ಬೆಂಗಳೂರು: ಪುರುಷರ ಐಪಿಎಲ್ ಟೂರ್ನಿ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಳಿಕ ಮಹಿಳಾ ಕ್ರಿಕೆಟಿಗರ ಕನಸಿಗೆ ರೆಕ್ಕೆ ನೀಡಿದ "ಮಹಿಳಾ ಐಪಿಎಲ್' ಖ್ಯಾತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲುಪಿಎಲ್) ಎರಡನೇ ಆವೃತ್ತಿಗೆ ಶುಕ್ರವಾರ ಅಧಿಕೃತ ಚಾಲನೆ ದೊರೆಯಲಿದೆ. ಮೊದಲ ಆವೃತ್ತಿಯನ್ನು ಮುಂಬೈ ನಗರದಲ್ಲಿ ಯಶಸ್ವಿಯಾಗಿ ಆಯೋಜಿಸಿದ್ದ ಬಿಸಿಸಿಐ, ಮಹಿಳಾ ಕ್ರಿಕೆಟ್ಗೆ ಉತ್ತೇಜನ ನೀಡುವ ದೃಷ್ಟಿಯಿಂದ ಈ ಬಾರಿ ಎರಡು ಪ್ರಮುಖ ನಗರಗಳಲ್ಲಿ ಆಯೋಜಿಸುತ್ತಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂ ಹಾಗೂ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಿಗದಿಯಾಗಿದ್ದು, 24 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 5 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರನ್ನರ್ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.
ಆರ್ಸಿಬಿ ಮಹಿಳಾ ತಂಡ ಎರಡನೇ ದಿನ ಯುಪಿ ವಾರಿಯರ್ಸ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಕಳೆದ ಬಾರಿ ನೀರಸ ನಿರ್ವಹಣೆ ತೋರಿದ್ದ ಸ್ಮೃತಿ ಮಂದನಾ ನೇತೃತ್ವದ ಬೆಂಗಳೂರು ತಂಡ ಈ ಬಾರಿ ತವರು ಅಭಿಮಾನಿಗಳ ಬೆಂಬಲದೊಂದಿಗೆ "ಈ ಸಲ ಕಪ್' ತನ್ನದಾಗಿಸಿಕೊಳ್ಳಲಿದೆ ಎಂಬ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.
5 ತಂಡಗಳ ನಾಯಕಿಯರು
*ಬೆತ್ ಮೂನಿ (ಗುಜರಾತ್ ಜೈಂಟ್ಸ್)
*ಅಲಿಸ್ಸಾ ಹೀಲಿ (ಯುಪಿ ವಾರಿಯರ್ಸ್)
*ಮೆಗ್ ಲ್ಯಾನಿಂಗ್ (ಡೆಲ್ಲಿ ಕ್ಯಾಪಿಟಲ್ಸ್)
*ಸ್ಮೃತಿ ಮಂದನಾ (ಆರ್ಸಿಬಿ)
*ಹರ್ಮಾನ್ಪ್ರೀತ್ ಕೌರ್ (ಮುಂಬೈ ಇಂಡಿಯನ್ಸ್)
ತವರು-ಎದುರಾಳಿ ನೆಲದ ನಿಯಮವಿಲ್ಲ
ಕಳೆದ ಬಾರಿಯಂತೆ ತವರು-ಎದುರಾಳಿ ಎಂಬ ನಿಯಮವಿಲ್ಲದೆ ಪಂದ್ಯಗಳನ್ನು ನಿಗದಿ ಮಾಡಲಾಗಿದ್ದು, ಮೊದಲ ಚರಣದ 11 ಲೀಗ್ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಗೂ ಎರಡನೇ ಚರಣದ ಲೀಗ್, ಪ್ಲೇಆಫ್ ಹಾಗೂ ಫೈನಲ್ ಪಂದ್ಯ ಸೇರಿ ಒಟ್ಟು 11 ಪಂದ್ಯಗಳು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿವೆ.
ಬಹುಮಾನ ಮೊತ್ತ: ಒಟ್ಟು 10 ಕೋಟಿ ರೂ.
ಚಾಂಪಿಯನ್: 6 ಕೋಟಿ ರೂ.
ರನ್ನರ್ಅಪ್: 3 ಕೋಟಿ ರೂ.
3ನೇ ಸ್ಥಾನಿ: 1 ಕೋಟಿ ರೂ.
ರೌಂಡ್ ರಾಬಿನ್ ಲೀಗ್
ಟೂರ್ನಿಯಲ್ಲಿ ಆಡುವ ಒಟ್ಟು 5 ತಂಡಗಳು ಲೀಗ್ ಹಂತದಲ್ಲಿ ರೌಂಡ್ ರಾಬಿನ್ ಮಾದರಿಯಲ್ಲಿ ತಲಾ 2 ಬಾರಿ ಮುಖಾಮುಖಿ ಆಗಲಿವೆ. ಲೀಗ್ ಹಂತದಲ್ಲಿ ಎಲ್ಲ ತಂಡಗಳು ತಲಾ 8 ಪಂದ್ಯ ಆಡಲಿವೆ. ಅಂತಿಮವಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್ಗೇರಲಿದೆ. 2&3ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಫೈನಲ್ಗೇರಲು ಹೋರಾಡಲಿವೆ. ಮಾರ್ಚ್ 17ರಂದು ಫೈನಲ್ ಪಂದ್ಯ ನಡೆಯಲಿದೆ.
ಆರ್ಸಿಬಿಗೆ ಸ್ಮೃತಿ ಸಾರಥ್ಯ
ಚೊಚ್ಚಲ ಆವೃತ್ತಿಯಲ್ಲಿ ನಿರೀಕ್ಷೆಗೆ ತಕ್ಕ ನಿರ್ವಹಣೆ ತೋರುವಲ್ಲಿ ವಿಫಲವಾಗಿರುವ ಆರ್ಸಿಬಿ ತಂಡವನ್ನು ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂದನಾ ಈ ಬಾರಿಯೂ ಮುನ್ನಡೆಸಲಿದ್ದಾರೆ. ಕನ್ನಡತಿ, ಆಲ್ರೌಂಡರ್ ಶ್ರೇಯಾಂಕ ಪಾಟೀಲ್, ವಿಶ್ವದ ಶ್ರೇಷ್ಠ ಆಲ್ರೌಂಡರ್ ಆಸ್ಟ್ರೆಲಿಯಾದ ಎಲ್ಲಿಸ್ ಪೆರ್ರಿ, ವಿಕೆಟ್ ಕೀಪರ್ ರಿಚಾ ಘೋಚ್, ಬೌಲಿಂಗ್ನಲ್ಲಿ ರೇಣುಕಾ ಸಿಂಗ್ ಪ್ರಮುಖ ಆಟಗಾರ್ತಿಯರಾಗಿದ್ದು, ಅನುಭವಿ ಸ್ಪಿನ್ನರ್ ಏಕ್ತಾ ಬಿಷ್ತ್ ಈ ಬಾರಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಆಡಿದ 8 ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಆರ್ಸಿಬಿ, ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿತ್ತು.
ಮುಂಬೈ ಇಂಡಿಯನ್ಸ್ ಮತ್ತೆ ಫೇವರಿಟ್
ಚೊಚ್ಚಲ ಆವೃತ್ತಿಯಲ್ಲಿ ಸತತ ಐದು ಪಂದ್ಯ ಗೆದ್ದ ದಾಖಲೆ ಹೊಂದಿರುವ ಭಾರತ ತಂಡದ ನಾಯಕಿ ಹರ್ಮಾನ್ಪ್ರೀತ್ ಕೌರ್ ಸಾರಥ್ಯದ ಮುಂಬೈ ಇಂಡಿಯನ್ ತಂಡ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಣಕ್ಕಿಳಿಯಲಿದೆ. ಪುರುಷರ ಐಪಿಎಲ್ ತಂಡದಂತೆ ಡಬ್ಲುಪಿಎಲ್ನಲ್ಲಿಯೂ ಮುಂಬೈ ಪ್ರಾಬಲ್ಯ ಸಾಧಿಸಿದ್ದು, ವಿಂಡೀಸ್ನ ಹ್ಯಾಲೆ ಮ್ಯಾಥ್ಯೂಸ್ ಮೊದಲ ಆವೃತ್ತಿಯಲ್ಲಿ ಪರ್ಪಲ್ ಕ್ಯಾಪ್ (ಗರಿಷ್ಠ ವಿಕೆಟ್) ಒಲಿಸಿಕೊಂಡಿದ್ದರು. ಇಂಗ್ಲೆಂಡ್ ನ್ಯಾಟ್ ಸೀವರ್ ಬ್ರಂಟ್, ನ್ಯೂಜಿಲೆಂಡ್ನ ಅಮೆಲಿಯಾ ಕೆರ್ ಪೂಜಾ ವಸ್ತ್ರಾಕರ್, ಹ್ಯಾಟ್ರಿಕ್ ಸಾಧಿಸಿರುವ ಇಸ್ಸಿ ವಾಂಗ್ ತಂಡದ ಪ್ರಮುಖ ಆಟಗಾರ್ತಿಯರು.
ಡೆಲ್ಲಿ ಕ್ಯಾಪಿಟಲ್ಸ್
ಅತ್ಯಂತ ಯಶಸ್ವಿ ಮಹಿಳಾ ಕ್ಯಾಪ್ಟನ್ ಆಸೀಸ್ ಮೆಗ್ ಲ್ಯಾನಿಂಗ್ ತಂಡವನ್ನು ಮುನ್ನಡೆಸಲಿದ್ದು, ಕಳೆದ ಬಾರಿ ತಪ್ಪಿದ ಪ್ರಶಸ್ತಿಯನ್ನು ಈ ಬಾರಿ ತನ್ನದಾಗಿಸಿಕೊಳ್ಳುವ ಹಂಬಲದಲ್ಲಿದೆ. ಶೆಫಾಲಿ ವರ್ಮ, ಜೆಮೀಮಾ ರೋಡ್ರಿಗಸ್ ಪ್ರಮುಖ ಆಟಗಾರ್ತಿಯರೆನಿಸಿದ್ದು, ಆಲ್ರೌಂಡರ್ ಅನ್ನಾಬೆಲ್ ಸುದರ್ಲ್ಯಾಡ್ ಸೇರ್ಪಡೆ ಹೆಚ್ಚಿನ ಬಲ ತಂದಿದೆ. ವಿಶ್ವದ ಪ್ರಮುಖ ಸ್ಟಾರ್ ಆಟಗಾರರನ್ನು ಒಳಗೊಂಡಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ.
ಯುಪಿ ವಾರಿಯರ್ಸ್
ಆಸ್ಟ್ರೆಲಿಯಾದ ಅಲೀಸ್ಸಾ ಹಿಲಿ ಯುಪಿ ವಾರಿಯರ್ಸ್ ನೇತೃತ್ವವನ್ನು ವಹಿಸಿಕೊಂಡಿದ್ದು, ಭಾರತದ ಮಹಿಳಾ ತಂಡದ ಆಲ್ರೌಂಡರ್ ದೀಪ್ತಿ ಶರ್ಮ ಸ್ಟಾರ್ ಪ್ಲೇಯರ್ ಆಗಿದ್ದಾರೆ. ಕರ್ನಾಟಕದ ಬ್ಯಾಟರ್ ಬ್ಯಾಟುಗಾರ್ತಿ ವೃಂದಾ ದಿನೇಶ್ ಅವರನ್ನು ದಾಖಲೆ ಮೊತ್ತಕ್ಕೆ ಖರೀದಿಸಿದೆ. ಇಂಗ್ಲೆಂಡ್ ಸೋಫಿ ಎಕೆಲ್ ಸ್ಟೋನ್ , ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ತಂಡದಲ್ಲಿರುವ ಪ್ರಮುಖರು. ಕಳೆದ ಆವೃತ್ತಿಯಲ್ಲಿ ಎಲಿಮಿನೇಟರ್ನಲ್ಲಿ ಸೋತು 3ನೇ ಸ್ಥಾನಿ ಎನಿಸಿತ್ತು.
ಗುಜರಾತ್ ಜೈಂಟ್ಸ್
ಉದ್ಘಾಟನಾ ಆವೃತ್ತಿಯಲ್ಲಿ ಕೊನೇ ಸ್ಥಾನ ಪಡೆದಿದ್ದ ಗುಜರಾತ್ ಜೈಂಟ್ಸ್ ಈ ಬಾರಿ ಹೊಸ ಆರಂಭ ಕಾಣುವ ನಿರೀೆಯಲ್ಲಿ ಕಣಕ್ಕಿಳಿಯಲಿದೆ. ಕಳೆದ ಆವೃತ್ತಿಯಲ್ಲಿ ಗಾಯದ ಸಮಸ್ಯೆಯಿಂದ ಟೂರ್ನಿ ಅರ್ಧದಲ್ಲಿ ಹೊರಬಿದ್ದ ನಾಯಕಿ ಬೆಥ್ ಮೂನಿ ಈ ಬಾರಿ ಪ್ರಶಸ್ತಿಯತ್ತ ಮುನ್ನಡೆಸುವ ವಿಶ್ವಾಸದಲ್ಲಿದ್ದಾರೆ. ಮುಖ್ಯ ಕೋಚ್ ಆಗಿ ಮೈಕೆಲ್ ಕ್ಲಿಂಗರ್ ಮೊದಲ ಸೀಸನ್ ಇದಾಗಿದೆ. ಆಲ್ರೌಂಡರ್ ಆಶ್ಲೇ ಗಾರ್ಡನ್, ಪೋಬಿ ಲಿಚ್ಪೀಲ್ಡ್, ಹರ್ಲಿನ್ ಡಿಯೋಲ್ ಬಲವಿದೆ.
ಐವರು ಕನ್ನಡತಿಯರು
ಡಬ್ಲುಪಿಎಲ್ನಲ್ಲಿ ಕನ್ನಡತಿಯರಾದ ಶ್ರೇಯಾಂಕಾ ಪಾಟೀಲ್, ಶುಭಾ ಸತೀಶ್ (ಆರ್ಸಿಬಿ), ವೇದಾ ಕೃಷ್ಣಮೂರ್ತಿ (ಗುಜರಾತ್), ವೃಂದಾ ದಿನೇಶ್ , ರಾಜೇಶ್ವರಿ ಗಾಯಕ್ವಾಡ್ (ಯುಪಿ ವಾರಿಯರ್ಸ್) ಆಡಲಿದ್ದು, ಕಳೆದ ಬಾರಿ ಆಡಿದ್ದ ಸಹನಾ ಪವಾರ್ ಹಾಗೂ ಮೋನಿಕಾ ಪಟೇಲ್ ಈ ಬಾರಿ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದರು.
ವುಮೆನ್ಸ್ ಪ್ರೀಮಿಯರ್ ಲೀಗ್ ವೇಳಾಪಟ್ಟಿ
ದಿನಾಂಕ ಪಂದ್ಯ
ಬೆಂಗಳೂರು ಚರಣ (ಸ್ಥಳ: ಎಂ. ಚಿನ್ನಸ್ವಾಮಿ ಕ್ರೀಡಾಂಗಣ)
ಫೆ.23 ಮುಂಬೈ ಇಂಡಿಯನ್ಸ್-ಡೆಲ್ಲಿ ಕ್ಯಾಪಿಟಲ್ಸ್
ಫೆ.24 ಆರ್ಸಿಬಿ-ಯುಪಿ ವಾರಿಯರ್ಸ್
ಫೆ.25 ಗುಜರಾತ್ ಜೈಂಟ್ಸ್-ಮುಂಬೈ ಇಂಡಿಯನ್ಸ್
ಫೆ.26 ಯುಪಿ ವಾರಿಯರ್ಸ್-ಡೆಲ್ಲಿ ಕ್ಯಾಪಿಟಲ್ಸ್
ಫೆ.27 ಆರ್ಸಿಬಿ-ಗುಜರಾತ್ ಜೈಂಟ್
ಫೆ.28 ಮುಂಬೈ ಇಂಡಿಯನ್ಸ್-ಯುಪಿ ವಾರಿಯರ್ಸ್
ಫೆ.29 ಆರ್ಸಿಬಿ-ಡೆಲ್ಲಿ ಕ್ಯಾಪಿಟಲ್ಸ್
ಮಾ .1 ಯುಪಿ ವಾರಿಯರ್ಸ್-ಗುಜರಾತ್ ಜೈಂಟ್ಸ್
ಮಾ.2 ಆರ್ಸಿಬಿ-ಮುಂಬೈ ಇಂಡಿಯನ್ಸ್
ಮಾ.3 ಗುಜರಾತ್ ಜೈಂಟ್ಸ್-ಡೆಲ್ಲಿ ಕ್ಯಾಪಿಟಲ್ಸ್
ಮಾ.4 ಯುಪಿ ವಾರಿಯರ್ಸ್-ಆರ್ಸಿಬಿ
ದೆಹಲಿ ಚರಣ (ಸ್ಥಳ: ಅರುಣ್ ಜೇಟ್ಲಿ ಕ್ರೀಡಾಂಗಣ)
ಮಾ.5 ಡೆಲ್ಲಿ ಕ್ಯಾಪಿಟಲ್ಸ್&ಮುಂಬೈ ಇಂಡಿಯನ್ಸ್
ಮಾ.6 ಗುಜರಾತ್ ಜೈಂಟ್ಸ್&ಆರ್ಸಿಬಿ
ಮಾ.7 ಯುಪಿ ವಾರಿಯರ್ಸ್&ಮುಂಬೈ ಇಂಡಿಯನ್ಸ್
ಮಾ.8 ಡೆಲ್ಲಿ ಕ್ಯಾಪಿಟಲ್ಸ್- ಯುಪಿ ವಾರಿಯರ್ಸ್
ಮಾ.9 ಮುಂಬೈ ಇಂಡಿಯನ್ಸ್-ಗುಜರಾತ್ ಜೈಂಟ್ಸ್
ಮಾ.10 ಡೆಲ್ಲಿ ಕ್ಯಾಪಿಟಲ್ಸ್-ಆರ್ಸಿಬಿ
ಮಾ.11 ಗುಜರಾತ್ ಜೈಂಟ್ಸ್- ಯುಪಿ ವಾರಿಯರ್ಸ್
ಮಾ.12 ಮುಂಬೈ ಇಂಡಿಯನ್ಸ್-ಆರ್ಸಿಬಿ
ಮಾ.13 ಡೆಲ್ಲಿ ಕ್ಯಾಪಿಟಲ್ಸ್-ಗುಜರಾತ್ ಜೈಂಟ್ಸ್
ಮಾ.15 ಎಲಿಮಿನೇಟರ್
ಮಾ.17 ಫೈನಲ್
ಪಂದ್ಯಗಳು ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಪೋರ್ಟ್ಸ್18, ಜಿಯೋಸಿನಿಮಾ