ನವದೆಹಲಿ: ಟೀಮ್ ಇಂಡಿಯಾ ಲೆಜೆಂಡರಿ ಆಟಗಾರ ಗೌತಮ್ ಗಂಭೀರ್ ತಮ್ಮ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಗೌತಮ್ 2023ರವರೆಗೆ ಲಖನೌ ಸೂಪರ್‌ಜೈಂಟ್ಸ್ (LSG) ತಂಡದ ಮೆಂಟರ್ ಆಗಿದ್ದರು ಮತ್ತು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಈ ಬಾರಿ ಅವರು ಕೋಲ್ಕತ್ತ ನೈಟ್ ರೈಡರ್ಸ್ (KKR) ತಂಡಕ್ಕೆ ಶಿಫ್ಟ್ ಆಗಿದ್ದಾರೆ. ಕೆಕೆಆರ್ನ ಹೊಸ ಮೆಂಟರ್ ಆಗಿ ಬಂದ ಬಳಿಕ ತಂಡದ ಸಂಯೋಜನೆಯನ್ನೇ ಬದಲಾಯಿಸುವ ಮೂಲಕ ಕಪ್ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆಟಗಾರರಲ್ಲಿರುವ ಪ್ರತಿಭೆಯನ್ನು ಹೊರತಂದು ಅವರಿಗೆ ಬೇಕಾದ ಬೆಂಬಲ ನೀಡುವ ಮೂಲಕ ಗಂಭೀರ್ ಕೆಕೆಆರ್ಗೆ ಹೊಸ ಹೀರೋ ಎನಿಸಿಕೊಂಡಿದ್ದಾರೆ. 17 ನೇ ಆವೃತ್ತಿಯಲ್ಲಿ ಕೆಕೆಆರ್ ಕಪ್ ಗೆದ್ದ ಬೆನ್ನಲ್ಲೇ ಅವರು ಟೀಮ್ ಇಂಡಿಯಾ ಕೋಚ್ ಆಗುತ್ತಾರೆ ಎಂಬ ವಿಚಾರ ಕ್ರೀಡಾ ವಲಯದಲ್ಲಿ ವ್ಯಾಪಕವಾಗಿ ಹರಿದಾಡಲು ಶುರು ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, ಟೀಮ್ ಇಂಡಿಯಾ ಕೋಚ್ ಹುದ್ದೆ ಸಂಬಂಧ ನಾವು ಈಗಾಗಲೇ ಗೌತಮ್ ಗಂಭೀರ್ ಅವರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಅವರ ಬೇಡಿಕೆಗಳಿಗೆ ಮಂಡಳಿ ಸಮ್ಮತಿಸಿದೆ. ಟಿ20 ವಿಶ್ವಕಪ್ ಬಳಿಕ ಅವರು ರಾಹುಲ್ ದ್ರಾವಿಡ್ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಇದಲ್ಲದೆ ಗೌತಮ್ ಗಂಭೀರ್ ತಂಡದ ಕೋಚ್ ಹುದ್ದೆ ಜೊತೆಗೆ ತಮಗೆ ಬೇಕಾಗಿರುವ ಸಹಾಯಕ ಸಿಬ್ಬಂದಿಯನ್ನು ನೇಮಿಸುವ ಅಧಿಕಾರವನ್ನು ತಮಗೆ ನೀಡಿದರೆ ಮಾತ್ರ ಕೋಚ್ ಹುದ್ದೆ ಅಲಂಕರಿಸುವುದಾಗಿ ಬಿಸಿಸಿಐಗೆ ಷರತ್ತು ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಸಮ್ಮತಿಸಿರುವ ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡುವುದನ್ನು ಬಾಕಿ ಉಳಿಸಿಕೊಂಡಿದೆ. ಟಿ-20 ವಿಶ್ವಕಪ್ ಮುಗಿದ ಬೆನ್ನಲ್ಲೇ ಬಿಸಿಸಿಐ ನೂತನ್ ಕೋಚ್ ಹೆಸರನ್ನು ಪ್ರಕಟಿಸಲಿದೆ ಎಂದು ವರದಿಯಾಗಿದೆ.
ಇತ್ತ ಗೌತಮ್ ಗಂಭೀರ್ ಅವರನ್ನು ಕೆಕೆಆರ್ ಮೆಂಟರ್ ಆಗಿ ಉಳಿಸಿಕೊಳ್ಳಲು ಶಾರುಖ್ ಖಾನ್ ಅವರು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದ್ದು, ಅವರಿಗೆ ಬ್ಲಾಂಕ್ ಚೆಕ್ ಆಫರ್ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಫೈನಲ್ ಮುಗಿದ ಬಳಿಕ ಈ ಬೆಳವಣಿಗೆಗಳು ನಡೆದಿದ್ದು, ಅಂತಿಮವಾಗಿ ಟಿ20 ವಿಶ್ವಕಪ್ ಮುಗಿದ ಬಳಿಕ ಎಲ್ಲದಕ್ಕೂ ತೆರೆ ಬೀಳಲಿದೆ.