ನವದೆಹಲಿ: ಜೂನ್ 01ರಿಂದ ಆರಂಭವಾಗಲಿರುವ ಟಿ-20 ವಿಶ್ವಕಪ್ ಬಳಿಕ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವರ ಒಪ್ಪಂದ ಕೊನೆಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಹಲವು ಮಾಜಿ ಆಟಗಾರರು ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು, ಇದರಲ್ಲಿ ಪ್ರಮುಖವಾಗಿ ಗೌತಮ್ ಗಂಭೀರ್ ಅವರ ಹೆಸರು ಕೇಳಿ ಬರುತ್ತಿದೆ.
ಟೀಮ್ ಇಂಡಿಯಾದ ಕೋಚ್ ಸ್ಥಾನದ ಮೇಲೆ ದೇಶ ಹಾಗೂ ವಿದೇಶಿ ಆಟಗಾರರು ಕಣ್ಣು ನೆಟ್ಟಿದ್ದಾರೆ. ಈ ವೇಳೆ ಹೆಡ್ ಕೋಚ್ ಸ್ಥಾನಕ್ಕೆ ಕೆಕೆಆರ್ ತಂಡದ ಮೆಂಟರ್ ಗೌತಮ್ ಗಂಭೀರ್ ಅವರು ಕಣ್ಣಿಟ್ಟಿದ್ದು, ಅವರು ಒಂದು ಷರತ್ತನ್ನು ವಿಧಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇತ್ತ ಬಿಸಿಸಿಐ ಕೂಡ ಗಂಭೀರ್ರನ್ನು ಕೋಚ್ ಆಗಿ ನೇಮಿಸುವ ಕುರಿತು ಉತ್ಸುಕತೆ ತೋರುತ್ತಿದ್ದು, ಮೇ 27ರಂದು ಅಂತಿಮ ಚಿತ್ರಣ ಹೊರಬೀಳಲಿದೆ.
ಖ್ಯಾತ ಕ್ರೀಡಾ ವಾಹಿನಿ ವರದಿ ಮಾಡಿರುವ ಪ್ರಕಾರ ಟೀಮ್ ಇಂಡಿಯಾ ಕೋಚ್ ಹುದ್ದೆ ಅಲಂಕರಿಸಲು ಗೌತಮ್ ಗಂಭೀರ್ ಸಿದ್ದರಾಗಿದ್ದು, ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಅವರು ಬಿಸಿಸಿಐಗೆ ಒಂದು ಷರತ್ತು ವಿಧಿಸಿದ್ದಾರೆ ಎಂದು ಹೇಳಲಾಗಿದೆ. ಕೋಚ್ ಹುದ್ದೆಗೆ ತಮ್ಮ ಆಯ್ಕೆಯನ್ನು ಖಚಿತಪಡಿಸಿದರೆ ಮಾತ್ರ ಸ್ಥಾನ ಅಲಂಕರಿಸುವುದಾಗಿ ಗಂಭೀರ್ ಕೇಳಿದ್ದಾರೆ ಎಂದು ಹೇಳಲಾಗಿದೆ. ಈ ಷರತ್ತನ್ನು ಬಿಸಿಸಿಐ ಒಪ್ಪಿದರೆ ಮಾತ್ರ ಕೋಚ್ ಹುದ್ದೆ ಅಲಂಕರಿಸುವುದಾಗಿ ಗೌತಮ್ ಹೇಳಿರುವುದಾಗಿ ವರದಿಯಾಗಿದೆ. ಈ ಸಂಬಂಧ ಬಿಸಿಸಿಐನ ಸದಸ್ಯರು ಒಂದು ಸುತ್ತಿನ ಸಭೆ ನಡೆಸಿದ್ದು, ಅಂತಿಮವಾಗಿ ಮೇ 27ರಂದು ಸ್ಪಷ್ಟ ಚಿತ್ರಣ ಹೊರಬೀಳಲಿದೆ.
17ನೇ ಆವೃತ್ತಿಯ ಐಪಿಎಲ್ನಲ್ಲಿ ಕೆಕೆಆರ್ ತಂಡದ ಮೆಂಟರ್ ಆಗಿ ಅಧಿಕಾರ ವಹಿಸಿಕೊಂಡಿರುವ ಗಂಭೀರ್ ಟೀಮ್ಅನ್ನು ಯಶಸ್ವಿಯಾಗಿ ಮುಂದುವರೆಸಿದ್ದಾರೆ. ತಂಡದ ಸಂಯೋಜನೆ ವಿಚಾರಕ್ಕೆ ಹೆಚ್ಚು ಗಮನ ಸೆಳೆದಿರುವ ಗಂಭೀರ್ ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕೆ ಹಾಟ್ ಫೇವರಿಟ್ ಎನ್ನಿಸಿದ್ದಾರೆ. ಅಂತಿಮವಾಗಿ ಟೀಮ್ ಇಂಡಿಯಾ ಕೋಚ್ ಹುದ್ದೆಯನ್ನು ಯಾರು ಅಲಂಕರಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.