ನವದೆಹಲಿ: ಕೋವಿಡ್-19ರಿಂದ ಬಳಲುತ್ತಿದ್ದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಹಾಗೂ ಉತ್ತರ ಪ್ರದೇಶ ಸರ್ಕಾರದ ಸಚಿವ ಚೇತನ್ ಚೌಹಾನ್ ಭಾನುವಾರ ನಿಧನರಾದರು. ಕಳೆದ ತಿಂಗಳು ಕರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ಚೇತನ್ ಅವರನ್ನು ಗುರುಗ್ರಾಮದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಶುಕ್ರವಾರದಿಂದ ವೆಂಟಿಲೇಟರ್ ಸಹಾಯದಲ್ಲಿದ್ದರು. 73 ವರ್ಷದ ಚೇತನ್ ಚೌಹಾನ್ ಉತ್ತರ ಪ್ರದೇಶದ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಜುಲೈ 12 ರಂದು ಲಖನೌದ ಸಂಜಯ್ ಗಾಂಧಿ ಪಿಜಿಐ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು.
ಚೇತನ್ ಚೌಹಾನ್, ಪತ್ನಿ ಹಾಗೂ ಪುತ್ರ ವಿನಾಯಕ ಅವರನ್ನು ಅಗಲಿದ್ದಾರೆ. ಪುತ್ರ ವಿನಾಯಕ್ ಮೆಲ್ಬೋರ್ನ್ನಲ್ಲಿ ನೆಲೆಸಿದ್ದು, ಭಾನುವಾರ ಸಂಜೆ ವೇಳೆಗೆ ಆಗಮಿಸುವ ನಿರೀಕ್ಷೆಯಿದೆ. ನನ್ನ ಹಿರಿಯರ ಸಹೋದರ ಚೇತನ್ ಚೌಹಾನ್ ಇಂದು ನಮ್ಮನ್ನು ಅಗಲಿದ್ದಾರೆ. ಮಗ ವಿನಾಯಕ್ ಮೆಲ್ಬೋರ್ನ್ನಿಂದ ಆಗಮಿಸಿದ ಬಳಿಕ ಅಂತಿಮ ವಿಧಿವಿಧಾನ ಕಾರ್ಯ ನಡೆಯಲಿದೆ ಎಂದು ಚೇತನ್ ಚೌಹಾನ್ ಸಹೋದರ ಪುಷ್ಪೇಂದ್ರ ತಿಳಿಸಿದ್ದಾರೆ.
ಚೇತನ್ ಚೌಹಾನ್ ರಾಷ್ಟ್ರೀಯ ತಂಡದ ಪರ 40 ಟೆಸ್ಟ್ ಪಂದ್ಯಗಳನ್ನಾಡಿದ್ದು, ಬಹುತೇಕ ಪಂದ್ಯಗಳಲ್ಲಿ ದಿಗ್ಗಜ ಸುನೀಲ್ ಗಾವಸ್ಕರ್ ಜತೆ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಜತೆಗೆ ದೆಹಲಿ ತಂಡದ ನಾಯಕನಾಗಿ ಕಾರ್ಯನಿರ್ವಸಿದರೆ, ಡಿಡಿಸಿಎ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಮುಖ್ಯ ಆಯ್ಕೆಗಾರನಾಗಿ ಕಾರ್ಯನಿರ್ವಹಿಸಿದ್ದಾರೆ. ಭಾರತ ತಂಡ, ಆಸ್ಟ್ರೆಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ ಒಮ್ಮೆ ತಂಡದ ಮ್ಯಾನೇಜರ್ ಆಗಿದ್ದರು.