ಬೆಂಗಳೂರು: ಆರ್ಸಿಬಿ ತಂಡ 2011ರಲ್ಲಿ ತನ್ನನ್ನು ರಿಟೇನ್ ಮಾಡಿಕೊಳ್ಳದೆ ಪುಣೆ ಫ್ರಾಂಚೈಸಿಗೆ ಬಿಟ್ಟುಕೊಟ್ಟ ಬಗ್ಗೆ ಟೀಮ್ ಇಂಡಿಯಾ ಮತ್ತು ಕರ್ನಾಟಕ ತಂಡದ ಮಾಜಿ ಬ್ಯಾಟರ್ ರಾಬಿನ್ ಉತ್ತಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
'ನಾನು ಆರ್ಸಿಬಿ ಪರ ಆಡುವುದನ್ನು ಆನಂದಿಸುತ್ತಿದ್ದೆ. ಹೀಗಾಗಿ ತಂಡ ಬಿಡಬೇಕಾದಾಗ ಬೇಸರವಾಗಿತ್ತು. ನಾನು 2010ರ ಐಪಿಎಲ್ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಪ್ರಶಸ್ತಿಗೆ ಭಾಜನವಾಗಿದ್ದೆ ಮತ್ತು ಕೆಲ ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದೆ. ಹೀಗಾಗಿ ತಂಡ ನನ್ನನ್ನು ರಿಟೇನ್ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದೆ. ಆದರೆ ಪುಣೆಗೆ ಬಿಟ್ಟುಕೊಟ್ಟಾಗ ಅಚ್ಚರಿಯಾಗಿತ್ತು' ಎಂದು ಉತ್ತಪ್ಪ ಹೇಳಿದ್ದಾರೆ.
2009-2010ರ ಐಪಿಎಲ್ನಲ್ಲಿ ಉತ್ತಪ್ಪ ಆರ್ಸಿಬಿ ತಂಡದ ಪ್ರಮುಖ ಆಟಗಾರರಾಗಿದ್ದರು. 2008ರ ಮೊದಲ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ ಬಳಿಕ ನನ್ನ ನಿಷ್ಠೆಯನ್ನು ಬದಲಾಯಿಸಿಕೊಳ್ಳುವುದು ಕೂಡ ಕಷ್ಟವಾಗಿತ್ತು ಎಂದು ಉತ್ತಪ್ಪ ತಿಳಿಸಿದ್ದಾರೆ. ನಂತರದ ದಿನಗಳಲ್ಲಿ ಉತ್ತಪ್ಪ ಕೆಕೆಆರ್, ರಾಜಸ್ಥಾನ ಮತ್ತು ಸಿಎಸ್ಕೆ ತಂಡಗಳ ಪರವಾಗಿಯೂ ಆಡಿದ್ದರು.