ಕ್ರೀಡೆ

ಬಂಗಾಳ ಕ್ರೀಡಾ ಸಚಿವ, ಮಾಜಿ ಕ್ರಿಕೆಟಿಗ ಶುಕ್ಲಾ ಪತ್ನಿಗೆ ಕರೊನಾ ಪಾಸಿಟಿವ್!

ಕೋಲ್ಕತ: ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಹಾಗೂ ಮಾಜಿ ಕ್ರಿಕೆಟಿಗ ಲಕ್ಷ್ಮಿರತನ್ ಶುಕ್ಲಾ ಪತ್ನಿಗೆ ಕರೊನಾ ಸೋಂಕು ಬಂದಿದೆ. ಟೀಮ್ ಇಂಡಿಯಾದ ಮಾಜಿ ಆಟಗಾರರಾಗಿರುವ ಆಲ್ರೌಂಡರ್ ಲಕ್ಷ್ಮಿರತನ್ ಶುಕ್ಲಾ ಅವರ ಪತ್ನಿ ಸ್ಮಿತಾ ಸತ್ಯಾಲ್ ಶುಕ್ಲಾ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಹಾಯಕ ಕಾರ್ಯದರ್ಶಿಯಾಗಿದ್ದಾರೆ.

ಸ್ಮಿತಾ ಸನ್ಯಾಲ್ ಅವರಿಗೆ ನಡೆಸಲಾದ ಕರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿರುವುದನ್ನು ಸರ್ಕಾರಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅವರಿಗೆ ಅಲ್ಪ ಜ್ವರ ಇತ್ತು. ಹೀಗಾಗಿ ಹೋಂ ಐಸೋಲೇಷನ್‌ನಲ್ಲಿದ್ದರು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

‘ಹೌದು, ನನ್ನ ಪತ್ನಿ ಸ್ಮಿತಾಗೆ ಪಾಸಿಟಿವ್ ವರದಿ ಬಂದಿದೆ. ಆಕೆಗೆ ಜ್ವರ ಇತ್ತು. ವೈದ್ಯರು ನೀಡಿರುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾಳೆ. ನಾನು, ನನ್ನ ಇಬ್ಬರು ಪುತ್ರರು ಮತ್ತು ನನ್ನ ವಯಸ್ಸಾದ ತಂದೆ ಹೋಂ ಕ್ವಾರಂಟೈನ್‌ನಲ್ಲಿದ್ದೇವೆ. ನಾವು ಕೂಡ ಕರೊನಾ ಪರೀಕ್ಷೆಗೆ ಒಳಗಾಗಿದ್ದೇವೆ’ ಎಂದು ಬಂಗಾಳ ರಣಜಿ ಕ್ರಿಕೆಟ್ ತಂಡದ ಮಾಜಿ ನಾಯಕ ಲಕ್ಷ್ಮಿರತನ್ ಶುಕ್ಲಾ ತಿಳಿಸಿದ್ದಾರೆ. 2016ರಲ್ಲಿ ಹೌರಾ ಉತ್ತರ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದು ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿರುವ ಲಕ್ಷ್ಮಿರತನ್ ಶುಕ್ಲಾ, ಭಾರತ ಪರ 3 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಕೋಲ್ಕತ ನೈಟ್‌ರೈಡರ್ಸ್‌, ಡೆಲ್ಲಿ ಮತ್ತು ಸನ್‌ರೈಸರ್ಸ್‌ ಪರ ಆಡಿದ್ದರು.