ಕ್ರೀಡೆ

ಘರ್ಷಣೆಯಿಂದ-ಫಿಟ್ನೆಸ್​ವರೆಗೆ ತಂಡವನ್ನು ಸರಿದೂಗಿಸಿ; ಟೀಮ್​ ಇಂಡಿಯಾ ಮಾಜಿ ಕೋಚ್​ಗೆ ಸಿಕ್ತು ಸರ್ವಾಧಿಕಾರ

ನವದೆಹಲಿ: ಟಿ20 ವಿಶ್ವಕಪ್​ ಮುಗಿದು ತಂಡಗಳು ಚಾಂಪಿಯನ್ಸ್​ ಟ್ರೋಫಿಗೆ ತಯಾರಿ ಆರಂಭಿಸಿದರೂ ಪಾಕಿಸ್ತಾನ ಕ್ರಿಕೆಟ್​ ತಂಡದಲ್ಲಿನ ಆಂತರಿಕ ಕಲಹ ಯಾಕೋ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಗೆಲ್ಲುವ ಭರವಸೆಯೊಂದಿಗೆ ಕಣಕ್ಕಿಳಿದ ಪಾಕಿಸ್ತಾನವು ಹೀನಾಯ ಪ್ರದರ್ಶನದಿಂದಾಗಿ ಸೂಪರ್​ 08 ಹಂತ ಪ್ರವೇಶಿಸದೆ ಹೊರಬಿದ್ದಿತ್ತು. ಇದಾದ ಬಳಿಕ ನಡೆದ ಆರೋಪ-ಪ್ರತ್ಯಾರೋಪಗಳ ಸರಣಿ ಬಳಿಕ ಇದೀಗ ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ ಒಂದು ನಿರ್ಧಾರಕ್ಕೆ ಬಂದಿದ್ದು, ಟೀಮ್​ ಇಂಡಿಯಾ ಮಾಜಿ ಕೋಚ್​ಗೆ ಸರ್ವಾಧಿಕಾರ ನೀಡಿದೆ. ಈ ಮೂಲಕ ತಂಡದಲ್ಲಿನ ಗೊಂದಲಗಳನ್ನು ಸರಿಪಡಿಸಲು ಮುಂದಾಗಿದೆ.

ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ನ ಮುಖ್ಯಸ್ಥ ಮೊಹ್ಸಿನ್​ ನಖ್ವಿ ಮುಖ್ಯ ಕೋಚ್​ಗಳಾದ ಗ್ಯಾರಿ ಕರ್ಸ್ಟನ್​ ಹಾಗೂ ಝೇಸನ್​ ಗಿಲ್ಲೆಸ್ಟಿಗೆ ಮುಕ್ತ ಹಸ್ತ ನೀಡಿದ್ದು, ಪಿಸಿಬಿ ಯಾವುದೇ ಕಾರಣಕ್ಕೂ ತಂಡದ ವಿಚಾರಗಳಲ್ಲಿ ತಲೆ ಹಾಕುವುದಿಲ್ಲ ಎಂದು ಭರವಸೆ ನೀಡಿದ್ದಾರಂತೆ. ಅದರಂತೆ ನಾಯಕತ್ವ ಬದಲಾವಣೆ, ತಂಡದ ಆಯ್ಕೆಯ ಅಧಿಕಾರವು ಇದೀಗ ಕೋಚ್​ಗಳ ಪಾಲಾಗಿದ್ದು, ಮಾಜಿ ಆಟಗಾರರ ಹಾಗೂ ರಾಜಕೀಯ ನಾಯಕರ ಹಸ್ತಕ್ಷೇಪ ಇರುವುದಿಲ್ಲ ಎಂದು ವರದಿಯಾಗಿದೆ.

ಈ ಕುರಿತು ಮಾತನಾಡಿರುವ ಪಿಸಿಬಿಯ ಹಿರಿಯ ಅಧಿಕಾರಿಯೊಬ್ಬರು, ತಂಡದಲ್ಲಿನ ಆಂತರಿಕ ಕಲಹ ಹಾಗೂ ಆಟಗಾರರ ನಡುವಿನ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪಿಸಿಬಿ ಮುಖ್ಯಸ್ಥರು ಈ ನಿರ್ಧಾರಕ್ಕೆ ಬಂದಿದ್ದು, ಕೋಚ್​ಗಳ ನಿರ್ಧಾರಕ್ಕೆ ಎಲ್ಲರೂ ಬದ್ದವಾಗಿರುವುದಾಗಿ ಹೇಳಿದ್ದಾರೆ. ತಂಡದ ಪ್ರದರ್ಶನ ಸುಧಾರಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇಬ್ಬರು ಕೋಚ್​ಗಳಿಗೆ ಮುಕ್ತ ಹಸ್ತ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮಹತ್ವದ ಬದಲಾವಣೆಯಾಗುತ್ತದೆ ಎಂದು ಪಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2021ರಲ್ಲಿ ಸೆಮಿಫೈನಲ್​, 2022ರಲ್ಲಿ ಫೈನಲ್​ನಲ್ಲಿ ಸೋತಿರುವ ನಾವು ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಗೆಲ್ಲುತ್ತೇವೆ ಎಂದು ಟೂರ್ನಿ ಆರಂಭಕ್ಕೂ ಮುನ್ನ ತಂಡದ ಎಲ್ಲಾ ಆಟಗಾರರು ಸುದ್ದಿಗೋಷ್ಠಿಯಲ್ಲಿ ಪದೇ ಪದೇ ಹೇಳುತ್ತಿದ್ದರು. ಆದರೆ, ಟಿ20 ವಿಶ್ವಕಪ್​ನಲ್ಲಿ ಹೀನಾಯವಾಗಿ ಹೊರಬಿದ್ದ ಬಳಿಕ ಆಟಗಾರರು ತಂಡದ ಸದಸ್ಯರ ವಿರುದ್ಧ ದೂರಲು ಶುರು ಮಾಡಿದರು. ಒಟ್ಟಿನಲ್ಲಿ ಪಾಕಿಸ್ತಾನ ಕ್ರಿಕೆಟ್​ ತಂಡ ಒಂದಿಲ್ಲೊಂದು ವಿಚಾರಕ್ಕೆ ವಿಶ್ವದ ಮುಂದೆ ಪದೇ ಪದೇ ಬೆತ್ತಲಾಗುತ್ತಿದೆ.