ಕ್ರೀಡೆ

ಕ್ರಿಕೆಟ್​ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಕಿಂಗ್​ ಕೊಹ್ಲಿ

ಸೆಂಚುರಿಯನ್: ಟೀಂ ಇಂಡಿಯಾದ ಮಾಜಿ ನಾಯಕ, ರನ್​ ಮೆಷಿನ್​ ಎಂದೇ ಖ್ಯಾತಿ ಪಡೆದಿರುವ ವಿರಾಟ್​ ಕೊಹ್ಲಿಗೆ 2023 ವಿಶೇಷ ಎಂದೇ ಹೇಳಬಹುದಾಗಿದೆ. ಈಗಾಗಲೇ ಏಕದಿನ ವಿಶ್ವಕಪ್​ ಸೇರಿದಂತೆ ಹಲವು ಪಂದ್ಯಗಳಲ್ಲಿ ದಾಖಲೆ ಬರೆದಿರುವ ಕಿಂಗ್​ ಕೊಹ್ಲಿ ಈಗ ಮತ್ತೊಂದು ವಿಶ್ವದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸೆಂಚುರಿಯನ್​ನ ಸೂಪರ್​ಸ್ಪೋರ್ಟ್​ ಪಾರ್ಕ್​ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಅತಿಥೇಯರ ವಿರುದ್ಧ ಭಾರತ ತಂಡ ಇನ್ನಿಂಗ್ಸ್‌ ಹಾಗೂ 32 ರನ್‌ಗಳಿಂದ ಸೋಲುಂಡಿದೆ. ಸೋಲಿನ ನಡುವೆಯು ವಿರಾಟ್​ ಕೊಹ್ಲಿ ಅವರ ಈ ವಿಶಿಷ್ಟ ಸಾಧನೆ ಟೀಂ ಇಂಡಿಯಾಗೆ ಟಾನಿಕ್​ ಆಗಿ ಪರಿಣಮಿಸಬಹುದು ಎಂದು ಹೇಳಲಾಗಿದೆ.

ಡಿಸೆಂಬರ್​ 26ರಂದು ಆರಂಭವಾದ ಎರಡು ಪಂದ್ಯಗಳ ಟೆಸ್ಸ್​ ಸರಣಿಯಲ್ಲಿ ವಿರಾಟ್​ ಕೊಹ್ಲಿ 66 ರನ್​ಗಳನ್ನು ಬಾರಿಸಿದರೆ ಕ್ರಿಕೆಟ್​ ಇತಿಹಾಸದಲ್ಲೇ ಹೊಸ ದಾಖಲೆ ಒಂದನ್ನು ಬರೆಯಲಿದ್ದಾರೆ ಎಂದು ಹೇಳಲಾಗಿತ್ತು. ವಿರಾಟ್​ ಕೊಹ್ಲಿ ಎರಡು ಇನ್ನಿಂಗ್ಸ್​ನಲ್ಲಿ ಒಟ್ಟಾರೆಯಾಗಿ 114 ರನ್​ ಗಳಿಸಿದ್ದಾರೆ. ಈ ಮೂಲಕ ವರ್ಷವೊಂದರಲ್ಲಿ ಅತಿ ಹೆಚ್ಚು ಬಾರಿ 2 ಸಾವಿರ ರನ್​ ಕಲೆಹಾಕಿದ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ವಿರಾಟ್​ ಕೊಹ್ಲಿ ಪಾತ್ರರಾಗಿದ್ದಾರೆ.

ಶ್ರೀಲಂಕಾ ಕ್ರಿಕೆಟ್​ ತಂಡದ ಮಾಜಿ ನಾಯಕ ಕುಮಾರ್​ ಸಂಗಕ್ಕರ ವರ್ಷ ಒಂದರಲ್ಲಿ 6 ಬಾರಿ 2 ಸಾವಿರ ರನ್​ ಕಲೆಹಾಕಿದ್ದರು. ಇತ್ತ ವಿರಾಟ್​ ಕೊಹ್ಲಿ 7 ಬಾರಿ ಈ ಸಾಧನೆ ಮಾಡಿದ್ದು, ಕ್ರಿಕೆಟ್​ ಇತಿಹಾಸದಲ್ಲಿ ಹೊಸ ಮಲಿಗಲ್ಲನ್ನು ಸಾಧಿಸಿದ್ದಾರೆ. ವಿರಾಟ್​ 2012 (2,186), 2014 (2,286), 2016 (2,595), 2017 (2,818), 2018 (2,735), 2019 (2,455), 2023 (2,048) 7 ಬಾರಿ ಈ ಸಾಧನೆ ಮಾಡಿದ್ದಾರೆ.