ರಾಂಚಿ: ಕಳೆದ ಟೋಕಿಯೊ ಒಲಿಂಪಿಕ್ಸ್ನಲ್ಲಿ 4ನೇ ಸ್ಥಾನ ಸಂಪಾದಿಸುವ ಮೂಲಕ ಗಮನಸೆಳೆದಿದ್ದ ಭಾರತದ ಮಹಿಳಾ ಹಾಕಿ ತಂಡ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಒಲಿಸಿಕೊಳ್ಳುವಲ್ಲಿ ಎಡವಿದೆ. ತವರಿನಲ್ಲೇ ನಡೆದ ಎಫ್ಐಎಚ್ ಒಲಿಂಪಿಕ್ಸ್ ಅರ್ಹತಾ ಮಹಿಳಾ ಹಾಕಿ ಟೂರ್ನಿಯಲ್ಲಿ 3ನೇ ಸ್ಥಾನದ ಹೋರಾಟದಲ್ಲಿ ಭಾರತ ತಂಡ ಜಪಾನ್ ಎದುರು 0-1 ಗೋಲಿನಿಂದ ಶರಣಾಯಿತು. ಇದರಿಂದ ಸವಿತಾ ಪೂನಿಯಾ ಪಡೆ ಒಲಿಂಪಿಕ್ಸ್ ಟಿಕೆಟ್ನಿಂದ ವಂಚಿತವಾಯಿತು. ಟೂರ್ನಿಯ ಅಗ್ರ 3 ತಂಡಗಳಷ್ಟೇ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದವು.
ಶುಕ್ರವಾರ ನಡೆದ 3ನೇ ಸ್ಥಾನದ ಕಾದಾಟದಲ್ಲಿ ಕನ ಉರಾಟ 6ನೇ ನಿಮಿಷದಲ್ಲೇ ಜಪಾನ್ಗೆ ಮುನ್ನಡೆ ಒದಗಿಸಿದರು. ನಂತರದಲ್ಲಿ ಪಂದ್ಯದ ಉಳಿದ 54 ನಿಮಿಷಗಳ ಕಾಲ ಭಾರತ ಸಮಬಲ ಸಾಧಿಸಲು ನಡೆಸಿದ ಹೋರಾಟ ವ್ಯರ್ಥವಾಯಿತು. ಆರಂಭಿಕ ಆಕ್ರಮಣದ ಬಳಿಕ ರಕ್ಷಣಾತ್ಮಕ ಆಟವಾಡಿದ ಜಪಾನ್ ಪಂದ್ಯದ ಕೊನೆಯವರೆಗೂ ಮುನ್ನಡೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
12ನೇ ನಿಮಿಷದಲ್ಲಿ ಭಾರತಕ್ಕೆ ಗೋಲು ಬಾರಿಸುವ ಅವಕಾಶ ಲಭಿಸಿದ್ದರೂ, ಮೋನಿಕಾ ನೀಡಿದ ಪಾಸ್ನಲ್ಲಿ ಲಾಲ್ರೆಮ್ಸಿಯಾಮಿ ಹೊಡೆದ ಚೆಂಡು ಗೋಲು ಪೆಟ್ಟಿಗೆ ಮೇಲಿನಿಂದ ಹೋಯಿತು. ದ್ವೀತಿಯಾರ್ಧದಲ್ಲಿ ಭಾರತ ಉತ್ತಮ ಹೋರಾಟವನ್ನೇ ತೋರಿದರೂ, ಗೋಲು ಗಳಿಸುವ ಪ್ರಯತ್ನದಲ್ಲಿ ಮಾತ್ರ ಯಶಸ್ಸು ಕಾಣಲಿಲ್ಲ. ಕೊನೇ 11 ನಿಮಿಷಗಳಲ್ಲಿ ದೊರೆತ 3 ಪೆನಾಲ್ಟಿ ಕಾರ್ನರ್ಗಳನ್ನೂ ಭಾರತ ವ್ಯರ್ಥಗೊಳಿಸಿತು.
ಭಾರತ ಗುರುವಾರ ನಡೆದ ಸೆಮಿಫೈನಲ್ನಲ್ಲಿ ಬಲಿಷ್ಠ ಜರ್ಮನಿ ಎದುರು ಜಿದ್ದಾಜಿದ್ದಿನ ಹೋರಾಟ ತೋರಿದರೂ, ಪೆನಾಲ್ಟಿ ಶೂಟೌಟ್ನಲ್ಲಿ 3-4ರಿಂದ ಮಣಿದಿತ್ತು. 3ನೇ ಸ್ಥಾನದೊಂದಿಗೆ ಒಲಿಂಪಿಕ್ಸ್ ಅರ್ಹತೆ ಒಲಿಸಿಕೊಳ್ಳುವ 2ನೇ ಅವಕಾಶವನ್ನೂ ಭಾರತ ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ.
ಭಾರತದ ಮಹಿಳಾ ಹಾಕಿ ತಂಡ ಈ ಮುನ್ನ 3 ಬಾರಿ ಮಾತ್ರ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದೆ. 1980ರ ಬಳಿಕ 2016ರಲ್ಲೇ ಮತ್ತೆ ಅರ್ಹತೆ ಪಡೆದಿತ್ತು. 2021ರ ಟೋಕಿಯೊ ಒಲಿಂಪಿಕ್ಸ್ನಲ್ಲಿ 4ನೇ ಸ್ಥಾನ ಸಂಪಾದಿಸಿದ್ದು ಇದುವರೆಗಿನ ಶ್ರೇಷ್ಠ ನಿರ್ವಹಣೆ ಎನಿಸಿದೆ.