ಕ್ರೀಡೆ

ಚೆನ್ನೈ ಟೆಸ್ಟ್ ಕಿಂಗ್ಸ್ ಎಂದು ಧೋನಿ ಬಳಗದ ಕಾಲೆಳೆದ ಸೆಹ್ವಾಗ್..!

ದುಬೈ: ಚೆನ್ನೈ ಸೂಪರ್ ಕಿಂಗ್ಸ್ ಪ್ರಸಕ್ತ ಐಪಿಎಲ್‌ನಲ್ಲಿ ಉತ್ತಮ ಆರಂಭ ಕಂಡುಕೊಳ್ಳಲು ವಿಫಲವಾಗಿದೆ. ಟೂರ್ನಿಯಲ್ಲಿ ಇದುವರಗೂ ಆಡಿರುವ 4 ಪಂದ್ಯಗಳಲ್ಲಿ ಸತತ ಮೂರು ಸೋಲು ಕಂಡು, ಏಕೈಕ ಗೆಲುವು ದಾಖಲಿಸಿದೆ. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಧೋನಿ ಬಳಗ 7 ರನ್‌ಗಳಿಂದ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಎದುರು ಶರಣಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ತಮ್ಮ ವೆಬ್ ಶೋ ‘ವೀರು ಕೀ ಬೈಠಕ್’ನಲ್ಲಿ ಚೆನ್ನೈ ಟೆಸ್ಟ್ ಕಿಂಗ್ಸ್ ಎಂದು ಧೋನಿ ಬಳಗವನ್ನು ಕಾಲೆಳೆದಿದ್ದಾರೆ. ಹೈದರಾಬಾದ್ ತಂಡ ಗೆಲುವು ಕಂಡಿತೋ ಅಥವಾ ಚೆನ್ನೈ ಟೆಸ್ಟ್ ಕಿಂಗ್ಸ್ ನೆಟ್ ಅಭ್ಯಾಸ ಮಾಡಿತೆ ಎಂದು ವೀರೂ ಹೇಳಿದ್ದಾರೆ.

ಇದನ್ನೂ ಓದಿ: ಚಾಹಲ್-ಪಡಿಕಲ್ ಸಾಹಸ, ಲಯ ಕಂಡ ಕೊಹ್ಲಿ, ಆರ್‌ಸಿಬಿಗೆ 3ನೇ ಗೆಲುವು

ಸಿಎಸ್‌ಕೆ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳ ನಡುವಿನ ಪಂದ್ಯವನ್ನು ವಿಶ್ಲೇಷಿಸಿರುವ ವೀರೇಂದ್ರ ಸೆಹ್ವಾಗ್, ಈ ಪಂದ್ಯ ‘ಮಿದುಳು ಹಾಗೂ ದೇಹಬಲ’ದ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಉತ್ತಮ ದೇಹಬಲ ಹೊಂದಿದ್ದ ಸನ್‌ರೈಸರ್ಸ್‌, ಚೆನ್ನೈ ತಂಡದ ಯೋಜನೆಗಳನ್ನು ಬುಡಮೇಲು ಮಾಡಿತು. ‘ದ ರಾಕ್ ವಾರ್ನರ್ ವರ್ಸಸ್ ಬಿಗ್ ಬ್ರೈನ್ ಗಬ್ಬರ್ ಧೋನಿ ನಡುವಿನ ಪಂದ್ಯದಲ್ಲಿ ದೇಹಬಲವೇ ಮೇಲುಗೈ ಸಾಧಿಸಿತು ಎಂದಿದ್ದಾರೆ. ಚೆನ್ನೈ ತಂಡ ಅವರ ಯೋಜನೆಗಳಿಂದಲೇ ಮಾಡಿಕೊಂಡ ಎಡವಟ್ಟಿನಿಂದಾಗಿಯೇ ಸೋಲನುಭವಿಸಿತು ಎಂದು ಸೆಹ್ವಾಗ್ ಹೇಳಿದ್ದಾರೆ.

ಡೇವಿಡ್ ವಾರ್ನರ್ ಪಡೆ 7 ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್‌ ಪ್ರಿಯಂ ಗಾರ್ಗ್ (51) ಅರ್ಧಶತಕದಾಟದ ನೆರವಿನಿಂದ 5 ವಿಕೆಟ್‌ಗೆ 164 ರನ್ ಪೇರಿಸಿತು. ಪ್ರತಿಯಾಗಿ 5 ವಿಕೆಟ್‌ಗೆ 157 ರನ್‌ಗಳಿಸಲಷ್ಟೇ ಶಕ್ತವಾಯಿತು.