ಕ್ರೀಡೆ

VIDEO| ಕೊಹ್ಲಿ ಪರ ಘೋಷಣೆಗೆ ಸಿಟ್ಟಿಗೆದ್ದ ಗಂಭೀರ್​; ಅಭಿಮಾನಿಗಳತ್ತ ಮಧ್ಯದ ಬೆರಳು ತೋರಿಸಿ ಸಂಸದನ ಅಸಭ್ಯ ನಡೆ

ಕೊಲಂಬೋ: ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ, ಬಿಜೆಪಿ ಸಂಸದ ಗೌತಮ್​ ಗಂಭೀರ್​ ಹಾಗೂ ಬ್ಯಾಟ್ಸ್​​ಮನ್​​ ವಿರಾಟ್​ ಕೊಹ್ಲಿ ನಡುವಿನ ಮುನಿಸು ನಿನ್ನೆ ಮೊನ್ನೆಯದಲ್ಲ. ಪ್ರತಿಬಾರಿ ಎದುರಾದಾಗಲು ಈ ಇಬ್ಬರ ನಡುವೆ ಒಂದಿಲ್ಲೊಂದು ವಿಚಾರಕ್ಕೆ ಜಗಳವಾಗಿರುವುದನ್ನ ನಾವು ನೋಡಿದ್ದೇವೆ.

ಇದೀಗ ಹೊಸ ವಿಚಾರ ಒಂದರಲ್ಲಿ ಕೊಹ್ಲಿ ಕೊಹ್ಲಿ ಎಂದು ಕೂಗುತ್ತಿದ್ದ ಅಭಿಮಾನಿಗಳ ಕಡೆಗೆ ಗೌತಮ್​ ಗಂಭೀರ್​ ಅಸಹ್ಯಕರ ಸನ್ನೆಯನ್ನು ತೋರಿಸಿರುವ ಘಟನೆ ನಡೆದಿದೆ. ಶ್ರೀಲಂಕಾದ ಪಲ್ಲೀಕಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಫೋನಿನಲ್ಲಿ ಮಾತನಾಡುತ್ತ ತೆರಳುತ್ತಿರುವ ವೇಳೆ ಅಭಿಮಾನಿಗಳು ಕೊಹ್ಲಿ ಕೊಹ್ಲಿ ಎಂದು ಗಂಭಿರ್​ರನ್ನು ಛೇಡಿಸುತ್ತಾರೆ. ಈ ವೇಳೆ ಇದನ್ನು ಕೇಳಿ ಸಿಟ್ಟಿಗೆದ್ದ ಗಂಭೀರ್​ ಅಭಿಮಾನಿಗಳತ್ತ ಮಧ್ಯದ ಬೆರಳನ್ನು ತೋರಿಸಿ ತೆರಳುತ್ತಾರೆ. ಭಾರತ ಹಾಗೂ ನೇಪಾಳ ನಡುವಿನ ಪಂದ್ಯದ ವೇಳೆ ಘಟನೆ ನಡೆದಿದ್ದು, ಗಂಭೀರ್​ ನಡೆಗೆ ಸಾಕಷ್ಟು ಖಂಡನೆ ವ್ಯಕ್ತವಾಗಿದೆ.

ಇತ್ತ ಗಂಭೀರ್​ ನಡೆ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದು, ಒಬ್ಬ ಮಾಜಿ ಕ್ರಿಕೆಟಿಗ, ಜನಪ್ರತಿನಿಧಿಯಾಗಿ ಇನ್ನೊಬ್ಬರ ಹೆಸರು ಹೇಳುತ್ತಿದ್ದಂತೆ ಅಸಹ್ಯಕರವಾಗಿ ನಡೆದುಕೊಂಡಿರುವುದು ಸರಿಯಲ್ಲ. ಒಂದು ವೇಳೆ ನಿಮ್ಮ ಜಾಗದಲ್ಲಿ ಬೇರೆ ಯಾರೇ ಇದ್ದರು ಹಾಗೆ ಮಾಡುತ್ತಿರಲಿಲ್ಲ. ವಿಶ್ವದಾದ್ಯಂತ ಕೊಹ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರನ್ನು ಕಂಡರೆ ಗೌತಮ್​ ಗಂಭಿರ್ ಏಕೆ ಹೀಗೆ ಆಡುತ್ತಾರೆ ಎಂಬುದು ತಿಳಿದಿಲ್ಲ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.