

ಪ್ಯಾರಿಸ್: ಪ್ರಣಯ ನಗರ ಎಂದೇ ಹೆಸರಾದ ಪ್ಯಾರಿಸ್ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ವೇದಿಕೆ ಸಜ್ಜಾಗುತ್ತಿದೆ. ಇದೇ ವೇಳೆ ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿ ಕ್ರೀಡಾಪಟುಗಳಿಗೆ ಪೂರೈಕೆಗೆ ಎಂದು ಸಂಘಟಕರು 3 ಲಕ್ಷ ಕಾಂಡಂಗಳನ್ನು ಸಿದ್ಧಗೊಳಿಸಿಟ್ಟಿದ್ದಾರೆ. ಇದು ಒಲಿಂಪಿಕ್ಸ್ ಇತಿಹಾಸದಲ್ಲೇ ಗರಿಷ್ಠ ಸಂಖ್ಯೆಯ ಕಾಂಡೋಮ್ ಪೂರೈಕೆಯಾಗಿರಲಿದೆ.
ಕಳೆದ 2021ರ ಟೋಕಿಯೊ ಒಲಿಂಪಿಕ್ಸ್ ವೇಳೆ ಸೆಕ್ಸ್ ವಿಚಾರವನ್ನು ಕ್ರೀಡಾಪಟುಗಳು ಸಾಧ್ಯವಾದಷ್ಟು ದೂರವಿಟ್ಟಿದ್ದರು. ಇದಕ್ಕೆ ಕಾರಣ ಆಗಿನ ಕರೊನಾ ಹಾವಳಿ. ಅಲ್ಲದೆ ಕ್ರೀಡಾಪಟುಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿತ್ತು. ಜತೆಗೆ ಕ್ರೀಡಾಗ್ರಾಮದಲ್ಲಿ ಕ್ರೀಡಾಪಟುಗಳಿಗೆ ನೀಡಲಾಗಿದ್ದ ಕಾರ್ಡ್ಬೋರ್ಡ್ ಬೆಡ್ಗಳು ಒಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳ ಭಾರ ಸಹಿಸುವ ಶಕ್ತಿ ಹೊಂದಿರಲಿಲ್ಲ. ಆದರೂ ಟೋಕಿಯೊದಲ್ಲಿ ಸಂಟಕರು 1.5 ಲಕ್ಷ ಕಾಂಡಂಗಳನ್ನು ಕ್ರೀಡಾಪಟುಗಳಿಗೆ ಪೂರೈಕೆ ಮಾಡಿದ್ದರು ಮತ್ತು ಇದನ್ನು ನಿಮ್ಮ ದೇಶದಲ್ಲಿ ಎಚ್ಐವಿ ಜಾಗೃತಿ ಮೂಡಿಸಲು ಬಳಸಿ ಎಂಬ ಕಿವಿಮಾತು ಹೇಳಿದ್ದರು.
ಆದರೆ ಪ್ಯಾರಿಸ್ನಲ್ಲಿ ಎಲ್ಲವೂ ಬದಲಾಗಲಿದೆ. ಇದನ್ನು ಅರಿತೇ ಸಂಘಟಕರು ಟೋಕಿಯೋಗಿಂತ ದುಪ್ಪಟ್ಟು ಕಾಂಡಂಗಳನ್ನು ಪೂರೈಸಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಒಲಿಂಪಿಕ್ಸ್ ವೇಳೆ ಕಾಂಡಂಗಳನ್ನು ಪೂರೈಸುವುದು 1988ರಲ್ಲಿ ಆರಂಭಗೊಂಡಿತು. ಏಡ್ಸ್ ಜಾಗೃತಿಗಾಗಿ ಸಿಯೋಲ್ ಒಲಿಂಪಿಕ್ಸ್ ವೇಳೆ ಮೊದಲ ಬಾರಿ ಕಾಂಡಂ ಹಂಚಲಾಗಿತ್ತು. ಬಳಿಕ ಈ ಸಂಖ್ಯೆ ಏರಿಕೆಯಾಗುತ್ತ ಬಂದಿದೆ. 2000ದಲ್ಲಿ ಸಿಡ್ನಿ ಗೇಮ್ಸ್ ವೇಳೆ 70 ಸಾವಿರ ಕಾಂಡಂ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದು ಖಾಲಿಯಾಗಿ ಮತ್ತೆ 20 ಸಾವಿರ ಹೆಚ್ಚುವರಿ ಕಾಂಡಂ ಪೂರೈಸಲಾಗಿತ್ತು. 2016ರ ರಿಯೋ ಒಲಿಂಪಿಕ್ಸ್ ವೇಳೆ ಮಹಿಳೆಯರಿಗೂ ಗರ್ಭ ನಿರೋಧಕಗಳನ್ನೂ ಪೂರೈಸಲಾಗಿತ್ತು.
ಕ್ರೀಡಾಗ್ರಾಮದಲ್ಲಿ ಬಹುತೇಕ ಎಲ್ಲ ರೀತಿಯ ವ್ಯವಸ್ಥೆಗಳು ಇರಲಿವೆ. ಆದರೆ ಮದ್ಯ ಮಾರಾಟವಿರುವುದಿಲ್ಲ. ಬೇಕಿದ್ದರೆ, ಪ್ಯಾರಿಸ್ ನಗರದ ಇತರೆಡೆ ಲಭ್ಯವಾಗುವ ಎಲ್ಲ ರೀತಿಯ ಶಾಂಪೇನ್ಗಳನ್ನೂ ಕ್ರೀಡಾಪಟುಗಳು ಆನಂದಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.