ಕ್ರೀಡೆ

ನಿಮ್ಮ ವರ್ತನೆ ಸರಿಯಲ್ಲ, ದೋಸ್ತಿ ಮೈದಾನದ ಹೊರಗಿರಲಿ! ಹೀಗಂದಿದ್ಯಾಕೆ ಗೌತಮ್​ ಗಂಭೀರ್?

ಪಲ್ಲೆಕಿಲೆ: ಏಷ್ಯಾಕಪ್ ಏಕದಿನ ಟೂರ್ನಿಯ ಅತ್ಯಂತ ಕುತೂಹಲಕಾರಿ ಹಣಾಹಣಿಯಾದ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಭಾರಿ ಮಳೆಯಿಂದಾಗಿ ರದ್ದುಗೊಂಡಿದೆ. ಉಭಯ ತಂಡಗಳಿಗೆ ಅಂಕ ಹಂಚಿಕೆಯಾಗಿದೆ. ಒಂದೆಡೆ ಮಳೆರಾಯ ಅಬ್ಬರಿಸುತ್ತಿದ್ದರೆ, ಇನ್ನೊಂದೆಡೆ ಸಾಂಪ್ರದಾಯಿಕ ಎದುರಾಳಿ ತಂಡಗಳ ಆಟಗಾರರು ಆತ್ಮೀಯ ಕ್ಷಣಗಳಲ್ಲಿ ತೊಡಗಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಸಹ ಆಗಿವೆ. ಇದರ ನಡುವೆ ಭಾರತ-ಪಾಕ್​ ಆಟಗಾರರ ಸ್ನೇಹಮಯ ಕ್ಷಣಗಳ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್​ ಗಂಭೀರ್ ಆಡಿರುವ ಮಾತು ಕೂಡ ಬಹಳ ಚರ್ಚೆಗೆ ಕಾರಣವಾಗಿದೆ.​

ಪಂದ್ಯದ ಸಮಯದಲ್ಲಿ ಈ ರೀತಿಯಾದ ಪ್ರದರ್ಶನ ಒಳ್ಳೆಯದಲ್ಲ ಎಂದು ಗೌತಮ್​ ಗಂಭೀರ್​ ಹೇಳಿದ್ದಾರೆ. ಪಂದ್ಯದ ಬಿಡುವಿನ ವೇಳೆ ಸ್ಟಾರ್​ ಸ್ಪೋರ್ಟ್ಸ್​ ಚಾಟ್​ನಲ್ಲಿ ಮಾತನಾಡಿದ ಗಂಭೀರ್​, ಭಾರತದ ತಂಡ 140 ಕೋಟಿ ಜನರನ್ನು ಪ್ರತಿನಿಧಿಸುತ್ತಿರುವಾಗ ಕ್ರೀಡಾಂಗಣದ ಒಳಗೆ ಎದುರಾಳಿ ತಂಡದ ಆಟಗಾರರ ಜತೆ ಇಂತಹ ಸ್ನೇಹಮಯ ವರ್ತನೆಯನ್ನು ಪ್ರದರ್ಶನ ಮಾಡಬಾರದು. ಇಂತಹದ್ದನ್ನು ಮೈದಾನದಿಂದ ಹೊರಗಡೆ ಇಟ್ಟುಕೊಳ್ಳಬೇಕು ಎಂದಿದ್ದಾರೆ.

ನೀವು ನಿಮ್ಮ ರಾಷ್ಟ್ರೀಯ ತಂಡದ ಪರವಾಗಿ ಮೈದಾನದಲ್ಲಿ ಆಡುವಾಗ, ನೀವು ಖಂಡಿತವಾಗಿ ಮೈದಾನದಿಂದ ಆಚೆಗೆ ನಿಮ್ಮ ಸ್ನೇಹವನ್ನು ಇಟ್ಟುಕೊಳ್ಳಬೇಕು. ಉಭಯ ಆಟಗಾರರ ಕಣ್ಣುಗಳಲ್ಲಿ ಕ್ರೀಡಾ ಹೋರಾಟದ ಕಿಚ್ಚು ಇರುತ್ತದೆ. ಆರು ಅಥವಾ ಏಳು ಗಂಟೆಗಳ ಕ್ರಿಕೆಟ್ ನಂತರ ನೀವು ನಿಮಗೆ ಬೇಕಾದಷ್ಟು ಸ್ನೇಹಪರರಾಗಬಹುದು. ಆದರೆ, ಈ ಆರೇಳು ಗಂಟೆ ತುಂಬಾ ಮುಖ್ಯ. ಏಕೆಂದರೆ, ನೀವು ನಿಮ್ಮನ್ನು ಮಾತ್ರ ಪ್ರತಿನಿಧಿಸುತ್ತಿಲ್ಲ, ಬದಲಾಗಿ ಕೋಟ್ಯಂತರ ಜನರಿರುವ ರಾಷ್ಟ್ರವನ್ನು ಪ್ರತಿನಿಧಿಸುತ್ತಿರುತ್ತೀರಿ ಎಂದು ಗಂಭೀರ್​ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕೆಲ ಆಟಗಾರರು ಎದುರಾಳಿ ತಂಡದ ಆಟಗಾರರನ್ನು ಆಟದ ಸಮಯದಲ್ಲಿ ಬೆನ್ನು ತಟ್ಟುವುದು ಮತ್ತು ಅಪ್ಪಿಕೊಳ್ಳುವುದು ಸೇರಿದಂತೆ ಆತ್ಮೀಯತೆ ತೋರುವ ಅನೇಕ ಉದಾಹರಣೆಗಳನ್ನು ನೋಡುತ್ತಿದ್ದೇವೆ. ಆದರೆ, ಕೆಲವು ವರ್ಷಗಳ ಹಿಂದೆ ಇದು ಇರಲಿಲ್ಲ ಎಂದು ಹೇಳಿದ ಗಂಭೀರ್​, ಪಾಕಿಸ್ತಾನದ ಮಾಜಿ ಆಟಗಾರ ಕಮ್ರಾನ್​ ಅಕ್ಮಲ್​ ಜತೆಗಿದ್ದ ತಮ್ಮ ಸ್ನೇಹವನ್ನು ಉದಾಹರಣೆಯಾಗಿ ನೀಡಿದರು.

ನಾವಿಬ್ಬರು ಒಳ್ಳೆಯ ಸ್ನೇಹಿತರು. ವಾಸ್ತವ ಏನೆಂದರೆ ನಾನು ಅವರಿಗೆ ಬ್ಯಾಟ್​ ಉಡುಗೊರೆ ನೀಡಿದ್ದೇನೆ ಮತ್ತು ಅವರು ಕೂಡ ನನಗ ಬ್ಯಾಟ್​ ಉಡುಗೊರೆ ನೀಡಿದ್ದಾರೆ. ಅಕ್ಮಲ್​ ಕೊಟ್ಟ ಬ್ಯಾಟ್​ನಿಂದಲೇ ನಾನು ಒಂದು ಸೀಸನ್​ ಆಡಿದ್ದೇನೆ. ಇತ್ತೀಚೆಗೆ ನಾನು ಗಂಟೆಗಟ್ಟಲೆ ಅವರೊಂದಿಗೆ ಮಾತನಾಡಿದ್ದೇನೆ ಎಂದರು. ಇದೇ ಸಂದರ್ಭದಲ್ಲಿ ಗಂಭೀರ್, ಆಟಗಾರರ ನಡುವಿನ ಸ್ಲೆಡ್ಜಿಂಗ್ ವಿಷಯದ ಬಗ್ಗೆಯೂ ಪ್ರಸ್ತಾಪಿಸಿದರು, ಆಟಗಾರರ ನಡುವಿನ ತಮಾಷೆ ಉತ್ತಮವಾಗಿದೆ. ಆದರೆ, ಅದು ಎಂದಿಗೂ ವೈಯಕ್ತಿಕವಾಗಬಾರದು ಎಂದು ಹೇಳಿದರು.

ಪಂದ್ಯದ ವಿಚಾರಕ್ಕೆ ಬಂದರೆ, ಪಲ್ಲೆಕಿಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ಶನಿವಾರ (ಸೆ.02) ನಡೆದ ಪಂದ್ಯದಲ್ಲಿ ಮಳೆ ಭೀತಿಯ ನಡುವೆಯೂ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಒಂದು ಹಂತದಲ್ಲಿ 66 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಇಶಾನ್ ಕಿಶನ್-ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತ ಜತೆಯಾಟ ಆಡಿದ ಫಲವಾಗಿ ಭಾರತ ತಂಡ 48.5 ಓವರ್‌ಗಳಲ್ಲಿ 266 ರನ್‌ಗಳಿಗೆ ಸಮಾಧಾನ ಕಂಡಿತು. ಹೊಸ ಚೆಂಡಿನಲ್ಲಿ ಮತ್ತು ಸ್ಲಾಗ್ ಓವರ್‌ಗಳಲ್ಲಿ ಪಾಕ್ ಎಡಗೈ ವೇಗಿ ಶಾಹೀನ್ ಷಾ ಅಫ್ರಿದಿ (35ಕ್ಕೆ 4) ಬಿಗಿ ಬೌಲಿಂಗ್ ದಾಳಿಯೊಂದಿಗೆ ಟೀಮ್ ಇಂಡಿಯಾವನ್ನು ಕಾಡಿದರು. ಪ್ರತಿಯಾಗಿ ಪಾಕಿಸ್ತಾನದ ಚೇಸಿಂಗ್‌ಗೆ ಮಳೆ ಅಡ್ಡಿಪಡಿಸಿತು. ಭಾರತೀಯ ಕಾಲಮಾನ ರಾತ್ರಿ 9.20ಕ್ಕೆ ಮಳೆ ಕೊಂಚ ಬಿಡುವು ನೀಡಿದಾಗ ಡಿಎಲ್‌ಎಸ್ ನಿಯಮದನ್ವಯ ಪಾಕಿಸ್ತಾನಕ್ಕೆ 36 ಓವರ್‌ಗಳಲ್ಲಿ 226 ರನ್ ಗುರಿ ನೀಡಲಾಯಿತು. ಆದರೆ, ಮತ್ತೆ ಮಳೆ ಸುರಿಯಿತು. ಇದರಿಂದಾಗಿ ಅಂತಿಮವಾಗಿ ಅಂಪೈರ್‌ಗಳು ಪಂದ್ಯ ರದ್ದುಗೊಳಿಸಲು ನಿರ್ಧರಿಸಿದರು. ಡಕ್ವರ್ತ್-ಲೂಯಿಸ್ ನಿಯಮದನ್ವಯ ಸ್ಪಷ್ಟ ಫಲಿತಾಂಶ ಕಾಣಲು ಪಾಕಿಸ್ತಾನ ತಂಡ ಕನಿಷ್ಠ 20 ಓವರ್ ಆಡುವುದು ಅಗತ್ಯವಾಗಿತ್ತು. ಡಿಎಲ್‌ಎಸ್ ನಿಯಮದನ್ವಯ ಪಾಕ್ 20 ಓವರ್‌ಗಳಲ್ಲಿ 155 ರನ್ ಗಳಿಸಬೇಕಿತ್ತು. ಆದರೆ, ಪಾಕಿಸ್ತಾನಕ್ಕೆ ಚೇಸಿಂಗ್ ಮಾಡಲು ಅವಕಾಶ ಲಭಿಸಲಿಲ್ಲ. ಇದರಿಂದ ಉಭಯ ತಂಡಗಳು ತಲಾ 1 ಅಂಕ ಹಂಚಿಕೊಂಡವು ಮತ್ತು ಪಾಕಿಸ್ತಾನ ತಂಡದ ಸೂಪರ್-4 ಪ್ರವೇಶವೂ ಖಚಿತಗೊಂಡಿದೆ. ಭಾರತ ಸೂಪರ್-4ಗೆ ಏರಲು ನೇಪಾಳ ವಿರುದ್ಧದ ಮುಂದಿನ ಪಂದ್ಯದಲ್ಲಿ ಗೆಲ್ಲಬೇಕಾಗಿದೆ. (ಏಜೆನ್ಸೀಸ್​)