ಕೊಲಂಬೊ: ಕ್ರಿಕೆಟಿಗರ ಪುತ್ರರು ಕ್ರಿಕೆಟ್ ಆಟಗಾರರಾಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಪುತ್ರಿಯರೂ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳುವುದು ಬಲು ಅಪರೂಪ. ಅಂಥವರ ಸಾಲಿಗೆ ಈಗ ಶ್ರೀಲಂಕಾದ ಮಾಜಿ ಬ್ಯಾಟರ್ ತಿಲಕರತ್ನೆ ದಿಲ್ಶಾನ್ ಅವರ ಪುತ್ರಿ ಲಿಮಾನ್ಸಾ ತಿಲಕರತ್ನ ಸೇರ್ಪಡೆಯಾಗಿದ್ದಾರೆ.
16 ವರ್ಷದ ಲಿಮಾನ್ಸಾ ಹಾಲಿ 19 ವಯೋಮಿತಿ ಮಹಿಳಾ ವಿಶ್ವಕಪ್ನಲ್ಲಿ ಆಡುತ್ತಿರುವ ಶ್ರೀಲಂಕಾ ತಂಡದಲ್ಲಿದ್ದಾರೆ. ಲೆಗ್ ಸ್ಪಿನ್ನರ್ ಆಗಿರುವ ಲಿಮಾನ್ಸಾ ಭಾರತ ವಿರುದ್ಧದ ಪಂದ್ಯ ಸೇರಿದಂತೆ ವಿಶ್ವಕಪ್ನಲ್ಲಿ ಆಡಿರುವ 3 ಪಂದ್ಯಗಳಲ್ಲೂ ತಲಾ 2 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ದಿಲ್ಶಾನ್ರ 2ನೇ ಪತ್ನಿ ಹಾಗೂ ಲಂಕಾ ನಟಿ ಮಂಜುಲಾ ಥಿಲಿನಿ ದಾಂಪತ್ಯದಲ್ಲಿ ಜನಿಸಿದ ಮೊದಲ ಪುತ್ರಿಯಾಗಿರುವ ಲಿಮಾನ್ಸಾ ಆಸ್ಟ್ರೆಲಿಯಾದ ಮೆಲ್ಬೋರ್ನ್ನಲ್ಲೇ ಬೆಳೆದವರು. ಆಸೀಸ್ ಪ್ರಜೆ ಕೂಡ ಆಗಿರುವ ಲಿಮಾನ್ಸಾ, ಶ್ರೀಲಂಕಾದ ದೇಶೀಯ ಕ್ರಿಕೆಟ್ನಲ್ಲೂ ಆಡದೆ ಕಳೆದ ವರ್ಷ ನೇರವಾಗಿ ಕಿರಿಯರ ತಂಡದಲ್ಲಿ ಸ್ಥಾನ ಪಡೆದಾಗ ವಿವಾದವೂ ಸೃಷ್ಟಿಯಾಗಿತ್ತು.