ಕ್ರೀಡೆ

ಕೆಕೆಆರ್​ಗೆ ಗುಡ್​ಬೈ ಹೇಳಿ ಭಾರತ ತಂಡ ಸೇರಲು ಗೌತಮ್​ ಗಂಭೀರ್​ ಸಿದ್ಧತೆ?

ಕೋಲ್ಕತ: ಕಳೆದ ಐಪಿಎಲ್​ ಟೂರ್ನಿಯ ಚಾಂಪಿಯನ್​ ಕೋಲ್ಕತ ನೈಟ್​ರೈಡರ್ಸ್​ಗೆ ಗುಡ್​ಬೈ ಹೇಳಲು ಮೆಂಟರ್​ ಗೌತಮ್​ ಗಂಭೀರ್​ ಸಜ್ಜಾಗಿದ್ದಾರೆ. ಇದರಿಂದಾಗಿ ಅವರು ಕೋಲ್ಕತದ ಈಡನ್​ ಗಾರ್ಡನ್ಸ್​ ಸ್ಟೇಡಿಯಂ ಆವರಣದಲ್ಲಿ ಕೆಕೆಆರ್​ ಅಭಿಮಾನಿಗಳಿಗೆ ಗುಡ್​ಬೈ ಹೇಳುವ ವಿಡಿಯೋವೊಂದರ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ಈ ವಿಡಿಯೋವನ್ನು ಕೆಕೆಆರ್​ ಫ್ರಾಂಚೈಸಿಯಲ್ಲ, ಗಂಭೀರ್​ರ ವೈಯಕ್ತಿಕ ತಂಡ ಚಿತ್ರೀಕರಿಸಿದೆ. ಇದು ಗಂಭೀರ್​ ಶೀಘ್ರವೇ ಭಾರತ ತಂಡದ ಮುಖ್ಯ ಕೋಚ್​ ಆಗಿ ಸೇರಿಕೊಳ್ಳುವ ಸಿದ್ಧತೆಯಾಗಿದೆ ಎನ್ನಲಾಗಿದೆ.

ಜುಲೈ 27ರಿಂದ ನಡೆಯಲಿರುವ ಶ್ರೀಲಂಕಾ ಪ್ರವಾಸಕ್ಕೆ ಹೊಸ ಕೋಚ್​ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ಈಗಾಗಲೆ ಪ್ರಕಟಿಸಿದ್ದಾರೆ. ಹೀಗಾಗಿ ಗಂಭೀರ್​ ಮುಂದಿನ ಕೆಲದಿನಗಳಲ್ಲಿ ಕೆಕೆಆರ್​ಗೆ ಅಧಿಕೃತ ಗುಡ್​ಬೈ ಹೇಳಿದ ಬೆನ್ನಲ್ಲೇ ಟೀಮ್​ ಇಂಡಿಯಾದ ನೂತನ ಕೋಚ್​ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.