Sam Konstas: ಟೀಮ್ ಇಂಡಿಯಾ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದ ಮೊದಲೇ ದಿನದಂದು ವೇಗಿ ಜಸ್ಪ್ರೀತ್ ಬುಮ್ರಾ ಜತೆಗೆ ವಾಗ್ವಾದಕ್ಕಿಳಿದ ಆಸೀಸ್ ಬ್ಯಾಟರ್ ಸ್ಯಾಮ್ ಕೊನ್‌ಸ್ಟಾಸ್, ಸಿಡ್ನಿ ಪಿಚ್ನಲ್ಲಿ ಸುಖಾಸುಮ್ಮನೆ ಕ್ಯಾತೆ ತೆಗೆದಿದ್ದು, ಕ್ರಿಕೆಟ್ ಅಭಿಮಾನಿಗಳನ್ನು ತೀವ್ರ ಕೆರಳಿಸಿತು. ಇದಕ್ಕೆ ಸಂಬಂಧಿಸಿದಂತೆ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡಿ, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಯಿತು.
ಇದನ್ನೂ ಓದಿ: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹ; ಆರ್. ಅಶೋಕ, ಸಿ.ಟಿ ರವಿ ಸೇರಿದಂತೆ ಬಿಜೆಪಿ ನಾಯಕರು ಖಾಕಿ ವಶಕ್ಕೆ | BJP
ಪಂದ್ಯದ ಮಧ್ಯೆ ಸುಮ್ಮನೆ ಕಾಲ್ಕೆರೆದು ಬುಮ್ರಾ ಜತೆಗೆ ಜಗಳಕ್ಕಿಳಿದ ಕೊನ್‌ಸ್ಟಾಸ್, ಟೀಮ್ ಇಂಡಿಯಾ ವೇಗಿಯನ್ನೇ ನೋಡುತ ವಾಗ್ವಾದ ಪ್ರಸಂಗಕ್ಕೆ ಕಾರಣರಾದರು. ಇದನ್ನು ಗಮನದಲ್ಲಿಟ್ಟುಕೊಂಡಿದ್ದ ಬುಮ್ರಾ, ಸ್ಟ್ರೈಕ್ನಲ್ಲಿದ್ದ ಬ್ಯಾಟರ್ ಖವಾಜಾರ ವಿಕೆಟ್ ಕಬಳಿಸಿ, ನಾನ್-ಸ್ಟ್ರೈಕರ್‌ನ ತುದಿಯಲ್ಲಿದ್ದ ಕೊನ್ಸ್ಟಾಸ್ಗೆ ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ತಿರುಗೇಟು ನೀಡಿದರು. ಈ ಘರ್ಷಣೆಯನ್ನು ಉಲ್ಲೇಖಿಸಿ ಆಸೀಸ್ ಬ್ಯಾಟರ್ ವಿರುದ್ಧ ಕಿಡಿಕಾರಿರುವ ಮಾಜಿ ಹಿರಿಯ ಆಟಗಾರ ಮಾರ್ಕ್ ವಾಗ್, ಇದೆಲ್ಲ ಬೇಕಿರಲಿಲ್ಲ ಎಂದಿದ್ದಾರೆ.
"ನೀವೇ ಗಮನಿಸಬಹುದು ಉಸ್ಮಾನ್ ಖವಾಜಾ ಅವರು ಸಮಯ ವ್ಯರ್ಥ ಮಾಡುವ ಪ್ರಯತ್ನದಲ್ಲಿ ತೊಡಗಿದ್ದರು. ಇದರ ಮಧ್ಯೆ ಸುಖಾಸುಮ್ಮನೆ ಯಾವ ವಿಚಾರವು ಇಲ್ಲದೆ ಹೋದರೂ ಸ್ಯಾಮ್ ಕೊನ್‌ಸ್ಟಾಸ್ ಜಗಳಕ್ಕಿಳಿದಿದ್ದು ನನಗೆ ಸರಿ ಅನಿಸಲಿಲ್ಲ. ಇದು ನಿಷ್ಕಪಟ ಉತ್ಸಾಹವೋ ಅಥವಾ ಅದು ಕೇವಲ ಒಂದು ಪ್ಲ್ಯಾನ್ ಆಗಿತ್ತೋ ನನಗೆ ಸ್ಪಷ್ಟವಾಗಿ ಗೊತ್ತಿಲ್ಲ. ಇಲ್ಲಿ ಸ್ಯಾಮ್ ಮಾಡಿದ್ದು ಅನಗತ್ಯ ಜಗಳವಷ್ಟೇ. ಇದರಿಂದ ನಮಗೆ ನಷ್ಟವಾಯಿತು" ಎಂದರು.
"ಕೊನ್‌ಸ್ಟಾಸ್ ವಾಗ್ವಾದದಿಂದಲೇ ಖವಾಜಾ ವಿಕೆಟ್ ಹೋಗಲು ಕಾರಣವಾಯಿತು. ಏಕೆಂದರೆ, ಅನುಭವಿ ಆಟಗಾರ ತನ್ನ ಏಕಾಗ್ರತೆಯನ್ನು ಕಳೆದುಕೊಂಡಿದ್ದರಿಂದ ವಿಕೆಟ್ ಪತನಕ್ಕೆ ಕಾರಣವಾಗಿರಬಹುದು ಎಂಬುದು ನನ್ನ ಅನಿಸಿಕೆ. ಭವಿಷ್ಯದಲ್ಲಿ ಇಂತಹ ಚೇಷ್ಟೆಗಳನ್ನು ಮುಂದುವರಿಸಿದಂತೆ ಯುವ ಬ್ಯಾಟರ್ಗೆ ಎಚ್ಚರಿಕೆ ನೀಡಬೇಕು. ಸ್ಯಾಮ್ ಮಾತಿನ ಬದಲಿಗೆ ತಮ್ಮ ಬ್ಯಾಟ್ನಿಂದ ಮಾತನಾಡುವುದು ಉತ್ತಮ" ಎಂದಿದ್ದಾರೆ ಮಾರ್ಕ್,(ಏಜೆನ್ಸೀಸ್).