ಕೇವಲ ಕ್ರೀಡೆಯಲ್ಲ, ಪ್ರತಿಷ್ಠೆಯ ಕದನ: ಫಿಫಾ ಆತಿಥೇಯ ರಾಷ್ಟ್ರವನ್ನು ಆಯ್ಕೆ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್...FIFA World Cup  
ಫುಟ್ಬಾಲ್

ಕೇವಲ ಕ್ರೀಡೆಯಲ್ಲ, ಪ್ರತಿಷ್ಠೆಯ ಕದನ: ಫಿಫಾ ಆತಿಥೇಯ ರಾಷ್ಟ್ರವನ್ನು ಆಯ್ಕೆ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್...FIFA World Cup

ಪ್ರಮುಖ ಮುಖ್ಯಾಂಶಗಳು

  • 2026ರ ವಿಶ್ವಕಪ್ ಆತಿಥ್ಯ ಅಮೆರಿಕ, ಕೆನಡಾ, ಮೆಕ್ಸಿಕೋ ಪಾಲಾಗಿದ್ದೇಕೆ? ಇಲ್ಲಿದೆ ಫಿಫಾ ವೋಟಿಂಗ್‌ನ ಇಂಟರೆಸ್ಟಿಂಗ್ ಕಥೆ!
  • ಬಿಡ್ಡಿಂಗ್‌ನಿಂದ ವೋಟಿಂಗ್‌ವರೆಗೆ... ಜಗತ್ತಿನ ಅತಿ ದೊಡ್ಡ ಕ್ರೀಡಾ ಹಬ್ಬದ ಆತಿಥ್ಯದ ಹಿಂದಿರುವ ಅಸಲಿ ‘ಆಟ’ವೇನು?
  • 80,000 ಆಸನಗಳು, ಬಿಲಿಯನ್ ಡಾಲರ್ ಸೌಕರ್ಯ... ವಿಶ್ವಕಪ್ ಆಯೋಜಿಸಲು ದೇಶಗಳಿಗೆ ಇರಬೇಕಾದ ಅರ್ಹತೆಗಳೇನು?
  • ಫುಟ್‌ಬಾಲ್ ಹಬ್ಬದ ಆತಿಥ್ಯದ ಹಿಂದಿದೆ ವರ್ಷಗಳ ಕಸರತ್ತು... ಇಲ್ಲಿದೆ ಮಹಾಹಬ್ಬದ ಕಂಪ್ಲೀಟ್ ಎಕ್ಸ್‌ಪ್ಲೇನರ್
FIFA World Cup : ಜಗತ್ತಿನ ಅತ್ಯಂತ ಜನಪ್ರಿಯ ಮತ್ತು ಬೃಹತ್ ಕ್ರೀಡಾ ಹಬ್ಬವೆಂದೇ ಜನಪ್ರಿಯವಾಗಿರುವ 'ಫಿಫಾ ವಿಶ್ವಕಪ್' ಆತಿಥ್ಯ ವಹಿಸುವುದೆಂದರೆ ಮಾತನಾಡುವಷ್ಟು ಸುಲಭವಲ್ಲ. ಈ ಒಂದು ಪಂದ್ಯಾವಳಿಯನ್ನು ನಡೆಸುವುದೆಂದರೆ, ಇಡೀ ಜಗತ್ತಿನ ಎದುರು ಆ ದೇಶದ ಘನತೆ, ಪ್ರತಿಷ್ಠೆ ಮತ್ತು ಆಡಳಿತಾತ್ಮಕ ಶಕ್ತಿಯನ್ನು ಅನಾವರಣಗೊಳಿಸುವ ಬಂಗಾರದಂತಹ ಅವಕಾಶವಾಗಿದೆ.
ಹೌದು, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಇಡೀ ಭೂಮಂಡಲವನ್ನೇ ತನ್ನತ್ತ ಕೈಬೀಸಿ ಕರೆಯುವ ಈ ಫುಟ್‌ಬಾಲ್ ಮಹೋತ್ಸವದ 23ನೇ ಆವೃತ್ತಿ ಈಗ ಭರ್ಜರಿಯಾಗಿ ಸಾಗುತ್ತಿದೆ. ಆದರೆ, ಇಷ್ಟು ದೊಡ್ಡ ಜವಾಬ್ದಾರಿಯ ಆತಿಥ್ಯವನ್ನು ಒಂದು ದೇಶಕ್ಕೆ ನೀಡುವ ನಿರ್ಧಾರ ಅಷ್ಟು ಸುಲಭದ್ದಲ್ಲ. ಇದರ ಸುತ್ತ ದೊಡ್ಡ ಮಟ್ಟದ ಚರ್ಚೆಗಳು, ರಾಜತಾಂತ್ರಿಕ ತಂತ್ರಗಳು ಮತ್ತು ಸುದೀರ್ಘ ವಾದ-ವಿವಾದಗಳೇ ನಡೆಯುತ್ತವೆ.
ಹಾಗಾದರೆ, ಇಡೀ ವಿಶ್ವವೇ ಕಣ್ಣಿಡುವ ಈ ಜಾಗತಿಕ ವೇದಿಕೆಯನ್ನು ಅಲಂಕರಿಸಲು ಒಂದು ದೇಶ ಏನೆಲ್ಲಾ ಕರಸರತ್ತು ಮಾಡಬೇಕಾಗುತ್ತದೆ? ನೂರಾರು ದೇಶಗಳ ಪೈಪೋಟಿಯ ನಡುವೆ ಫಿಫಾ ಆತಿಥ್ಯ ವಹಿಸುವ ದೇಶವನ್ನು ಕೊನೆಗೆ ಆಯ್ಕೆ ಮಾಡುವುದು ಹೇಗೆ? ಈ ಮಹಾಸಮರವನ್ನು ತನ್ನ ನೆಲದಲ್ಲಿ ನಡೆಸಲು ಒಂದು ದೇಶಕ್ಕೆ ಇರಬೇಕಾದ ಅರ್ಹತೆಗಳೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ...
ಅಂದಹಾಗೆ, ಫಿಫಾ ವಿಶ್ವಕಪ್ ಆತಿಥ್ಯದ ಹಕ್ಕನ್ನು ಪಡೆಯುವುದು ಅತ್ಯಂತ ವ್ಯವಸ್ಥಿತ ಹಾಗೂ ಸುದೀರ್ಘ ಪ್ರಕ್ರಿಯೆಯಾಗಿದೆ. ಇದೆಲ್ಲ ಒಂದೆರೆಡು ತಿಂಗಳುಗಳಲ್ಲಿ ತೆಗೆದುಕೊಳ್ಳುವ ನಿರ್ಧಾರವಲ್ಲ, ವರ್ಷಗಳೇ ಬೇಕಾಗುತ್ತದೆ. ಈ ಮಹತ್ವದ ಪಂದ್ಯಾವಳಿಯನ್ನು ನಡೆಸಲು ಆಸಕ್ತಿ ಹೊಂದಿರುವ ದೇಶಗಳು ಮೊದಲು ಫಿಫಾ ಸಂಸ್ಥೆಗೆ ಅತ್ಯಂತ ವಿವರವಾದ ಪ್ರಸ್ತಾವನೆಗಳನ್ನು ಸಲ್ಲಿಸಬೇಕಾಗುತ್ತದೆ. ತದನಂತರ, ಫಿಫಾ ಸಮಿತಿಯು ಆ ದೇಶಗಳ ಕ್ರೀಡಾಂಗಣಗಳು, ಮೂಲಸೌಕರ್ಯ ಹಾಗೂ ಭದ್ರತೆ ಸೇರಿದಂತೆ ಪ್ರತಿಯೊಂದು ಅಂಶವನ್ನು ಕಟ್ಟುನಿಟ್ಟಾದ ನಿಯಮಗಳ ಅಡಿಯಲ್ಲಿ ತೀವ್ರ ತಪಾಸಣೆಗೆ ಒಳಪಡಿಸುತ್ತದೆ. ಈ ಕಠಿಣ ಮೌಲ್ಯಮಾಪನದ ನಂತರ, ಅಂತಿಮವಾಗಿ 'ಫಿಫಾ ಕಾಂಗ್ರೆಸ್ ಕಮಿಟಿ' ನಡೆಸುವ ಅಧಿಕೃತ ಮತದಾನದ ಪ್ರಕ್ರಿಯೆಯ ಮೂಲಕವೇ ವಿಶ್ವಕಪ್ ಆತಿಥ್ಯ ವಹಿಸುವ ಅದೃಷ್ಟಶಾಲಿ ದೇಶ ಯಾವುದು ಎಂಬುದನ್ನು ಅಂತಿಮವಾಗಿ ನಿರ್ಧರಿಸಲಾಗುತ್ತದೆ. ಒಟ್ಟಾರೆ ಏನೆಲ್ಲ ಪ್ರಕ್ರಿಯೆಗಳು ನಡೆಯುತ್ತವೆ ಅನ್ನೋದನ್ನು ನಾವೀಗ ವಿವರವಾಗಿ ತಿಳಿದುಕೊಳ್ಳೋಣ.

ಬಿಡ್​ಗೆ ಆಹ್ವಾನ

ಮೊದಲಿಗೆ ಬಿಡ್​ ಆಹ್ವಾನಿಸಲಾಗುತ್ತದೆ. ವಿಶ್ವಕಪ್ ಆತಿಥ್ಯದ ಈ ಸುದೀರ್ಘ ಪ್ರಕ್ರಿಯೆಯು ಪಂದ್ಯಾವಳಿ ಆರಂಭವಾಗುವುದಕ್ಕೂ ಹಲವು ವರ್ಷಗಳ ಮುನ್ನವೇ ಜಾರಿಗೆ ಬರುತ್ತದೆ. ಫಿಫಾ ತನ್ನ ಒಟ್ಟು 211 ಸದಸ್ಯ ರಾಷ್ಟ್ರಗಳಿಗೆ ಅಧಿಕೃತವಾಗಿ ಬಿಡ್ ಸಲ್ಲಿಸಲು ಆಹ್ವಾನ ನೀಡುತ್ತದೆ. ಪ್ರಸ್ತುತ ನಡೆಯುತ್ತಿರುವ 2026ರ ವಿಶ್ವಕಪ್ ಆತಿಥ್ಯಕ್ಕಾಗಿ ಮೊರಾಕೊ ದೇಶದ ವೈಯಕ್ತಿಕ ಬಿಡ್ ಹಾಗೂ ಕೆನಡಾ, ಮೆಕ್ಸಿಕೋ ಮತ್ತು ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ದೇಶಗಳ ಜಂಟಿ ಬಿಡ್ ಸೇರಿದಂತೆ ಕೇವಲ ಎರಡು ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದವು. ಈ ಬಾರಿಯ ಆತಿಥ್ಯದ ಆಯ್ಕೆ ಪ್ರಕ್ರಿಯೆಯನ್ನು ಪ್ರಮುಖವಾಗಿ ನಾಲ್ಕು ಹಂತಗಳಲ್ಲಿ ನಡೆಸಲಾಗಿತ್ತು. ಮೇ 2016 ರಿಂದ ಮೇ 2017 ರವರೆಗೆ ಹೊಸ ಕಾರ್ಯತಂತ್ರ ಮತ್ತು ಸಮಾಲೋಚನಾ ಹಂತ, ಜೂನ್ 2017 ರಿಂದ ಡಿಸೆಂಬರ್ 2018 ರವರೆಗೆ ಬಿಡ್ ಸಿದ್ಧತೆಯ ಸುಧಾರಿತ ಹಂತ, ಜನವರಿ 2019 ರಿಂದ ಫೆಬ್ರವರಿ 2020 ರವರೆಗೆ ಸಲ್ಲಿಕೆಯಾದ ಬಿಡ್‌ಗಳ ತೀವ್ರ ಮೌಲ್ಯಮಾಪನ ಹಂತ ಮತ್ತು ಅಂತಿಮವಾಗಿ ಮೇ 2020 ರಲ್ಲಿ ಆತಿಥ್ಯ ವಹಿಸುವ ದೇಶಗಳ ಕುರಿತು ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಯಿತು.

ಪ್ರಸ್ತಾವನೆ ಮೌಲ್ಯಮಾಪನ

ಈ ಹಂತದಲ್ಲಿ, ವಿಶ್ವಕಪ್ ಆತಿಥ್ಯದ ಹಕ್ಕನ್ನು ಪಡೆಯಲು ಬಯಸುವ ಅಭ್ಯರ್ಥಿ ರಾಷ್ಟ್ರಗಳು ಅಥವಾ ಜಂಟಿ ದೇಶಗಳ ಒಕ್ಕೂಟಗಳು ತಮ್ಮ ಸಂಪೂರ್ಣ ಬಿಡ್ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ತದನಂತರ, ಫಿಫಾದ ಆಡಳಿತ ಮಂಡಳಿ ಮತ್ತು ವಿಶೇಷ ಬಿಡ್ ಮೌಲ್ಯಮಾಪನ ಕಾರ್ಯಪಡೆಯು ಪಂದ್ಯಾವಳಿಯನ್ನು ಆಯೋಜಿಸಲು ಆ ದೇಶಗಳಿಗೆ ಇರುವ ತಾಂತ್ರಿಕ ಹಾಗೂ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಅತ್ಯಂತ ಕಟ್ಟುನಿಟ್ಟಾದ ಮಾನದಂಡಗಳ ಅಡಿಯಲ್ಲಿ ಪರಿಶೀಲಿಸುತ್ತವೆ. ವಿಶೇಷವೆಂದರೆ, 2026ರ ವಿಶ್ವಕಪ್ ಆತಿಥ್ಯದ ಬಿಡ್‌ಗಳನ್ನು ಮೌಲ್ಯಮಾಪನ ಮಾಡಿದ ಈ ಉನ್ನತ ಮಟ್ಟದ ಕಾರ್ಯಪಡೆಯಲ್ಲಿ ಆಡಿಟ್ ಮತ್ತು ಕಂಪ್ಲೈಯನ್ಸ್ ಸಮಿತಿಯ ಅಧ್ಯಕ್ಷರಾದ ತೋಮಾಜ್ ವೆಸೆಲ್, ಗೌರ್ನೆನ್ಸ್ ಸಮಿತಿಯ ಅಧ್ಯಕ್ಷರಾದ ಮುಕುಲ್ ಮುದ್ಗಲ್, ಫಿಫಾ ಸ್ಪರ್ಧೆಗಳ ಆಯೋಜನಾ ಸಮಿತಿಯ ಸದಸ್ಯರಾದ ಇಲ್ಕೊ ಜಾರ್ಜಿಯೋಸ್ಕಿ ಹಾಗೂ ಫಿಫಾ ಉಪ ಪ್ರಧಾನ ಕಾರ್ಯದರ್ಶಿಗಳಾದ ಜ್ವೋನಿಮಿರ್ ಬೋಬನ್ (ಫುಟ್‌ಬಾಲ್) ಮತ್ತು ಮಾರ್ಕೊ ವಿಲ್ಲಿಗರ್ (ಆಡಳಿತ) ಅವರು ಪ್ರಮುಖ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

ಮೂರು ಮಾನದಂಡಗಳಲ್ಲಿ ಪರಿಶೀಲನೆ

ಫಿಫಾದ ಈ ವಿಶೇಷ ಮೌಲ್ಯಮಾಪನ ಕಾರ್ಯಪಡೆಯು ಆತಿಥ್ಯ ಕೋರಿ ಸಲ್ಲಿಕೆಯಾಗುವ ಪ್ರಸ್ತಾವನೆಗಳನ್ನು ಪ್ರಮುಖವಾಗಿ ಮೂರು ಕಟ್ಟುನಿಟ್ಟಾದ ಮಾನದಂಡಗಳ ಅಡಿಯಲ್ಲಿ ಪರಿಶೀಲಿಸುತ್ತದೆ. ಮೊದಲನೆಯದಾಗಿ, ಮೂಲಸೌಕರ್ಯ ಮತ್ತು ಕ್ರೀಡಾಂಗಣಗಳ ಸಾಮರ್ಥ್ಯವನ್ನು ಕ್ರೀಡಾಂಗಣಗಳ ಗಾತ್ರ, ತರಬೇತಿ ಕೇಂದ್ರಗಳು, ತಂಡಗಳ ಬೇಸ್ ಕ್ಯಾಂಪ್‌ಗಳು ಮತ್ತು ರೆಫರಿಗಳ ಸೌಲಭ್ಯಗಳ ಆಧಾರದ ಮೇಲೆ ಮೌಲ್ಯೀಕರಿಸಲಾಗುತ್ತದೆ. ಎರಡನೆಯದಾಗಿ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವಿಭಾಗದಲ್ಲಿ, ವಿಶ್ವದಾದ್ಯಂತ ಬರುವ ಲಕ್ಷಾಂತರ ಅಭಿಮಾನಿಗಳಿಗೆ ಯಾವುದೇ ತೊಂದರೆಯಾಗದಂತೆ ಸುಗಮ ಪ್ರಯಾಣದ ಅನುಭವ ನೀಡಲು ಆತಿಥೇಯ ನಗರಗಳ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ವಿಮಾನ ನಿಲ್ದಾಣಗಳ ಸಾಮರ್ಥ್ಯ ಮತ್ತು ಹೆದ್ದಾರಿ ಜಾಲಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಕೊನೆಯದಾಗಿ, ಪಂದ್ಯಾವಳಿಯಲ್ಲಿ ಭಾಗವಹಿಸುವ ವಿವಿಧ ದೇಶಗಳ ಆಟಗಾರರು, ತರಬೇತುದಾರರು ಮತ್ತು ಫಿಫಾ ಅಧಿಕಾರಿಗಳಿಗೆ ಉತ್ತಮ ವಾಸ್ತವ್ಯ ಕಲ್ಪಿಸಲು ಆಯಾ ನಗರಗಳಲ್ಲಿ ಲಭ್ಯವಿರುವ ವಿವಿಧ ಶ್ರೇಣಿಯ ಸ್ಟಾರ್ ಹೊಟೇಲ್‌ಗಳ ವಸತಿ ಸೌಕರ್ಯಗಳ ಲಭ್ಯತೆಯನ್ನು ಕಡ್ಡಾಯವಾಗಿ ಮೌಲ್ಯಮಾಪನ ಮಾಡಲಾಗುತ್ತದೆ.

ಕ್ರೀಡಾಂಗಣಗಳಲ್ಲಿ ಆಸನಗಳ ಸಾಮರ್ಥ್ಯಕ್ಕೂ ಒಂದು ಮಾನದಂಡವಿದೆ

ವಿಶ್ವಕಪ್ ಪಂದ್ಯಾವಳಿಯ ಕ್ರೀಡಾಂಗಣಗಳ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಫಿಫಾ ಅತ್ಯಂತ ಕಟ್ಟುನಿಟ್ಟಾದ ಆಸನ ಸಾಮರ್ಥ್ಯದ ನಿಯಮಗಳನ್ನು ಹೊಂದಿದೆ. ಇದರ ಅನ್ವಯ, ಆರಂಭಿಕ ಲೀಗ್ ಹಂತದ ಗ್ರೂಪ್ ಮ್ಯಾಚ್‌ಗಳು ಮತ್ತು ನಾಕೌಟ್ ಪಂದ್ಯಗಳನ್ನು ಆಯೋಜಿಸಲು ಕ್ರೀಡಾಂಗಣದಲ್ಲಿ ಕನಿಷ್ಠ 40,000 ಆಸನಗಳ ಸಾಮರ್ಥ್ಯ ಇರಬೇಕಾಗುತ್ತದೆ. ಅದೇ ರೀತಿ, ರೋಚಕ ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳನ್ನು ನಡೆಸಲು ಕನಿಷ್ಠ 60,000 ಆಸನಗಳ ವ್ಯವಸ್ಥೆ ಇರಬೇಕು ಮತ್ತು ಇಡೀ ಟೂರ್ನಿಯ ಅತ್ಯಂತ ಪ್ರತಿಷ್ಠಿತ ಪಂದ್ಯಗಳಾದ ಉದ್ಘಾಟನಾ ಪಂದ್ಯ ಹಾಗೂ ಅಂತಿಮ ಮಹಾಸಮರ ನಡೆಸುವ ಕ್ರೀಡಾಂಗಣಗಳಲ್ಲಿ ಕಡ್ಡಾಯವಾಗಿ ಕನಿಷ್ಠ 80,000 ಆಸನಗಳ ಬೃಹತ್ ಸಾಮರ್ಥ್ಯ ಇರಲೇಬೇಕು ಎಂದು ಫಿಫಾ ನಿಯಮಾವಳಿಗಳು ಸ್ಪಷ್ಟಪಡಿಸುತ್ತವೆ.

2026ರ ವಿಶ್ವಕಪ್​ ಕೆನಡಾ, ಅಮೆರಿಕ ಮತ್ತು ಮೆಕ್ಸಿಕೋ ಪಾಲಾಗಿದ್ದೇಕೆ?

ಬಿಡ್ ಮೌಲ್ಯಮಾಪನ ಹಂತದ ನಂತರ, ವಿಶೇಷ ಕಾರ್ಯಪಡೆಯು ನೀಡಿದ ತಾಂತ್ರಿಕ ವರದಿಗಳನ್ನು ಫಿಫಾ ಕೌನ್ಸಿಲ್ ಕೂಲಂಕಷವಾಗಿ ಪರಿಶೀಲಿಸಿ, ಅರ್ಹತೆ ಪಡೆದ ಬಿಡ್‌ಗಳನ್ನು ಅಂತಿಮ ಹಂತಕ್ಕೆ ಶಾರ್ಟ್‌ಲಿಸ್ಟ್ ಮಾಡುತ್ತದೆ. 2026ರ ವಿಶ್ವಕಪ್ ಆತಿಥ್ಯದ ಪ್ರಕ್ರಿಯೆಯಲ್ಲಿ ಫಿಫಾ ಕೌನ್ಸಿಲ್ ಹೀಗೆ ಎರಡು ಬಿಡ್‌ಗಳನ್ನು ಅಂತಿಮ ಸುತ್ತಿಗೆ ಕಳುಹಿಸಿತ್ತು, ಇದರಲ್ಲಿ ಒಂದು ಮೊರಾಕೊ ದೇಶದ ಪ್ರಸ್ತಾವನೆಯಾಗಿದ್ದರೆ, ಮತ್ತೊಂದು ಕೆನಡಾ, ಅಮೆರಿಕ ಮತ್ತು ಮೆಕ್ಸಿಕೋ ದೇಶಗಳ ಜಂಟಿ ಬಿಡ್ ಆಗಿತ್ತು. ಆದರೆ, ಫಿಫಾ ಬಿಡುಗಡೆ ಮಾಡಿದ ಬಿಡ್ ಮೌಲ್ಯಮಾಪನ ವರದಿಯಲ್ಲಿ ಮೊರಾಕೊ ದೇಶದ ಸಿದ್ಧತೆಗಳು ತಾಂತ್ರಿಕವಾಗಿ 'ಹೆಚ್ಚಿನ ಅಪಾಯ' ಹೊಂದಿವೆ ಎಂದು ಗುರುತಿಸಲಾಗಿದ್ದರೆ, ಮೂರು ದೇಶಗಳ ಜಂಟಿ ಬಿಡ್ ಅನ್ನು ಅತ್ಯಂತ ಸುರಕ್ಷಿತ ಅಂದರೆ 'ಕಡಿಮೆ ಅಪಾಯ' ಎಂದು ವರ್ಗೀಕರಿಸಲಾಗಿತ್ತು.
ವಿಶ್ವಕಪ್ ಆತಿಥ್ಯದ ಅಂತಿಮ ಮತ್ತು ನಿರ್ಣಾಯಕ ತೀರ್ಮಾನವನ್ನು 'ಫಿಫಾ ಕಾಂಗ್ರೆಸ್' ಕೈಗೊಳ್ಳುತ್ತದೆ; ಇಲ್ಲಿ ಫಿಫಾದ ಪ್ರತಿಯೊಂದು ರಾಷ್ಟ್ರೀಯ ಸದಸ್ಯ ಸಂಸ್ಥೆಗೂ ನಿಖರವಾಗಿ ಒಂದು ಮತದ ಹಕ್ಕಿರುತ್ತದೆ. ಶಾರ್ಟ್‌ಲಿಸ್ಟ್ ಆದ ಬಿಡ್‌ಗಳ ಮೇಲೆ ಕಾಂಗ್ರೆಸ್ ಸಮಿತಿಯು ಸಮಗ್ರ ಮತದಾನ ಪ್ರಕ್ರಿಯೆಯನ್ನು ನಡೆಸುತ್ತದೆ. ಈ ಮತದಾನದಲ್ಲಿ ಯಾವುದೇ ಒಂದು ಬಿಡ್ ಶೇ. 50 ಕ್ಕಿಂತ ಹೆಚ್ಚು ಅಂದರೆ ಸ್ಪಷ್ಟ ಬಹುಮತವನ್ನು ಪಡೆದರೆ, ಅದಕ್ಕೆ ಪಂದ್ಯಾವಳಿಯ ಆತಿಥ್ಯದ ಹಕ್ಕನ್ನು ನೀಡಲಾಗುತ್ತದೆ. ಒಂದು ವೇಳೆ ಮೊದಲ ಸುತ್ತಿನಲ್ಲಿ ಯಾವುದೇ ಬಿಡ್‌ಗೆ ಸ್ಪಷ್ಟ ಬಹುಮತ ಸಿಗದಿದ್ದರೆ, ಎರಡನೇ ಸುತ್ತಿನ ಮತದಾನವನ್ನು ನಡೆಸಲಾಗುತ್ತದೆ. ಈ ನಿಯಮದಂತೆ ನಡೆದ 2026ರ ವಿಶ್ವಕಪ್ ಆತಿಥ್ಯದ ಅಂತಿಮ ಚುನಾವಣೆಯಲ್ಲಿ, ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ಒಳಗೊಂಡ ಜಂಟಿ ಬಿಡ್ ಬರೋಬ್ಬರಿ 134 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿದರೆ, ಇದರ ಎದುರಾಳಿಯಾಗಿದ್ದ ಮೊರಾಕೊ ದೇಶದ ಬಿಡ್ ಕೇವಲ 65 ಮತಗಳನ್ನು ಪಡೆಯಲಷ್ಟೇ ಶಕ್ತವಾಯಿತು.
ವಿಶ್ವಕಪ್ ಆತಿಥ್ಯ ಆಯ್ಕೆಯ ಇಡೀ ಪ್ರಕ್ರಿಯೆಯ ಕೊನೆಯ ಮತ್ತು ಅತ್ಯಂತ ಪ್ರಮುಖ ಹಂತವೇ ಅಧಿಕೃತ ಪ್ರಕಟಣೆ. ಮತದಾನದ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದ ತಕ್ಷಣ, ಮುಂಬರುವ ಜಾಗತಿಕ ಫುಟ್‌ಬಾಲ್ ಮಹಾಸಮರವನ್ನು ಯಾವ ದೇಶ ಅಥವಾ ದೇಶಗಳು ಆಯೋಜಿಸಲಿವೆ ಎಂಬುದನ್ನು ಫಿಫಾ ಜಗತ್ತಿನ ಎದುರು ಅಧಿಕೃತವಾಗಿ ಘೋಷಿಸುತ್ತದೆ. ಈ ನಿಯಮದಂತೆಯೇ, ಪ್ರಸ್ತುತ ನಡೆಯುತ್ತಿರುವ 2026ರ ಫಿಫಾ ವಿಶ್ವಕಪ್ ಆತಿಥ್ಯದ ಜವಾಬ್ದಾರಿಯನ್ನು ಕೆನಡಾ, ಮೆಕ್ಸಿಕೋ ಮತ್ತು ಯುನೈಟೆಡ್ ಸ್ಟೇಟ್ಸ್ ದೇಶಗಳಿಗೆ ಜಂಟಿಯಾಗಿ ನೀಡಲಾಗಿದೆ ಎಂಬ ಐತಿಹಾಸಿಕ ತೀರ್ಮಾನವನ್ನು ಫಿಫಾ ಜೂನ್ 13, 2018 ರಂದೇ ಅಧಿಕೃತವಾಗಿ ಘೋಷಣೆ ಮಾಡಿತು, (ಏಜೆನ್ಸೀಸ್​).