ಕ್ರೀಡೆ

ವಿಚಿತ್ರ ಬ್ಯಾಟಿಂಗ್​ ಶೈಲಿಯನ್ನು ಟ್ರೋಲ್​ ಮಾಡಿದವರಿಗೆ ಸರಿಯಾದ ತಿರುಗೇಟು ನೀಡಿದ ಫವಾದ್​ ಅಲಮ್​!

ನವದೆಹಲಿ: ಕ್ರಿಕೆಟ್​ನಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಬ್ಯಾಟಿಂಗ್​ ಶೈಲಿ ಇರುತ್ತದೆ. ಕ್ರೀಸ್​ನಲ್ಲಿ ನಿಂತುಕೊಳ್ಳುವ ಭಂಗಿಯಾಗಿರಬಹುದು ಅಥವಾ ಬ್ಯಾಟ್​ ಬೀಸುವ ರೀತಿಯಾಗಿರಬಹುದು ಕೆಲವರು ವಿಭಿನ್ನ ಎನಿಸುತ್ತಾರೆ. ಅದೇ ರೀತಿಯಲ್ಲಿ ಪಾಕಿಸ್ತಾನದ ಫವಾದ್​ ಅಲಮ್​​ ಅವರು ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಪಂದ್ಯದಲ್ಲಿ ಬ್ಯಾಟಿಂಗ್​ ಮಾಡಲು ನಿಂತ ಪರಿ ಗಮನ ಸೆಳೆದಿದ್ದು, ಅದಕ್ಕೆ ಸಂಬಂಧಿಸಿದ ಫೋಟೋ ವೈರಲ್​ ಆಗಿದೆ. ​

ಫವಾದ್​ ಅವರ ಅಸಂಪ್ರಾದಾಯಿಕ ಬ್ಯಾಟಿಂಗ್​ ಶೈಲಿಯು ಅನೇಕ ಕ್ರೀಡಾಭಿಮಾನಿಗಳ ಗಮನ ಸೆಳೆದಿದೆ. ಆದರೂ ಇಂಗ್ಲೆಂಡ್​ ವಿರುದ್ಧದ ಪಂದ್ಯದ ವೇಳೆ ಮೊದಲ ಬಾರಿಗೆ ಈ ರೀತಿಯ ಬ್ಯಾಟಿಂಗ್​ ಶೈಲಿಯನ್ನು ಪ್ರಯೋಗಿಸಿ ಶೂನ್ಯಕ್ಕೆ ಔಟಾದಾಗ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಸಹ ಆಗಿತ್ತು. ಕೊನೆಗೂ ಇದೇ ಶೈಲಿಯಲ್ಲಿ ಶತಕವನ್ನು ಸಿಡಿಸಿರುವ ಫವಾದ್​ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ನ್ಯೂಜಿಲೆಂಡ್​ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ವಿಫಲವಾದ ಬಳಿಕ ಎರಡನೇ ಇನ್ನಿಂಗ್ಸ್​ನಲ್ಲಿ ವಿನೂತನ ಬ್ಯಾಟಿಂಗ್​ ಶೈಲಿಯಿಂದ 233 ಎಸೆತಗಳನ್ನು 139 ರನ್​ಗಳನ್ನು ಫವಾದ್​ ಕಲೆಹಾಕಿದ್ದಾರೆ. ಈ ಮೂಲಕ ಟ್ರೋಲಿಗರಿಗೆ ಉತ್ತರ ನೀಡಿದರು.

ಈಗಾಗಲೇ ಟಿ20 ಸರಣಿ ಕೈಚೆಲ್ಲಿರುವ ಪಾಕ್​

ನ್ಯೂಜಿಲೆಂಡ್​ ಪ್ರವಾಸದಲ್ಲಿರುವ ಪಾಕ್​ ಈಗಾಗಲೇ ಕಿವೀಸ್​ ವಿರುದ್ಧ 2-0 ಅಂತರದಲ್ಲಿ ಟಿ20 ಸರಣಿಯನ್ನು ಕೈಚೆಲ್ಲುವ ಮೂಲಕ ಮುಖಭಂಗ ಅನುಭವಿಸಿದೆ. (ಏಜೆನ್ಸೀಸ್​)