ನ್ಯೂಯಾರ್ಕ್: ವಿಶ್ವದ 100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಥಾನ ಸಂಪಾದಿಸಿದ್ದಾರೆ. ಅವರು ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಮತ್ತು ಕ್ರಿಕೆಟಿಗರಾಗಿದ್ದಾರೆ.
2020ರ ಸಾಲಿನ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯನ್ನು ಅಮೆರಿಕದ ಪ್ರತಿಷ್ಠಿತ ಫೋರ್ಬ್ಸ್ ಮ್ಯಾಗಝಿನ್ ಶುಕ್ರವಾರ ಬಿಡುಗಡೆ ಮಾಡಿದ್ದು, ಇದರಲ್ಲಿ 31 ವರ್ಷದ ಕೊಹ್ಲಿ 66ನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ 100ನೇ ಸ್ಥಾನದಲ್ಲಿದ್ದ ಕೊಹ್ಲಿ, ಈ ಬಾರಿ 34 ಸ್ಥಾನ ಬಡ್ತಿ ಪಡೆದಿದ್ದಾರೆ. ವರದಿಯ ಪ್ರಕಾರ, ಕಳೆದೊಂದು ವರ್ಷದಲ್ಲಿ ಕೊಹ್ಲಿ ಗಳಿಕೆ 196 ಕೋಟಿ ರೂ. ಆಗಿದೆ. ಇದರಲ್ಲಿ 181 ಕೋಟಿ ರೂ. ಆದಾಯ ಬರೀ ಜಾಹೀರಾತುಗಳಿಂದಲೇ ಬಂದಿದೆ. 15 ಕೋಟಿ ರೂ. ಆದಾಯ ಬಹುಮಾನ ಮೊತ್ತ ಮತ್ತು ಪಂದ್ಯ ಸಂಭಾವನೆಯಿಂದ ಬಂದಿದೆ. ಕಳೆದ ವರ್ಷ 188 ಕೋಟಿ ರೂ. ಗಳಿಕೆಯೊಂದಿಗೆ 100ನೇ ಸ್ಥಾನದಲ್ಲಿದ್ದರೆ, 2018ರಲ್ಲಿ ಅವರು 180 ಕೋಟಿ ರೂ. ಗಳಿಕೆಯೊಂದಿಗೆ 83ನೇ ಸ್ಥಾನದಲ್ಲಿದ್ದರು.
ಕೋವಿಡ್-19ರಿಂದಾಗಿ ಕಳೆದ ಮಾರ್ಚ್ನಿಂದ ಸರಿಸುಮಾರು 2 ತಿಂಗಳ ಕಾಲ ಕ್ರೀಡಾ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಕಾರಣದಿಂದಾಗಿಯೂ ಕ್ರೀಡಾಪಟುಗಳ ಒಟ್ಟಾರೆ ಗಳಿಕೆಯ ಪ್ರಮಾಣದಲ್ಲಿ ಕುಸಿತವಾಗಿದೆ. 100 ಕ್ರೀಡಾಪಟುಗಳ ಒಟ್ಟಾರೆ ಗಳಿಕೆ 27,188 ಕೋಟಿ ರೂ. ಆಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ. 9 ರಷ್ಟು ಕಡಿಮೆಯಾಗಿದೆ.
ಅಗ್ರಸ್ಥಾನದಲ್ಲಿ ರೋಜರ್ ಫೆಡರರ್: ಸ್ವಿಸ್ ಟೆನಿಸ್ ದಿಗ್ಗಜ ಹಾಗೂ 20 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯ ರೋಜರ್ ಫೆಡರರ್ ವಿಶ್ವದ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಅಗ್ರಸ್ಥಾನ ಅಲಂಕರಿಸಿದ್ದಾರೆ. ಅವರ ಸಂಪಾದನೆ 802 ಕೋಟಿ ರೂಪಾಯಿ. ಕಳೆದ ವರ್ಷ ಅವರು 5ನೇ ಸ್ಥಾನದಲ್ಲಿದ್ದರು. 1990ರ ನಂತರ ಕ್ರೀಡೆಗೆ ಪದಾರ್ಪಣೆ ಮಾಡಿದವರ ಪೈಕಿ ಅಗ್ರಸ್ಥಾನ ಪಡೆದ ಮೊದಲಿಗರೆಂಬ ಹೆಗ್ಗಳಿಕೆ 38 ವರ್ಷದ ಫೆಡರರ್ ಅವರದಾಗಿದೆ. ಈ ಮುನ್ನ 2013ರಲ್ಲಿ 2ನೇ ಸ್ಥಾನದಲ್ಲಿದ್ದುದು ಶ್ರೇಷ್ಠ ಸಾಧನೆಯಾಗಿತ್ತು. ಫುಟ್ಬಾಲ್ ತಾರೆಯರಾದ ಪೋರ್ಚುಗಲ್ನ ಕ್ರಿಶ್ಚಿಯಾನೊ ರೊನಾಲ್ಡೊ (792 ಕೋಟಿ ರೂ.), ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ (785 ಕೋಟಿ ರೂ.) ಮತ್ತು ಬ್ರೆಜಿಲ್ನ ನೇಮರ್ (721 ಕೋಟಿ ರೂ.) ಕ್ರಮವಾಗಿ 2, 3, 4ನೇ ಸ್ಥಾನದಲ್ಲಿದ್ದಾರೆ. ಗಾಲ್ಪ್ ಆಟಗಾರ ಟೈಗರ್ ವುಡ್ಸ್ (470 ಕೋಟಿ ರೂ.) 8ನೇ ಸ್ಥಾನದಲ್ಲಿದ್ದಾರೆ.
ಇಬ್ಬರೇ ಮಹಿಳೆಯರು: ವಿಶ್ವದ 100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಇಬ್ಬರೇ ಮಹಿಳೆಯರಿದ್ದಾರೆ. ಅವರಿಬ್ಬರೂ ಟೆನಿಸ್ ತಾರೆಯರಾಗಿದ್ದಾರೆ. ಜಪಾನ್ ಟೆನಿಸ್ ತಾರೆ ನವೊಮಿ ಒಸಾಕಾ (282 ಕೋಟಿ ರೂ.) 29ನೇ ಸ್ಥಾನ ಪಡೆದಿದ್ದರೆ, 23 ಗ್ರಾಂಡ್ ಸ್ಲಾಂಗಳ ಒಡತಿ ಸೆರೇನಾ ವಿಲಿಯಮ್್ಸ (271 ಕೋಟಿ ರೂ.) 33ನೇ ಸ್ಥಾನದಲ್ಲಿದ್ದಾರೆ. 22 ವರ್ಷದ ಒಸಾಕಾ ಕಳೆದ 4 ವರ್ಷಗಳಿಂದ ವಿಶ್ವದ ಶ್ರೀಮಂತ ಮಹಿಳಾ ಕ್ರೀಡಾಪಟು ಎನಿಸಿದ್ದ 38 ವರ್ಷದ ಸೆರೇನಾರನ್ನು ಹಿಂದಿಕ್ಕಿದ್ದಾರೆ. 2016ರ ಬಳಿಕ ಇದೇ ಮೊದಲ ಬಾರಿಗೆ ಈ ಪಟ್ಟಿಯಲ್ಲಿ ಇಬ್ಬರು ಮಹಿಳಾ ಕ್ರೀಡಾಪಟುಗಳು ಸ್ಥಾನ ಪಡೆದಿದ್ದಾರೆ. 1990ರಿಂದ ವಿಶ್ವದ ಶ್ರೀಮಂತ ಮಹಿಳಾ ಕ್ರೀಡಾಪಟುಗಳ ಪಟ್ಟಿಯಲ್ಲಿ ಟೆನಿಸ್ ಆಟಗಾರ್ತಿಯರೇ ಅಗ್ರಸ್ಥಾನ ಅಲಂಕರಿಸಿದ್ದಾರೆ.