ಮೆಲ್ಬೋರ್ನ್: ಕ್ರಿಕೆಟ್ ವಿಚಾರದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಬದ್ಧ ಎದುರಾಳಿಗಳು. ಪ್ರತಿಷ್ಠಿತ ಆಶಸ್ ಸರಣಿ ಗೆಲುವಿಗಾಗಿ ಉಭಯ ದೇಶಗಳು ಪ್ರಬಲ ಹೋರಾಟವನ್ನೇ ನಡೆಸುತ್ತವೆ. ಅಂಥದ್ದರಲ್ಲಿ ಇದೀಗ, ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಆಂಡ್ರೋ ಸ್ಟ್ರಾಸ್ ಆಸ್ಟ್ರೇಲಿಯಾದ ಕ್ರಿಕೆಟ್ ಅಭಿವೃದ್ಧಿಗೆ ನೆರವಾಗುವತ್ತ ಹೆಜ್ಜೆ ಇಟ್ಟಿರುವುದು ವಿಶೇಷ. ಆಂಡ್ರೋ ಸ್ಟ್ರಾಸ್ ಕ್ರಿಕೆಟ್ ಆಸ್ಟ್ರೇಲಿಯಾದ (ಸಿಎ) ಅತಿ ಪ್ರಮುಖ ಸಿಇಒ ಹುದ್ದೆಗೆ ಈಗ ಅಚ್ಚರಿಯ ಅಭ್ಯರ್ಥಿಯಾಗಿದ್ದಾರೆ. ಮಂಡಳಿಯ ಆರ್ಥಿಕ ಮುಗ್ಗಟ್ಟಿನ ನಡುವೆ ಕೆವಿನ್ ರಾಬರ್ಟ್ಸ್ ರಾಜೀನಾಮೆ ಸಲ್ಲಿಸಿರುವುದರಿಂದ ತೆರವಾಗಿರುವ ಸ್ಥಾನಕ್ಕೆ ಸ್ಟ್ರಾಸ್ ಫೇವರಿಟ್ ಎನಿಸಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ನಲ್ಲಿ ಲಯ ಕಳೆದುಕೊಂಡರೇ ರೊನಾಲ್ಡೋ?
ಕ್ರಿಕೆಟ್ ಆಸ್ಟ್ರೇಲಿಯಾದ ಪ್ರಭಾವಿ ವ್ಯಕ್ತಿಯೊಬ್ಬರ ಮನವಿಯ ಮೇರೆಗೆ 43 ವರ್ಷದ ಸ್ಟ್ರಾಸ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಸ್ಟ್ರಾಸ್ ಈ ಹಿಂದೆ 2015ರಿಂದ 2018ರವರೆಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಕ್ರಿಕೆಟ್ ನಿರ್ದೇಶಕರಾಗಿ ಸಾಕಷ್ಟು ಯಶಸ್ಸು ಕಂಡಿದ್ದರು. ಇಂಗ್ಲೆಂಡ್ ಪರ 100 ಟೆಸ್ಟ್ ಮತ್ತು 127 ಏಕದಿನ ಪಂದ್ಯವಾಡಿರುವ ಸ್ಟ್ರಾಸ್, ಕ್ರಮವಾಗಿ 7,037 ಮತ್ತು 4,205 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ಪರ ಪದಾರ್ಪಣೆ ಮಾಡುವುದಕ್ಕೆ ಮುನ್ನ ಅವರು 1998-99ರಲ್ಲಿ ಸಿಡ್ನಿ ವಿಶ್ವವಿದ್ಯಾಲಯದ ಪರ ಆಡಿದ್ದರು.
ಇದನ್ನೂ ಓದಿ: ನತಾಶಾಗೆ ಹಾರ್ದಿಕ್ ಪಾಂಡ್ಯ ರೋಮ್ಯಾಂಟಿಕ್ ಗಿಫ್ಟ್!
2005, 2009 ಮತ್ತು 2010-11ರ ಆಶಸ್ ಸರಣಿಗಳಲ್ಲಿ ಇಂಗ್ಲೆಂಡ್ ತಂಡದ ಆಡಿದ್ದ ಸ್ಟ್ರಾಸ್ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾದ ಕ್ರಿಕೆಟ್ ಆಡಳಿತದೊಂದಿಗೆ ಕೈಜೋಡಿಸುತ್ತಿರುವುದರಿಂದ ಉಭಯ ದೇಶಗಳಲ್ಲಿ ಮಿಶ್ರ ಅಭಿಪ್ರಾಯ ಮೂಡಿದೆ. ದಕ್ಷಿಣ ಆಫ್ರಿಕಾ ಮೂಲದವರಾದ ಸ್ಟ್ರಾಸ್, ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪತ್ನಿಯ ಜತೆಗೆ ಹೆಚ್ಚಿನ ಸಮಯ ಕಳೆಯುವ ಸಲುವಾಗಿ 2018ರಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ನಿರ್ದೇಶಕ ಹುದ್ದೆ ತ್ಯಜಿಸಿದ್ದರು. ಆದರೆ ಅವರು ಇಂಗ್ಲೆಂಡ್ ಕ್ರಿಕೆಟ್ ಆಡಳಿತದಲ್ಲಿ ತಂದ ಬದಲಾವಣೆಗಳಿಂದಲೇ 2019ರಲ್ಲಿ ಏಕದಿನ ವಿಶ್ವಕಪ್ ಜಯಿಸಲು ಸಾಧ್ಯವಾಗಿತ್ತು ಎಂಬ ಅಭಿಪ್ರಾಯಗಳಿವೆ.