು ನೆರವಾಗಿದ್ದರು.
"ಕರ್ನಾಟಕ ತಂಡ ಮೊದಲಿನಿಂದಲೂ ಉತ್ತಮ ಬೌಲರ್ಗಳನ್ನು ಒಳಗೊಂಡಿತ್ತು. ಜಿಆರ್ವಿ, ಸುಧಾಕರ್ ರಾವ್, ವಿಜಯಕೃಷ್ಣ, ಎವಿ ಜಯಪ್ರಕಾಶ್, ಸಂಜಯ್ ದೇಸಾಯಿ, ಕಿರ್ಮಾನಿ ಬಂದ ಬಳಿಕ ಬ್ಯಾಟಿಂಗ್ ವಿಭಾಗವೂ ಬಲಿಷ್ಠವಾಗಿತ್ತು. ಅದಕ್ಕೆ ಹಿಂದಿನ ವರ್ಷ (1973) ಇರಾನಿ ಕಪ್ನಲ್ಲಿ ಮುಂಬೈ ತಂಡವನ್ನು ಶೇಷಭಾರತ ಮಣಿಸಿದ್ದು ಕೂಡ ನಮಗೆ ಆತ್ಮವಿಶ್ವಾಸ ತುಂಬಿತ್ತು' ಎಂದು ಬ್ರಿಜೇಶ್ ಪಟೇಲ್ ಹೇಳಿದರು.
ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್, ಕರ್ನಾಟಕದ ಮಾಜಿ ಆಟಗಾರರಾದ ವೆಂಕಟೇಶ್ ಪ್ರಸಾದ್, ದೊಡ್ಡ ಗಣೇಶ್ ಮತ್ತು ಸುಜಿತ್ ಸೋಮಸುಂದರ್ ಸಮಾರಂಭದಲ್ಲಿದ್ದರು.