ಕ್ರೀಡೆ

ಆಟದ ದಿಕ್ಕನೇ ಬದಲಿಸುವ ಡೆಲ್ಲಿ ಕ್ಯಾಪಿಟಲ್ಸ್​ನ ಮೂವರು ಸ್ಟಾರ್ ಆಟಗಾರರು ಇವರೇ ನೋಡಿ! | Game Changers

Game Changers: ಎರಡು ದಿನಗಳ ಕಾಲ (ನ.24,25) ನಡೆದ ಐಪಿಎಲ್​ ಹರಾಜಿನಲ್ಲಿ ಸ್ಟಾರ್​ ಆಟಗಾರರ ಜತೆ ಯುವ ಕ್ರಿಕೆಟಿಗರನ್ನು ಖರೀದಿ ಮಾಡಿದ 10 ಫ್ರಾಂಚೈಸಿಗಳು, ನಾ ಮುಂದು ತಾ ಮುಂದು ಎಂದು ಬಿಡ್ಡಿಂಗ್​ನಲ್ಲಿ ಪೈಪೋಟಿ ಕೊಟ್ಟು ತಂಡಕ್ಕೆ ಅಗತ್ಯವಿದ್ದ ಆಟಗಾರರನ್ನು ಕರೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಕ್ರಿಕೆಟ್ ಪ್ರಿಯರಿಗೆಲ್ಲ ಗೊತ್ತಿರುವ ಸಂಗತಿ. ಸದ್ಯ ಹರಾಜು ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, 2025ರ ಏಪ್ರಿಲ್​-ಮೇ ತಿಂಗಳಲ್ಲಿ ನಡೆಯುವ ಪಂದ್ಯಗಳತ್ತ ಎಲ್ಲರ ಚಿತ್ತ ಮೂಡಿದೆ. ಇನ್ನು 10 ತಂಡಗಳ ಪೈಕಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ (Game Changers) ವಿಶೇಷವಾಗಿ ಕಂಡಿದ್ದು, ನಿರೀಕ್ಷಿಸಿದ ಆಟಗಾರರೇ ತಮ್ಮ ತಂಡದಲ್ಲಿರುವುದು ಫ್ರಾಂಚೈಸಿ ಅಭಿಮಾನಿಗಳ ಕೌತುಕವನ್ನು ದುಪ್ಪಟ್ಟಾಗಿಸಿದೆ. ​

ಬಿಡ್ಡಿಂಗ್​ ಪ್ರಕ್ರಿಯೆಯಲ್ಲಿ ಇತರೆ ಫ್ರಾಂಚೈಸಿಗಳಿಗೆ ಸೆಡ್ಡು ಹೊಡೆದ ಡೆಲ್ಲಿ ಕ್ಯಾಪಿಟಲ್ಸ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಕೋಲ್ಕತ ನೈಟ್​ ರೈಡರ್ಸ್​ಗೆ ಬೇಡವಾದ ಆಟಗಾರರನ್ನೇ ತನ್ನ ತಂಡಕ್ಕೆ ಕರೆದುಕೊಂಡಿದೆ. ಸ್ಟಾರ್ ಬ್ಯಾಟರ್ ಆಗಿರುವ ಕೆ.ಎಲ್. ರಾಹುಲ್​ರನ್ನು ಖರೀದಿಸಿದ ಡಿಸಿಗೆ, ತಂಡದ ಪರ ಉತ್ತಮ ಓಪನರ್ ಮತ್ತು ಕ್ಯಾಪ್ಟನ್ಸಿ ನಿಭಾಯಿಸುವ ಆಟಗಾರನೇ ಸಿಕ್ಕಿರುವುದು ಖುಷಿ ನೀಡಿದೆ. ಆದರೆ, ನಾಯಕತ್ವ ರಾಹುಲ್​ಗೆ ಹಸ್ತಾಂತರಿಸುವುದು, ಬಿಡುವುದು ತಂಡಕ್ಕೆ ಬಿಟ್ಟದ್ದು. ಇನ್ನು ರಾಹುಲ್ ಜತೆಗೆ ಇಬ್ಬರು ವೇಗಿಗಳ ಎಂಟ್ರಿ ಟೀಮ್​ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದೇ ನಿರೀಕ್ಷಿಸಲಾಗಿದೆ.

ಮಿಚೆಲ್ ಸ್ಟಾರ್ಕ್​

ಕಳೆದ ಬಾರಿ ಕೆಕೆಆರ್​ ಟ್ರೋಫಿ ಗೆಲುವಿನ ಭಾಗವಾಗಿದ್ದ ಮಿಚೆಲ್ ಸ್ಟಾರ್ಕ್​, ಆಸ್ಟ್ರೇಲಿಯಾ ತಂಡಕ್ಕೆ ಅದೃಷ್ಟದ ಬೌಲರ್​. ಯಾರ್ಕರ್, ಸ್ವಿಂಗ್​ ಬೌಲಿಂಗ್​ಗೆ ನಿಸ್ಸೀಮರಾದ ಸ್ಟಾರ್ಕ್​, ಕಡೆಯ ಓವರ್​ಗಳಲ್ಲಿ ಟೀಮ್​ಗೆ ಆಸರೆಯಾಗುವಂತ ಅತ್ಯುತ್ತಮ ವೇಗಿ ಎಂಬುದು ಕ್ರಿಕೆಟ್​ ಲೋಕಕ್ಕೆ ಗೊತ್ತಿರುವ ಸಂಗತಿ. ಈ ವಿಷಯವೇ ಡೆಲ್ಲಿಗೂ ಪ್ಲಸ್​ ಆಗಲಿದ್ದು, ತಂಡಕ್ಕೆ ಮಿಚೆಲ್​ ಗೇಮ್ ಚೇಂಜರ್​ ಆಗಿ ಹೊರಹೊಮ್ಮುವ ಸಾಧ್ಯತೆಗಳು ಹೆಚ್ಚಿವೆ ಎಂದು ಕ್ರಿಕೆಟ್​ ವರದಿ ಉಲ್ಲೇಖಿಸಿದೆ.

ಟಿ. ನಟರಾಜನ್​

ಒಂದಷ್ಟು ವರ್ಷ ಕಾವ್ಯ ಮಾರನ್​ ಮಾಲೀಕತ್ವದ ಸನ್​ರೈಸರ್ಸ್​ ಹೈದರಾಬಾದ್​ ಪರ ಆಡಿದ್ದ ಭಾರತೀಯ ವೇಗಿ ಟಿ. ನಟರಾಜನ್​, ಎದುರಾಳಿಗಳ ವಿಕೆಟ್ ಕಬಳಿಸುವಲ್ಲಿ ಉತ್ತಮ ಬೌಲಿಂಗ್ ಹೊಂದಿದ್ದಾರೆ. ಈ ಬಾರಿ ನಟರಾಜನ್​ ಅವರನ್ನು ಬಿಡ್ಡಿಂಗ್​ ಪ್ರಕ್ರಿಯೆಯಲ್ಲಿ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್​, ಟೀಮ್ ಇಂಡಿಯಾ ವೇಗಿ ತಮಗೆ ಅದೃಷ್ಟ ತಂದುಕೊಡಲಿದ್ದಾರೆ ಎಂದೇ ನಿರೀಕ್ಷಿಸಿದೆ. ಇವರ ಬೌಲಿಂಗ್ ಹೇಗೆ ಪ್ರಭಾವ ಬೀರಲಿದೆ? ಗೇಮ್​ ಚೇಂಜರ್ ಆಗಲಿದ್ದಾರಾ​? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).