ಲಂಡನ್: ಐಪಿಎಲ್ 14ನೇ ಆವೃತ್ತಿಯ ಉಳಿದ 31 ಪಂದ್ಯಗಳ ಆತಿಥ್ಯಕ್ಕೆ ಇಂಗ್ಲೆಂಡ್ನ 4 ಕೌಂಟಿ ತಂಡಗಳಾದ ಮಿಡ್ಲ್ಸೆಕ್ಸ್, ಸರ್ರೆ, ವಾರ್ವಿಕ್ಶೈರ್ ಮತ್ತು ಲಂಕಾಶೈರ್ ಮುಂದೆ ಬಂದಿವೆ. ಪ್ರತಿಷ್ಠಿತ ಎಂಸಿಸಿ ಕೂಡ ಟೂನಿರ್ಯ ಉಳಿದ ಭಾಗದ ಆಯೋಜನೆಗಾಗಿ ಬಿಸಿಸಿಐಗೆ ಅಹ್ವಾನ ನೀಡಿದೆ ಎನ್ನಲಾಗಿದೆ.
ಭಾರತದ ನಾಲ್ವರು ಕ್ರಿಕೆಟಿಗರಿಗೆ ಕರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಐಪಿಎಲ್ ಟೂನಿರ್ 29 ಪಂದ್ಯಗಳಿಗೆ ಸ್ಥಗಿತಗೊಂಡಿದ್ದು, ಸೆಪ್ಟೆಂಬರ್ 14ರಂದು ಭಾರತ ತಂಡದ ಇಂಗ್ಲೆಂಡ್ ಪ್ರವಾಸ ಮುಕ್ತಾಯಗೊಂಡ ಬೆನ್ನಲ್ಲೇ ಟೂರ್ನಿ ಪೂರ್ಣಗೊಳಿಸುವತ್ತ ಬಿಸಿಸಿಐ ಸದ್ಯ ಗಮನಹರಿಸಿದೆ. ಹೆಚ್ಚಿನ ದಿನಗಳಲ್ಲಿ 2 ಪಂದ್ಯಗಳನ್ನು ಆಯೋಜಿಸುವ ಮೂಲಕ ಸುಮಾರು 20 ದಿನಗಳಲ್ಲೇ ಟೂನಿರ್ಯನ್ನು ಮುಕ್ತಾಯಗೊಳಿಸಲು ಬಿಸಿಸಿಐ ಯೋಜಿಸಿದೆ.
ಲಂಡನ್ನ ಲಾರ್ಡ್ಸ್, ಓವಲ್, ರ್ಬಮಿಂಗ್ಹ್ಯಾಂನ ಎಜ್ಬಾಸ್ಟನ್ ಮತ್ತು ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನಗಳಲ್ಲಿ ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳನ್ನು ಆಯೋಜಿಸುವ ಆಫರ್ ನೀಡಲಾಗಿದೆ. ಸದ್ಯದಲ್ಲಿಯೇ ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಯಲಿದ್ದು, ಈ ವೇಳೆ ಬಿಸಿಸಿಐ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ (ಇಸಿಬಿ) ಅಧಿಕಾರಿಗಳ ನಡುವೆ ಈ ಸಂಬಂಧ ಚರ್ಚೆ ನಡೆಯುವ ಸಾಧ್ಯತೆ ಇದೆ. ಇಂಗ್ಲೆಂಡ್ನಲ್ಲಿ ಐಪಿಎಲ್ ಪಂದ್ಯಗಳು ನಡೆದರೆ, ಕ್ರೀಡಾಂಗಣಕ್ಕೆ ಪ್ರೇಕರಿಗೂ ಪ್ರವೇಶ ದೊರೆಯುವ ನಿರೀಕ್ಷೆ ಇದೆ.
ಸದ್ಯದ ಮಟ್ಟಿಗೆ ಟಿ20 ವಿಶ್ವಕಪ್ ಭಾರತದಲ್ಲಿ ನಡೆಯುವ ಸಾಧ್ಯತೆ ಕ್ಷೀಣವಾಗಿದ್ದು, ಐಪಿಎಲ್, ಟಿ20 ವಿಶ್ವಕಪ್ ಎರಡನ್ನೂ ಅಲ್ಪ ಅಂತರದಲ್ಲಿ ಯುಎಇಯಲ್ಲೇ ಆಯೋಜಿಸುವುದು ಕಷ್ಟಕರ. ಇದರಿಂದ ಟಿ20 ವಿಶ್ವಕಪ್ ವೇಳೆಗೆ ಪಿಚ್ಗಳು ನಿಧಾನಗತಿಗೆ ತಿರುಗಬಹುದು. ಹೀಗಾಗಿ ಐಪಿಎಲ್ ಟೂರ್ನಿಯನ್ನು ಇಂಗ್ಲೆಂಡ್ನಲ್ಲಿ ಆಯೋಜಿಸುವ ಚಿಂತನೆಗೆ ಹೆಚ್ಚಿನ ಬೆಂಬಲ ಲಭಿಸಿದೆ. ಆದರೆ ಇಂಗ್ಲೆಂಡ್ನಲ್ಲಿ ಐಪಿಎಲ್ ಆಯೋಜನೆಗೆ ಇತರ ಕೆಲ ಸವಾಲುಗಳೂ ಇವೆ. ಮುಖ್ಯವಾಗಿ ಭಾರತ-ಇಂಗ್ಲೆಂಡ್ ದೇಶಗಳ ಸಮಯದ ಹೊಂದಾಣಿಕೆ ಕಷ್ಟ. ಇನ್ನು ಇಂಗ್ಲೆಂಡ್ ಪ್ರವಾಸದ ವೇಳೆ ಭಾರತದ ಸುಮಾರು 30 ಕ್ರಿಕೆಟಿಗರಷ್ಟೇ ಅಲ್ಲಿರಲಿದ್ದಾರೆ. ಉಳಿದ ಕ್ರಿಕೆಟಿಗರನ್ನು ಇಂಗ್ಲೆಂಡ್ನಲ್ಲಿ ಕ್ವಾರಂಟೈನ್ಗೆ ಒಳಪಡಿಸುವ ಯೋಜನೆ ಇನ್ನಷ್ಟೇ ಸಿದ್ಧಗೊಳ್ಳಬೇಕಾಗಿದೆ.
ಭಾರತ ವಿರುದ್ಧದ ಟೆಸ್ಟ್ ಸರಣಿಯ ಬೆನ್ನಲ್ಲೇ ಇಂಗ್ಲೆಂಡ್ ತಂಡ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧ ಸೀಮಿತ ಓವರ್ಗಳ ಸರಣಿ ಆಡಬೇಕಾಗಿದೆ. ಅಕ್ಟೋಬರ್ 14ರವರೆಗೂ ಈ ಪಂದ್ಯಗಳು ನಿಗದಿಯಾಗಿವೆ. ಇತರ ಕೆಲ ದೇಶಗಳೂ ಇದೇ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳನ್ನು ಹೊಂದಿವೆ. ಅಲ್ಲದೆ ಇಂಗ್ಲೆಂಡ್ನ ಕ್ವಾರಂಟೈನ್ ನಿರ್ಬಂಧಗಳಿಂದಾಗಿ ಹೆಚ್ಚಿನ ಸಮಯ ಹಿಡಿಯುತ್ತದೆ. ಹೀಗಾಗಿ ಇಂಗ್ಲೆಂಡ್ನಲ್ಲಿ ಐಪಿಎಲ್ ಟೂರ್ನಿ ಆಯೋಜನೆಗೆ ಬಿಸಿಸಿಐಗೆ ಇತರ ದೇಶಗಳ ಸಹಕಾರವೂ ಅತ್ಯಗತ್ಯವಾಗಿರುತ್ತದೆ.