ಕ್ರೀಡೆ

ದಕ್ಷಿಣ ಆಫ್ರಿಕಾ ನೆಲದಲ್ಲಿ ಹ್ಯಾಟ್ರಿಕ್​ ವಿಕೆಟ್​ ಕಬಳಿಸಿದ ಮೊದಲ ಭಾರತೀಯ ಎನಿಸಿದ ಕನ್ನಡಿಗ ಪ್ರಸಿದ್ಧ ಕೃಷ್ಣ!

ಪೊಚೆಫ್​ಸ್ಟೋಮ್​: ಕನ್ನಡಿಗ ಪ್ರಸಿದ್ಧ ಕೃಷ್ಣ (43ಕ್ಕೆ 5) ಹ್ಯಾಟ್ರಿಕ್​ ವಿಕೆಟ್​ ಸಾಧನೆಯ ನೆರವಿನಿಂದ ಆತಿಥೇಯ ದಕ್ಷಿಣ ಆಫ್ರಿಕಾ ಎ ತಂಡಕ್ಕೆ ಕಡಿವಾಣ ಹೇರಿದ ಭಾರತ ಎ ತಂಡ ಬಳಿಕ ಒಡಿಶಾ ಯುವ ಬ್ಯಾಟರ್​ ಪ್ರದೋಶ್​ ರಂಜನ್​ ಪಾಲ್​ (163 ರನ್​, 209 ಎಸೆತ, 23 ಬೌಂಡರಿ, 1 ಸಿಕ್ಸರ್​) ಭರ್ಜರಿ ಶತಕದ ನೆರವಿನಿಂದ ಮೊದಲ ಚತುರ್ದಿನ ಟೆಸ್ಟ್​ನಲ್ಲಿ ಇನಿಂಗ್ಸ್​ ಮುನ್ನಡೆ ಸಾಧಿಸಿದೆ.

ಬುಧವಾರ 5 ವಿಕೆಟ್​ಗೆ 298 ರನ್​ಗಳಿಂದ 3ನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ಎ, ಪ್ರಸಿದ್ಧ ಕೃಷ್ಣ ಮಾರಕ ದಾಳಿಗೆ ಕುಸಿದು 319 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಭಾರತ ಎ ತಂಡ 6 ವಿಕೆಟ್​ಗೆ 377 ರನ್​ ಪೇರಿಸಿ 58 ರನ್​ ಮುನ್ನಡೆ ಸಾಧಿಸಿದೆ. ಪ್ರಸಿದ್ಧ ಕೃಷ್ಣ ವಿದೇಶಿ ಪ್ರಥಮ ದರ್ಜೆ ಪಂದ್ಯದಲ್ಲಿ ಹ್ಯಾಟ್ರಿಕ್​ ವಿಕೆಟ್​ ಕಬಳಿಸಿದ 6ನೇ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್​ ಎನಿಸಿದರು.

ದಕ್ಷಿಣ ಆಫ್ರಿಕಾ ಎ: 98.1 ಓವರ್​ಗಳಲ್ಲಿ 319 (ಜೀನ್​ ಡು ಪ್ಲೆಸಿಸ್​ 106, ಪ್ರಸಿದ್ಧ ಕೃಷ್ಣ 43ಕ್ಕೆ 5, ಸೌರಭ್​ 83ಕ್ಕೆ 3). ಭಾರತ ಎ: 77.2 ಓವರ್​ಗಳಲ್ಲಿ 6 ವಿಕೆಟ್​ಗೆ 377 (ಪಡಿಕಲ್​ 30, ಪ್ರದೋಶ್​ 163, ಸ್ರಾರ್ಜ್​ 68, ಶಾರ್ದೂಲ್​ 70*, ಬೋಷ್​ 46ಕ್ಕೆ 2, ಜೋನ್ಸ್​ 83ಕ್ಕೆ 2).