ಅಹಮದಾಬಾದ್: ಸತತ 10 ಜಯದೊಂದಿಗೆ ಅಜೇಯವಾಗಿ ಫೈನಲ್ಗೇರಿರುವ ಆತಿಥೇಯ ಭಾರತ ತಂಡ ಮತ್ತು ಏಕದಿನ ವಿಶ್ವಕಪ್ ಟ್ರೋಫಿ ಗೆಲುವಿನ ನಡುವೆ ಈಗ ಇರುವುದು ಆಸ್ಟ್ರೆಲಿಯಾ ತಂಡ ಮಾತ್ರ! ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಕಾಂಗರೂಗಳನ್ನು ಮತ್ತೊಮ್ಮೆ ಬೇಟೆಯಾಡುವ ಮೂಲಕ ಮೂರನೇ ಬಾರಿ ಮತ್ತು ತವರಿನಲ್ಲಿ ಎರಡನೇ ಬಾರಿ ಏಕದಿನ ವಿಶ್ವಕಪ್ಗೆ ಮುತ್ತಿಡಲು ಟೀಮ್ ಇಂಡಿಯಾ ಸಜ್ಜಾಗಿದೆ. 12 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಆಡಲಿರುವ ಭಾರತಕ್ಕೆ 10 ವರ್ಷಗಳ ಐಸಿಸಿ ಟ್ರೋಫಿ ಬರವನ್ನೂ ನೀಗಿಸುವ ಅವಕಾಶವಿದೆ. ಭಾರತದ ವಿಶ್ವಕಪ್ ವಿಜೇತ ನಾಯಕರಾದ ಕಪಿಲ್ ದೇವ್, ಎಂಎಸ್ ಧೋನಿ ಸಾಲಿಗೆ ಸೇರಲು ರೋಹಿತ್ ಶರ್ಮ ಕೂಡ ತುದಿಗಾಲಲ್ಲಿ ನಿಂತಿದ್ದರೆ, ವಿರಾಟ್ ಕೊಹ್ಲಿ ಮತ್ತು ಆರ್. ಅಶ್ವಿನ್ 2 ಬಾರಿ ಏಕದಿನ ವಿಶ್ವಕಪ್ ಗೆದ್ದುಕೊಂಡ ಭಾರತದ ಮೊಟ್ಟಮೊದಲ ಸಾಧಕರೆನಿಸುವ ಅಪರೂಪದ ದಾಖಲೆಯ ಸನಿಹದಲ್ಲಿದ್ದಾರೆ.
ಲೀಗ್ ಹಂತ ಮತ್ತು ಸೆಮಿೈನಲ್ನಲ್ಲಿ ರೋಹಿತ್ ಶರ್ಮ ಪಡೆ ತೋರಿರುವ ಬಲಿಷ್ಠ ನಿರ್ವಹಣೆಯನ್ನು ಗಮನಿಸಿದಾಗ ಚಾಂಪಿಯನ್ ಪಟ್ಟಕ್ಕೇರಲು ಅತ್ಯಂತ ಅರ್ಹ ತಂಡವೆನಿಸಿದೆ. ಮೋದಿ ಸ್ಟೇಡಿಯಂನಲ್ಲಿ 1.30 ಲಕ್ಷ ಪ್ರೇಕ್ಷಕರ ಬಲವೂ ಆತಿಥೇಯರಿಗೆ ಇರಲಿದೆ. ಆದರೆ ಐಸಿಸಿ ಟೂರ್ನಿಗಳಲ್ಲಿ ಕಾಂಗರೂಗಳ ಪಡೆ ಯಾವಾಗಲೂ ಅಪಾಯಕಾರಿ ತಂಡ. ಹೀಗಾಗಿ ಫೈನಲ್ ಮುಖಾಮುಖಿ ಅತ್ಯಂತ ಕುತೂಹಲಕ ಕೆರಳಿಸಿದೆ.
ಭಾರತವೇ ಫೇವರಿಟ್
ಟೂರ್ನಿಯುದ್ದಕ್ಕೂ ರೋಹಿತ್ ಶರ್ಮ ಪಡೆ ತೋರಿರುವ ಬಲಿಷ್ಠ ಆಟ ಗಮನಿಸಿದಾಗ ಫೈನಲ್ನಲ್ಲೂ ಹಾಟ್ ಫೇವರಿಟ್ ಎನ್ನದಿರಲು ಕಾರಣವೇ ಇಲ್ಲ. ನಾಯಕ ರೋಹಿತ್ ಶರ್ಮ ಸಿಕ್ಸರ್ಗಳ ಆರ್ಭಟದೊಂದಿಗೆ ಭರ್ಜರಿ ಆರಂಭ ಒದಗಿಸುತ್ತಿದ್ದರೆ, ವಿರಾಟ್ ಕೊಹ್ಲಿ ಟೂರ್ನಿಯಲ್ಲಿ 3 ಶತಕ ಸಿಡಿಸಿ ಟೂರ್ನಿಯಲ್ಲಿ ಶತಕಗಳ ಅರ್ಧಶತಕ ಪೂರೈಸಿದ್ದಾರೆ ಮತ್ತು ಗರಿಷ್ಠ ರನ್ ಸ್ಕೋರರ್ ಎನಿಸಿದ್ದಾರೆ. ಬೌಲಿಂಗ್ನಲ್ಲಿ ಮೊಹಮದ್ ಶಮಿ ವಿಕೆಟ್ ಬೇಟೆ ಎದುರಾಳಿಗೆ ಚಳಿ ಹುಟ್ಟಿಸಿದೆ. ಹೀಗಾಗಿ ಎಲ್ಲ ವಿಧದಲ್ಲೂ ಪ್ರಾಬಲ್ಯ ಸಾಧಿಸಿರುವ ಭಾರತ "ಚಾಂಪಿಯನ್' ಕಿರೀಟ ತೊಡುವ ಔಪಚಾರಿಕತೆ ಪೂರೈಸುವುದಷ್ಟೇ ಬಾಕಿ ಇದ್ದಂತಿದೆ.
ಪುಟಿದೆದ್ದಿದೆ ಆಸ್ಟ್ರೆಲಿಯಾ
ಆರಂಭಿಕ ಪಂದ್ಯದಲ್ಲಿ ಭಾರತ ವಿರುದ್ಧವೇ ಸೋತಿದ್ದ ಆಸೀಸ್, ನಂತರ ಆಫ್ರಿಕಾ ವಿರುದ್ಧವೂ ಸೋತಿತ್ತು. ಆರಂಭಿಕ 2 ಪಂದ್ಯಗಳ ಸೋಲಿನ ಬಳಿಕ ಸತತ 7 ಜಯದೊಂದಿಗೆ ಸೆಮೀಸ್ಗೇರಿದ್ದ ಆಸೀಸ್, ಸೆಮೀಸ್ನಲ್ಲಿ ಹರಿಣಗಳ ವಿರುದ್ಧ ಸೇಡು ತೀರಿಸಿಕೊಂಡಿತ್ತು. ಇದೀಗ ಭಾರತ ವಿರುದ್ಧವೂ ಲೀಗ್ ಹಂತದ ಸೋಲಿಗೆ ಸೇಡು ತೀರಿಸಿಕೊಂಡು 6ನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕುವ ಹಂಬಲ ಪ್ಯಾಟ್ ಕಮ್ಮಿನ್ಸ್ ಬಳಗದ್ದಾಗಿದೆ. ಏಕೈಕ ಪ್ರಮುಖ ಸ್ಪಿನ್ನರ್ (ಆಡಂ ಜಂಪಾ) ಇಟ್ಟುಕೊಂಡು ಭಾರತೀಯ ಪಿಚ್ನಲ್ಲಿ ಯಶಸ್ಸು ಕಂಡಿರುವ ಆಸೀಸ್, ಬ್ಯಾಟಿಂಗ್ ವಿಭಾಗದಲ್ಲೂ ಅಸ್ಥಿರ ನಿರ್ವಹಣೆ ನಡುವೆ ಪುಟಿದೆದ್ದಿದೆ. ಹೀಗಾಗಿ ಗಾಯಗೊಂಡ ಹುಲಿಯಂತಿರುವ ಕಾಂಗರೂಗಳನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸುವಂತಿಲ್ಲ.
ಏಕದಿನ ಮುಖಾಮುಖಿ: 150
ಭಾರತ: 57
ಆಸ್ಟ್ರೆಲಿಯಾ: 83
ರದ್ದು: 10
ವಿಶ್ವಕಪ್ ಮುಖಾಮುಖಿ: 13
ಭಾರತ: 5
ಆಸ್ಟ್ರೆಲಿಯಾ: 8
ಆರಂಭ: ಮಧ್ಯಾಹ್ನ 2.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಡಿ.
ಟೀಮ್ ನ್ಯೂಸ್:
ಭಾರತ: ಸೆಮೀಸ್ನಲ್ಲಿ ಸ್ನಾಯುಸೆಳೆತದ ಸಮಸ್ಯೆ ಎದುರಿಸಿದ್ದ ಆರಂಭಿಕ ಶುಭಮಾನ್ ಗಿಲ್ ಸಂಪೂರ್ಣ ಫಿಟ್ ಆಗಿದ್ದು, ಭಾರತ ತಂಡದಲ್ಲಿ ಬದಲಾವಣೆ ಅಗತ್ಯವಿಲ್ಲವೆನಿಸಿದೆ. ಆದರೆ, ಟೂರ್ನಿಯ ಆರಂಭಿಕ ಪಂದ್ಯದಂತೆ ಮತ್ತೊಮ್ಮೆ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ರನ್ನು ಕಣಕ್ಕಿಳಿಸುವ ಚಿಂತನೆ ಇದ್ದರೂ, ಅವರಿಗಾಗಿ ಯಾರನ್ನು ಹೊರಗಿಡುವುದು ಇನ್ನಷ್ಟು ಗೊಂದಲ ಮೂಡಿಸುತ್ತದೆ. ಹೀಗಾಗಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಂತೆ ಭಾರತ ಈ ಸಲವೂ ಅಶ್ವಿನ್ರನ್ನು ಹೊರಗಿಟ್ಟು ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ.
ಆಸ್ಟ್ರೆಲಿಯಾ: ಆಲ್ರೌಂಡರ್ಗಳಾದ ಮಾರ್ಕಸ್ ಸ್ಟೋಯಿನಿಸ್ ಮತ್ತು ಕ್ಯಾಮರಾನ್ ಗ್ರೀನ್ ವೈಫಲ್ಯ ವಿಶ್ವಕಪ್ನಲ್ಲಿ ಆಸೀಸ್ಗೆ ದೊಡ್ಡ ಹಿನ್ನಡೆಯಾಗಿದೆ. ಫೈನಲ್ನಲ್ಲೂ ಅವರಿಬ್ಬರನ್ನು ಕಣಕ್ಕಿಳಿಸುವ ಸಾಧ್ಯತೆಗಳಿಲ್ಲ. ಹೀಗಾಗಿ ಮಾರ್ನಸ್ ಲಬುಶೇನ್ ಮತ್ತೊಮ್ಮೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಪಡೆಯಬಹುದು. ಸೆಮಿಫೈನಲ್ ಪಂದ್ಯದ ಗೆಲುವಿನ ಕಾಂಬಿನೇಷನ್ ಬದಲಾಯಿಸಲು ಆಸೀಸ್ ಮಾಡಿದಂತಿಲ್ಲ.