ಕ್ರೀಡೆ

ಕೋಚ್​ ಹುದ್ದೆಗೇರಿದ ಬೆನ್ನಲ್ಲೇ ಭಾರತೀಯ ಕ್ರಿಕೆಟಿಗರಿಗೆ ಖಡಕ್​ ಸೂಚನೆಯೊಂದನ್ನು ನೀಡಿದ ಗಂಭೀರ್​!

ನವದೆಹಲಿ: ಕ್ರಿಕೆಟಿಗರು ಟೆಸ್ಟ್​ ಅಥವಾ ಸೀಮಿತ ಓವರ್​ ಪಂದ್ಯಗಳನ್ನು ಆಡಲು ವಿಶೇಷಜ್ಞರಾಗಿ ಉಳಿದುಕೊಳ್ಳುವ ಬದಲಾಗಿ ಎಲ್ಲ ಮೂರೂ ಮಾದರಿಯಲ್ಲಿ ಆಡಬೇಕು ಎಂದು ಭಾರತ ತಂಡದ ಹೊಸ ಮುಖ್ಯ ಕೋಚ್​ ಗೌತಮ್​ ಗಂಭೀರ್​ ಹೇಳಿದ್ದಾರೆ.

ಕೋಚ್​ ಆಗಿ ನೇಮಕಗೊಂಡ ಬಳಿಕ ಕ್ರೀಡಾ ವಾಹಿನಿಯೊಂದಕ್ಕೆ ನೀಡಿರುವ ಮೊದಲ ಸಂದರ್ಶನದಲ್ಲಿ ಗಂಭೀರ್​, "ಅಂತಾರಾಷ್ಟ್ರೀಯ ಕ್ರಿಕೆಟಿಗರು ಎಲ್ಲ ಮಾದರಿಯ ಕ್ರಿಕೆಟ್​ಗೆ ಯೋಗ್ಯರಾಗಿರುತ್ತಾರೆ. ಯಾವುದೇ ಕ್ರಿಕೆಟಿಗ ರ್ನಿದಿಷ್ಟ ಮಾದರಿಗೆ ಅಂಟಿಕೊಂಡಿರಲು ಬಯಸುವುದಿಲ್ಲ. ನಾನು ಕೂಡ ಈ ರೀತಿ ಆಟಗಾರರು ಯಾವುದಾದರು ಒಂದು ರೀತಿಯ ಮಾದರಿಗೆ ಮೀಸಲಾಗಿರುವುದನ್ನು ಬಯಸುವುದಿಲ್ಲ. ಉತ್ತಮ ಫಾರ್ಮ್​ನಲ್ಲಿರುವ ಆಟಗಾರರು ಎಲ್ಲ 3 ಮಾದರಿಯಲ್ಲೂ ಆಡಬೇಕು' ಎಂದಿದ್ದಾರೆ.

ಕೆಲ ಆಟಗಾರರು ಸೀಮಿತ ಓವರ್​ ಕ್ರಿಕೆಟ್​ನತ್ತ ಗಮನಹರಿಸಿ, ಟೆಸ್ಟ್​ ಕ್ರಿಕೆಟ್​ ಕಡೆಗಣಿಸುತ್ತಿರುವ ಬಗ್ಗೆ ಗಂಭೀರ್​ ಪರೋಕ್ಷವಾಗಿ ಆಕ್ಷೇಪ ಎತ್ತಿದ್ದಾರೆ. ಪ್ರಮುಖವಾಗಿ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಇತ್ತೀಚೆಗೆ ಟೆಸ್ಟ್​ ಕ್ರಿಕೆಟ್​ನಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. 2018ರಲ್ಲಿ ಅವರು ಕೊನೇ ಟೆಸ್ಟ್​ ಆಡಿದ್ದರು. ವರ್ಷಾಂತ್ಯದ ಆಸ್ಟ್ರೆಲಿಯಾ ಪ್ರವಾಸದ ಟೆಸ್ಟ್​ ಸರಣಿಯಲ್ಲಿ ಹಾರ್ದಿಕ್​ ಪಾಂಡ್ಯರನ್ನು ಆಡಿಸಿದರೆ ಭಾರತ ತಂಡವನ್ನು ಸೋಲಿಸಲು ಸಾಧ್ಯವಾಗುವುದಿಲ್ಲ ಎಂದು ಮಾಜಿ ನಾಯಕ ಸುನೀಲ್​ ಗಾವಸ್ಕರ್​ ಇತ್ತೀಚೆಗೆ ಹೇಳಿದ್ದರು.

ಗಂಭೀರ್​ ಕೂಡ ಇದೇ ನಿಟ್ಟಿನಲ್ಲಿ ಮಾತನಾಡಿದ್ದು, ಆಟಗಾರರು ಈ ರೀತಿ ಕೆಲ ಮಾದರಿಗೆ ಸೀಮಿತವಾಗಲು ಗಾಯದ ಸಮಸ್ಯೆ ಪ್ರಮುಖ ಕಾರಣವಾಗಿದೆ. ಹೀಗಾಗಿ ಇಂಜುರಿ ಮ್ಯಾನೇಜ್​ಮೆಂಟ್​ ಮತ್ತು ಕಾರ್ಯದೊತ್ತಡ ತಗ್ಗಿಸುವತ್ತ ಗಮನಹರಿಸಬೇಕಾಗಿದೆ. ವೃತ್ತಿಪರ ಕ್ರಿಕೆಟಿಗರ ಕ್ರೀಡಾ ಜೀವನ ಸಾಕಷ್ಟು ಕಿರಿದಾದುದು. ಹೀಗಾಗಿ ಅವರು ಸಾಧ್ಯವಾದಷ್ಟು ಪಂದ್ಯಗಳನ್ನು ಆಡಲು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ.