ಸೆಂಚುರಿಯನ್: ಭಾರತ ತಂಡ 1932ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿತ್ತು ಮತ್ತು 1968ರಲ್ಲಿ ನ್ಯೂಜಿಲೆಂಡ್ನಲ್ಲಿ ಮೊದಲ ಬಾರಿಗೆ ವಿದೇಶದಲ್ಲಿ ಸರಣಿ ಗೆದ್ದ ಸಾಧನೆ ಮಾಡಿತ್ತು. ನಂತರ 1970-71ರಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ನಲ್ಲಿ ಮೊದಲ ಬಾರಿ ಸರಣಿ ಗೆದ್ದಿತ್ತು. ಶ್ರೀಲಂಕಾದಲ್ಲಿ 1993 ಮತ್ತು ಪಾಕಿಸ್ತಾನದಲ್ಲಿ 2003-04ರಲ್ಲಿ ಮೊದಲ ಸರಣಿ ಗೆದ್ದಿತ್ತು. ಆಸ್ಟ್ರೆಲಿಯಾದಲ್ಲೂ 2018-19ರಲ್ಲಿ ತನ್ನ 12ನೇ ಪ್ರವಾಸದಲ್ಲಿ ಕೊನೆಗೂ ಸರಣಿ ಗೆಲುವಿನ ಸಾಧನೆ ಮಾಡಿತ್ತು ಮತ್ತು 2020-21ರಲ್ಲಿ ಅದನ್ನು ಪುನರಾವರ್ತಿಸಿತ್ತು. ಆದರೆ ಭಾರತ ಟೆಸ್ಟ್ ಕ್ರಿಕೆಟ್ ಆಡುವ ಪ್ರಮುಖ ದೇಶಗಳ ಪೈಕಿ ದಕ್ಷಿಣ ಆಫ್ರಿಕಾದಲ್ಲಿ ಮಾತ್ರ ಇದುವರೆಗೆ ಒಮ್ಮೆಯೂ ಸರಣಿ ಗೆದ್ದಿಲ್ಲ. ಅದನ್ನು ಈ ಬಾರಿ ತನ್ನ 9ನೇ ಪ್ರವಾಸದಲ್ಲಿ ಕೊನೆಗೂ ನನಸಾಗಿಸುವ ಸುವರ್ಣಾವಕಾಶ ಭಾರತದ ಮುಂದಿದೆ.
ಹರಿಣಗಳ ನಾಡಿನಲ್ಲಿ ಭಾರತ ಇದುವರೆಗೆ ಆಡಿರುವ 8 ಟೆಸ್ಟ್ ಸರಣಿಗಳಲ್ಲಿ 7ರಲ್ಲಿ ಸೋತಿದ್ದು, 2010-11ರಲ್ಲಿ ಏಕೈಕ ಬಾರಿ ಎಂಎಸ್ ಧೋನಿ ಸಾರಥ್ಯದಲ್ಲಿ ಆಡಿದಾಗ 1-1ರಿಂದ ಸರಣಿ ಸಮಬಲ ಸಾಧಿಸಿದ್ದೇ ಇದುವರೆಗಿನ ಶ್ರೇಷ್ಠ ನಿರ್ವಹಣೆಯಾಗಿದೆ. 2006 ಮತ್ತು 2021-22ರ ಪ್ರವಾಸಗಳಲ್ಲಿ ಭಾರತ ಸರಣಿಯ ಮೊದಲ ಪಂದ್ಯದಲ್ಲೇ ಗೆದ್ದು ಮುನ್ನಡೆ ಸಾಧಿಸಿದ್ದರೂ, ಸರಣಿ ಗೆಲ್ಲುವ ಈ ಅತ್ಯುತ್ತಮ ಅವಕಾಶಗಳನ್ನು ಕೈಚೆಲ್ಲಿ ನಂತರದಲ್ಲಿ ಸರಣಿ ಸೋತಿತ್ತು.
1992-93ರಿಂದ ದಣ ಆಫ್ರಿಕಾದಲ್ಲಿ ಇದುವರೆಗೆ ಆಡಿರುವ 23 ಟೆಸ್ಟ್ಗಳಲ್ಲಿ ಭಾರತ 4ರಲ್ಲಿ ಗೆದ್ದಿದ್ದು, 12ರಲ್ಲಿ ಸೋತಿದೆ ಮತ್ತು 7ರಲ್ಲಿ ಡ್ರಾ ಸಾಧಿಸಿದೆ. ಕಳೆದ ಪ್ರವಾಸದಲ್ಲಿ ಭಾರತ ಸೆಂಚುರಿಯನ್ನಲ್ಲಿ ಆಡಿದ ಟೆಸ್ಟ್ನಲ್ಲಿ ಗೆದ್ದು ಬೀಗಿತ್ತು. ಈ ಬಾರಿ ಅದೇ ಮೈದಾನದಲ್ಲಿ ಮಂಗಳವಾರದಿಂದ ಸರಣಿಯ ಮೊದಲ ಪಂದ್ಯ ನಡೆಯಲಿದ್ದು, ರೋಹಿತ್ ಶರ್ಮ ಬಳಗದಿಂದ ತವರಿನ ವಿಶ್ವಕಪ್ ಫೈನಲ್ ಸೋಲಿನ ಕಹಿಯನ್ನು ಮರೆಸುವಂಥ ಐತಿಹಾಸಿಕ ಸಾಧನೆಯ ನಿರೀೆ ಹರಡಿದೆ.
ಭಾರತ ಈ ಬಾರಿ ಅನುಭವಿ-ಯುವ ಆಟಗಾರರ ಬಳಗವನ್ನು ಹೊಂದಿದ್ದು, ವೇಗಿ ಮೊಹಮದ್ ಶಮಿ ಹೊರತಾಗಿ ಮತ್ತೆಲ್ಲ ಪ್ರಮುಖ ಆಟಗಾರರು ಲಭ್ಯರಿದ್ದಾರೆ. ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್ನಲ್ಲಿದ್ದು, ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಬಲವೂ ಇರುವುದರಿಂದ ಭಾರತಕ್ಕೆ ಹೊಸ ಇತಿಹಾಸ ಬರೆಯಲು ಇದುವೇ ಅತ್ಯುತ್ತಮ ಅವಕಾಶವೆನಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ಭಾರತದ ಟೆಸ್ಟ್ ಸರಣಿ
1992-93: 0-1 (4) ಸರಣಿ ಸೋಲು
1996-97: 0-2 (3) ಸರಣಿ ಸೋಲು
2001-02: 0-1 (2) ಸರಣಿ ಸೋಲು
2006-07: 1-2 (3) ಸರಣಿ ಸೋಲು
2010-11: 1-1 (3) ಸರಣಿ ಸಮಬಲ
2013-14: 0-1 (2) ಸರಣಿ ಸೋಲು
2017-18: 1-2 (3) ಸರಣಿ ಸೋಲು
2021-22: 1-2 (3) ಸರಣಿ ಸೋಲು
ಮರಳಿ ಕೂಡಿಕೊಂಡ ಕೊಹ್ಲಿ
ದ. ಆಫ್ರಿಕಾದಲ್ಲಿ ಅಭ್ಯಾಸ ಪಂದ್ಯವನ್ನು ಆಡದೆ ಕುಟುಂಬದ ತುರ್ತು ಕಾರಣಗಳಿಂದಾಗಿ ನಿರ್ಗಮಿಸಿದ್ದ ವಿರಾಟ್ ಕೊಹ್ಲಿ ಭಾನುವಾರ ಭಾರತ ತಂಡವನ್ನು ಮರಳಿ ಕೂಡಿಕೊಂಡಿದ್ದಾರೆ. ಈ ಮುನ್ನ ವರದಿಯಾದಂತೆ ಕೊಹ್ಲಿ ತವರಿಗೆ ಮರಳಿರಲಿಲ್ಲ. ಬದಲಾಗಿ ಲಂಡನ್ಗೆ ತೆರಳಿದ್ದರು ಎನ್ನಲಾಗಿದೆ. ಅಲ್ಲದೆ ಕೊಹ್ಲಿ ಅವರ ಈ ಕಾರ್ಯಕ್ರಮ ಪೂರ್ವನಿರ್ಧರಿತವಾಗಿತ್ತು. ಹೀಗಾಗಿ ಅವರು ಅಭ್ಯಾಸ ಪಂದ್ಯಕ್ಕೆ ಲಭ್ಯರಿರುವುದಿಲ್ಲ ಎಂಬುದು ಕೂಡ ಬಿಸಿಸಿಐಗೆ ಮೊದಲೇ ಗೊತ್ತಿತ್ತು ಎನ್ನಲಾಗಿದೆ. ಡಿಸೆಂಬರ್ 15ರಂದು ಭಾರತದಿಂದ ದ. ಆಫ್ರಿಕಾಕ್ಕೆ ಪ್ರಯಾಣಿಸಿದ್ದ ಕೊಹ್ಲಿ, ಅಲ್ಲಿ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡು ಡಿಸೆಂಬರ್ 19ರಂದು ಲಂಡನ್ಗೆ ತೆರಳಿದ್ದರು. ಇದೀಗ ಮೊದಲ ಟೆಸ್ಟ್ಗೆ ಪೂರ್ವಭಾವಿಯಾಗಿ ತಂಡಕ್ಕೆ ಮರಳಿರುವ ಕೊಹ್ಲಿ, ಭಾನುವಾರ ತಂಡದ ಸದಸ್ಯರೊಂದಿಗೆ ಅಭ್ಯಾಸದಲ್ಲೂ ಪಾಲ್ಗೊಂಡರು.
ವಿಶ್ವ ನಂ. 1 ಪಟ್ಟ ಕಾಯಲು ಗೆಲ್ಲಬೇಕು
ಐಸಿಸಿಯ ಟಿ20, ಏಕದಿನ, ಟೆಸ್ಟ್ ರ್ಯಾಂಕಿಂಗ್ನಲ್ಲಿ ಸದ್ಯ ನಂ. 1 ಪಟ್ಟದಲ್ಲಿರುವ ಭಾರತ ತಂಡ, ಟೆಸ್ಟ್ನಲ್ಲಿ ಈ ಸ್ಥಾನ ಕಾಯಲು ದ. ಆಫ್ರಿಕಾ ವಿರುದ್ಧ ಸರಣಿ ಗೆಲ್ಲುವುದು ಅಗತ್ಯವಾಗಿದೆ. ಭಾರತ ಸರಣಿ ಸಮಬಲ ಕಂಡರೂ 2ನೇ ಸ್ಥಾನಕ್ಕೆ ಕುಸಿಯಲಿದೆ. 0-1ರಿಂದ ಸರಣಿ ಸೋತರೆ 3ನೇ ಸ್ಥಾನಕ್ಕೆ ಕುಸಿಯಲಿದೆ. ಮತ್ತೊಂದೆಡೆ ಆಸೀಸ್-ಪಾಕ್ ಸರಣಿಯ ಫಲಿತಾಂಶವೂ ನಿರ್ಣಾಯಕವೆನಿಸಿದೆ. ಭಾರತ ಸಮಬಲಕ್ಕೆ ತೃಪ್ತಿಪಟ್ಟರೆ ಆಸೀಸ್ ನಂ. 1 ಪಟ್ಟಕ್ಕೇರಲಿದೆ. ಪಾಕ್ ವಿರುದ್ಧ ಆಸೀಸ್ ಸರಣಿ ಸಮಬಲಕ್ಕೆ ತೃಪ್ತಿಪಟ್ಟರೆ, ಭಾರತ ತಂಡ ದ. ಆಫ್ರಿಕಾದಲ್ಲಿ ಸಮಬಲ ಸಾಧಿಸಿ ಅಗ್ರಸ್ಥಾನ ಕಾಯ್ದುಕೊಳ್ಳಬಹುದಾಗಿದೆ. ಭಾರತ ಸರಣಿ ಸೋತು, ಆಸೀಸ್ ಸಮಬಲಕ್ಕೆ ತೃಪ್ತಿಪಟ್ಟರೆ, ಇಂಗ್ಲೆಂಡ್ ಮೂರರಿಂದ ಅಗ್ರಸ್ಥಾನಕ್ಕೆ ಏರಲಿದೆ.