ಕ್ರೀಡೆ

ಅಷ್ಟೊಂದು ಸಾಫ್ಟ್​ ಆಗಿರಲು ಸಾಧ್ಯವಿಲ್ಲ! ಸ್ಯಾಮ್​ ಕೊನ್​ಸ್ಟಾಸ್​ ಮತ್ತು ಆಸೀಸ್​ ಕೋಚ್​ಗೆ ಗೌತಿ ಖಡಕ್ ತಿರುಗೇಟು | Gautam Gambhir

Gambhir Mocks: ಇಲ್ಲಿನ ಸಿಡ್ನಿ ಕ್ರೀಡಾಂಗಣದಲ್ಲಿ ನಡೆದ ಭಾರತ (Team India) ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್​-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಅಂತಿಮ ಕದನದಲ್ಲಿ ಆತಿಥೇಯ ಆಸ್ಟ್ರೇಲಿಯಾ ಪಡೆ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಇದೀಗ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಟಿಕೆಟ್​ ಖಾತ್ರಿ ಪಡಿಸಿಕೊಂಡಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿದೆ. ಆಸೀಸ್​ ವಿರುದ್ಧ ಗೆಲುವು ಸಾಧಿಸುವಲ್ಲಿ ಟೀಮ್ ಇಂಡಿಯಾ ಕಡೆಗೂ ವಿಫಲವಾಗಿದ್ದು, ಕ್ರಿಕೆಟ್ ಪ್ರಿಯರಲ್ಲಿ ತೀವ್ರ ಬೇಸರ ಮೂಡಿಸಿದೆ.

ಇನ್ನು ಐದನೇ ಪಂದ್ಯದಲ್ಲಿ ಆಸೀಸ್​ ಪಡೆಯ ಯುವ ಬ್ಯಾಟರ್​ ಸ್ಯಾಮ್​ ಕೊನ್​ಸ್ಟಾಸ್ ಮತ್ತು ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್​ ಬುಮ್ರಾ ನಡುವಿನ ಮಾತಿನ ಚಕಮಕಿ ಕುರಿತು ಆಸ್ಟ್ರೇಲಿಯಾ ತಂಡದ ಹೆಡ್​ ಕೋಚ್​ ಆ್ಯಂಡ್ರ್ಯೂ ಮೆಕ್​ಡೊನಾಲ್ಡ್​ ಕಿಡಿಕಾರಿದ್ದರು. ಬುಮ್ರಾ ಮಾಡಿದ್ದು ತಪ್ಪು, ಅವರು ನಮ್ಮ ಬ್ಯಾಟರ್​ಗೆ ಮೈದಾನದಲ್ಲೇ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದರು. ಇದಕ್ಕೆ ತಮ್ಮ ಶೈಲಿಯಲ್ಲೇ ಖಡಕ್​ ತಿರುಗೇಟು ನೀಡಿರುವ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್​, ಇಲ್ಲಿ ನೀವು ಅಂದುಕೊಂಡಂತೆ ಮೃದುವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ.

ಗಂಭೀರ್​ ಮಾತಿನ ಪಂಚ್​

"ಕ್ರಿಕೆಟ್ ಬಲಿಷ್ಠ ಯುವಕರು ಆಡುವ​ ಒಂದು ಟಫ್ ಸ್ಫೋರ್ಟ್​. ಅಷ್ಟೊಂದು ಮೃದು ಸ್ವಭಾವದಲ್ಲಿ ಇರಲು ಆಗಲ್ಲ. ಇಲ್ಲಿ ಸ್ಯಾಮ್​ಗೆ ಭಯ ಹುಟ್ಟಿಸುವಂಥದ್ದೇನೂ ಇರಲಿಲ್ಲ ಎಂದು ನಾನು ಭಾವಿಸುತ್ತೇನೆ. ಸ್ಟ್ರೈಕ್​ನಲ್ಲಿದ್ದ ಉಸ್ಮಾನ್ ಖವಾಜಾ ಅನಗತ್ಯವಾಗಿ ಸಮಯ ತೆಗೆದುಕೊಳ್ಳುತ್ತಿದ್ದಾಗ ಜಸ್ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿದ್ದರು. ಈ ವೇಳೆ ಸುಖಾಸುಮ್ಮನೆ ಯಾವ ವಿಚಾರ ಇಲ್ಲದಿದ್ದರೂ ಬುಮ್ರಾ ಬಳಿ ಹೋಗಿದ್ದು ಕೊನ್​ಸ್ಟಾಸ್​ ತಪ್ಪು. ಜಸ್ಪ್ರೀತ್ ಬುಮ್ರಾ ಜತೆಗೆ ಮಾತಿಗಿಳಿಯುವ ಅವಶ್ಯಕತೆಯೇ ಇರಲಿಲ್ಲ ಮತ್ತು ಅಲ್ಲಿ ಅವರಿಬ್ಬರ ನಡುವೆ ಯಾವುದೇ ಮಾತಗೂ ಜಾಗವಿರಲಿಲ್ಲ. ಮಧ್ಯೆ ಪ್ರವೇಶಿಸುವುದು ಅಂಪೈರ್‌ನ ಕೆಲಸವಾಗಿತ್ತು. ಹೀಗಿರುವಾಗ ಆತನಿಗೆ ಅಲ್ಲಿ ಏನು ಕೆಲಸ" ಎಂದು ಗಂಭೀರ್​ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ,(ಏಜೆನ್ಸೀಸ್).