ಕ್ರೀಡೆ

ಆಸೀಸ್​ ಪ್ರವಾಸಕ್ಕೆ ತೆರಳುವ ಮುನ್ನ ರಿಕಿ ಪಾಂಟಿಂಗ್​ಗೆ ತಿರುಗೇಟು ನೀಡಿದ ಗಂಭೀರ್​!

ಮುಂಬೈ: ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಫಾರ್ಮ್​ ಮತ್ತು ತಂಡದಲ್ಲಿನ ಸ್ಥಾನದ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಆಸೀಸ್​ ಮಾಜಿ ನಾಯಕ ರಿಕಿ ಪಾಂಟಿಂಗ್​ಗೆ ತಿರುಗೇಟು ನೀಡಿರುವ ಟೀಮ್​ ಇಂಡಿಯಾದ ಮುಖ್ಯ ಕೋಚ್​ ಗೌತಮ್​ ಗಂಭೀರ್​, "ಭಾರತೀಯ ಕ್ರಿಕೆಟ್​ನಲ್ಲಿ ಪಾಂಟಿಂಗ್​ಗೆ ಏನು ಕೆಲಸ? ಅವರು ಆಸೀಸ್​ ಕ್ರಿಕೆಟ್​ನತ್ತ ಗಮನಹರಿಸಲಿ' ಎಂದರು. 36 ವರ್ಷದ ಕೊಹ್ಲಿ ಕಳೆದ 6 ಟೆಸ್ಟ್​ಗಳಲ್ಲಿ ಕೇವಲ 22.72ರ ಸರಾಸರಿಯಲ್ಲಿ ರನ್​ ಗಳಿಸಿದ್ದಾರೆ. 2019ರ ನಂತರದಲ್ಲಿ ಕೊಹ್ಲಿ ಟೆಸ್ಟ್​ನಲ್ಲಿ ಕೇವಲ 2 ಶತಕ ಸಿಡಿಸಿದ್ದಾರೆ.

ರೋಹಿತ್​, ಕೊಹ್ಲಿ ಇನ್ನೂ ತುಡಿತವನ್ನು ಹೊಂದಿದ್ದಾರೆ

ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿ ಕಳೆದ ಕಿವೀಸ್​ ವಿರುದ್ಧದ ಸರಣಿಯಲ್ಲಿ ಕ್ರಮವಾಗಿ 91 ಮತ್ತು 93 ರನ್​ ಮಾತ್ರ ಗಳಿಸಿದ್ದರು. ಆದರೆ ಅವರಿಬ್ಬರ ಫಾರ್ಮ್ ಬಗ್ಗೆ ಯಾವುದೇ ಕಳವಳ ಹೊಂದಿಲ್ಲ. ಅವರಿಬ್ಬರು ಭಾರತೀಯ ಕ್ರಿಕೆಟ್​ನಲ್ಲಿ ಸಾಕಷ್ಟು ಸಾಧನೆಗಳನ್ನು ತೋರಿದ್ದಾರೆ. ಮುಂದೆಯೂ ಸಾಧನೆಗಳನ್ನು ಮುಂದುವರಿಸಲಿದ್ದಾರೆ. ಅವರಿಬ್ಬರೂ ಈಗಲೂ ಕಠಿಣ ಪರಿಶ್ರಮ ಪಡುತ್ತಿದ್ದಾರೆ ಮತ್ತು ತುಡಿತವನ್ನು ಹೊಂದಿರುವುದೇ ನನಗೆ ಮುಖ್ಯವಾದುದು ಎಂದು ಗಂಭೀರ್​ ಹೇಳಿದರು.

ನಿತೀಶ್​ ಮೇಲೆ ಭರವಸೆ

ಭಾರತ ತಂಡ ಆಸೀಸ್​ಗೆ ವೇಗದ ಬೌಲಿಂಗ್​ ಆಲ್ರೌಂಡರ್​ ಆಗಿ ಯುವ ಆಟಗಾರ ನಿತೀಶ್​ ಕುಮಾರ್​ ರೆಡ್ಡಿ ಅವರನ್ನು ಕರೆದೊಯ್ದಿದೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅವರು ಕೇವಲ 21ರ ರನ್​ ಸರಾಸರಿ ಹೊಂದಿದ್ದಾರೆ. ಅನುಭವಿ ಶಾರ್ದೂಲ್​ ಠಾಕೂರ್​ರನ್ನು ಕಡೆಗಣಿಸಿ ನಿತೀಶ್​ರನ್ನು ಆರಿಸಿದ ಬಗ್ಗೆ ಪ್ರಶ್ನೆಗಳು ಎದುರಾದಾಗ ಗಂಭೀರ್​, "ದೇಶದಲ್ಲಿರುವ ಅತ್ಯುತ್ತಮ ಆಟಗಾರರನ್ನೇ ನಾವು ಆರಿಸಿದ್ದೇವೆ. ನಿತೀಶ್​ ಪ್ರತಿಭಾನ್ವಿತರಾಗಿದ್ದಾರೆ. ಅವರು ಉತ್ತಮ ನಿರ್ವಹಣೆ ತೋರುವ ವಿಶ್ವಾಸವಿದೆ' ಎಂದರು. ಈ ಮೂಲಕ ಶಾರ್ದೂಲ್​ಗೆ ತಂಡಕ್ಕೆ ಮರಳುವ ಬಾಗಿಲು ಮುಚ್ಚಿದೆ ಎಂದು ಸ್ಪಷ್ಟಪಡಿಸಿದರು. ಶಾರ್ದೂಲ್​ ಕಳೆದ ಆಸೀಸ್​ ಪ್ರವಾಸದ ಗಾಬಾ ಟೆಸ್ಟ್​ನಲ್ಲಿ ಅಮೂಲ್ಯ ವಿಕೆಟ್​ ಮತ್ತು ಅರ್ಧಶತಕ ಗಳಿಸಿ ಮಿಂಚಿದ್ದರು.

ವೇಗಿಗಳ ಮೇಲೆ ವಿಶ್ವಾಸ

ಮೊಹಮದ್​ ಶಮಿ ಗೈರಿನಲ್ಲಿ ಜಸ್​ಪ್ರೀತ್​ ಬುಮ್ರಾ ಆಸೀಸ್​ನಲ್ಲಿ ಹೆಚ್ಚಿನ ಕಾರ್ಯದೊತ್ತಡ ಎದುರಿಸಲಿದ್ದಾರೆ ಎಂಬ ಅಭಿಪ್ರಾಯ ತಳ್ಳಿಹಾಕಿದ ಗಂಭೀರ್​. ಅನನುಭವಿಗಳಾದ ಹರ್ಷಿತ್​ ರಾಣಾ, ಪ್ರಸಿದ್ಧ ಕೃಷ್ಣ ಮತ್ತು ಆಕಾಶ್​ ದೀಪ್​ ಉತ್ತಮ ನಿರ್ವಹಣೆ ತೋರುವ ವಿಶ್ವಾಸ ವ್ಯಕ್ತಪಡಿಸಿದರು. "ನಾವು ಗುಣಮಟ್ಟದ ವೇಗಿಗಳನ್ನು ಹೊಂದಿದ್ದು, ನಮ್ಮ ವೇಗದ ಬೌಲಿಂಗ್​ ವಿಭಾಗ ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿದೆ' ಎಂದರು.