ಕ್ರೀಡೆ

ಆಟಗಾರರ ನಡುವೆ ಒಗ್ಗಟ್ಟಿಲ್ಲದಿರುವುದೇ ಸೋಲಿಗೆ ಕಾರಣವಾಯ್ತು; ಶಾಕಿಂಗ್​ ಹೇಳಿಕೆ ಕೊಟ್ಟ ಗ್ಯಾರಿ ಕರ್ಸ್ಟನ್​

ನವದೆಹಲಿ: ಈ ಬಾರಿಯ ಚುಟುಕು ವಿಶ್ವಸಮರವನ್ನು ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದ ಹಾಲಿ ರನ್ನರ್​ಅಪ್​ ಆಗಿ ಕಣಕ್ಕಿಳಿದಿದ್ದ ಪಾಕಿಸ್ತಾನ ಕ್ರಿಕೆಟ್​ ತಂಡವು ಕಳಪೆ ಪ್ರದರ್ಶನದಿಂದಾಗಿ ಸೂಪರ್ 08 ಹಂತಕ್ಕೇರದೆ ಟೂರ್ನಿಯಿಂದ ಹೊರ ಬಿದ್ದಿದೆ. ಕ್ರಿಕೆಟ್​ ಶಿಶು ಯುಎಸ್​ಎ, ಐರ್ಲೆಂಡ್​ ವಿರುದ್ಧದ ಸರಣಿಗಳಲ್ಲಿ ಸೋತ ಬಳಿಕ ತೀವ್ರ ಟೀಕೆಗೆ ಗುರಿಯಾಗಿದ್ದ ಪಾಕಿಸ್ತಾನ ತಂಡದಲ್ಲಿ ಎಲ್ಲವೂ ಸರಿ ಇಲ್ಲವೆಂಬಂತೆ ಕಾಣುತ್ತಿತ್ತು. ಅದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಕೋಚ್​ ಗ್ಯಾರಿ ಕರ್ಸ್ಟನ್​ ನೀಡಿರುವ ಹೇಳಿಕೆ ಇದಕ್ಕೆ ಪುಷ್ಠಿ ನೀಡಿದೆ.

ಈ ಕುರಿತು ಮಾತನಾಡಿರುವ ಗ್ಯಾರಿ ಕರ್ಸ್ಟನ್​, ಪಾಕಿಸ್ತಾನ ಕ್ರಿಕೆಟ್​ ಟೀಮ್​ನಲ್ಲಿ ಯಾವುದೇ ಒಗ್ಗಟ್ಟಿಲ್ಲ. ಅವರು ಅದನ್ನು ಸುಮ್ಮನೇ ತಂಡ ಎಂದು ಕರೆಯುತ್ತಾರೆ. ಎಲ್ಲಾ ಆಟಗಾರರ ನಡುವೆ ಒಂದಿಲ್ಲೊಂದು ವಿಚಾರಕ್ಕೆ ವೈಮನಸ್ಸಿದೆ. ನಾನು ಈವರೆಗೂ ಅನೇಕ ತಂಡಗಳನ್ನು ನೋಡಿದ್ದೇನೆ. ಆದರೆ, ಈ ರೀತಿಯ ತಂಡವನ್ನು ಎಂದಿಗೂ ನೋಡಿಲ್ಲ.

ನನ್ನ ಪ್ರಕಾರ ನ್ಯೂಯಾರ್ಕ್​ ಪಿಚ್​ನಲ್ಲಿ 120 ರನ್​ ಸುಲಭದ ಗುರಿ ಅಲ್ಲಾ ಎಂದು ಭಾವಿಸಿದ್ದೆ. ಏಕೆಂದರೆ ಭಾರತದಂತಹ ತಂಡ 120 ರನ್​ ಗಳಿಸಿದರೆ ಅವರು ಅದನ್ನು ರಕ್ಷಿಸಿಕೊಳ್ಳುತ್ತಾರೆ ಎಂಬುದು ಮೊದಲೇ ತಿಳಿದಿತ್ತು. ಈ ಬಾರಿಯ ವಿಶ್ವಕಪ್​ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ತಂಡ ವಿಫಲವಾಗಿದೆ. ನನ್ನ ಪ್ರಕಾರ ಆಟಗಾರರ ನಡುವಿನ ಸಮನ್ವಯ ಹಾಗೂ ಒಗ್ಗಟ್ಟಿನ ಕೊರತೆಯೇ ತಂಡದ ಸೋಲಿಗೆ ಕಾರಣ ಎಂದು ಪಾಕಿಸ್ತಾನ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ಗ್ಯಾರಿ ಕರ್ಸ್ಟನ್​ ಹೇಳಿದ್ದಾರೆ.

ಟೀಮ್​ ಇಂಡಿಯಾದ ಯಶಸ್ವಿ ಕೋಚ್​ಗಳಲ್ಲಿ ಒಬ್ಬರಾಗಿದ್ದ ಗ್ಯಾರಿ ಕರ್ಸ್ಟನ್​ 2011ರ ಏಕದಿನ ವಿಶ್ವಕಪ್​ ಸೇರಿದಂತೆ ಪ್ರತಿಷ್ಠಿತ ಟೂರ್ನಿಗಳಲ್ಲಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಐಪಿಎಲ್​ನಲ್ಲಿ ಆರ್​ಸಿಬಿ ಹಾಗೂ ಗುಜರಾತ್​ ತಂಡದ ಕೋಚ್​ ಆಗಿ ಅವರು ಕೆಲಸ ಮಾಡಿದ್ದಾರೆ.