ನವದೆಹಲಿ: ಟೆಸ್ಟ್ ಕ್ರಿಕೆಟ್ನಲ್ಲಿ ಸರ್ವಾಧಿಕ 704 ವಿಕೆಟ್ ಕಬಳಿಸಿರುವ ವೇಗಿ ಎನಿಸಿರುವ ಇಂಗ್ಲೆಂಡ್ನ ಜೇಮ್ಸ್ ಆಂಡರ್ಸನ್ ತನ್ನ 42ನೇ ವಯಸ್ಸಿನಲ್ಲಿ ವಿಶ್ವದ ಶ್ರೀಮಂತ ಟಿ20 ಟೂರ್ನಿ ಎನಿಸಿರುವ ಐಪಿಎಲ್ನಲ್ಲಿ ಮೊದಲ ಬಾರಿ ಆಡುವ ಆಸಕ್ತಿ ತೋರಿಸಿದ್ದಾರೆ. ನವೆಂಬರ್ 24&25ರಂದು ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯಲಿರುವ ಐಪಿಎಲ್ ಆಟಗಾರರ ಮೆಗಾ ಹರಾಜಿಗೆ ಈಗಾಗಲೆ ಹೆಸರು ನೋಂದಾಯಿಸುವ 1,574 ಆಟಗಾರರಲ್ಲಿ ಆಂಡರ್ಸನ್ ಕೂಡ ಒಬ್ಬರಾಗಿದ್ದಾರೆ. ಆದರೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಹಾಗೂ ಆಲ್ರೌಂಡರ್ ಬೆನ್ ಸ್ಟೋಕ್ಸ್ ಐಪಿಎಲ್ ಹರಾಜಿನಿಂದ ದೂರ ಉಳಿದಿದ್ದಾರೆ.
ಕಳೆದ ಜುಲೈನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವ ಆಂಡರ್ಸನ್, ಕೇವಲ 19 ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಿದ್ದು, ಹಿಂದೆಂದೂ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿರಲಿಲ್ಲ. 2014ರಲ್ಲಿ ಕೊನೆಯದಾಗಿ ಯಾವುದೇ ಪ್ರಕಾರದ ಟಿ20 ಪಂದ್ಯದಲ್ಲಿ ಕೊನೆಯದಾಗಿ ಆಡಿದ್ದಾರೆ. ಇದರ ಹೊರತಾಗಿಯೂ ಅವರು ಮುಂಬರುವ ಐಪಿಎಲ್ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.
ಪ್ರಸಕ್ತ ಇಂಗ್ಲೆಂಡ್ ತಂಡದ ಬೌಲಿಂಗ್ ಕೋಚ್ ಕೂಡ ಆಗಿರುವ ಆಂಡರ್ಸನ್ ಐಪಿಎಲ್ ಹರಾಜಿಗೆ 1.25 ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ. ಆಂಡರ್ಸನ್ ಇದುವರೆಗೆ ವಿಶ್ವದ ಯಾವ ಟಿ20 ಫ್ರಾಂಚೈಸಿ ಲೀಗ್ನಲ್ಲೂ ಆಡಿಲ್ಲ.
ಐಪಿಎಲ್ ಹರಾಜಿಗೆ 1,500ಕ್ಕೂ ಅಧಿಕ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರೂ, ಇವರೆಲ್ಲರೂ ಹರಾಜಿನ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಎಲ್ಲ 10 ಫ್ರಾಂಚೈಸಿಗಳು ಬಿಡ್ ಮಾಡಲು ಆಸಕ್ತಿ ಇರುವ ಆಟಗಾರರ ಪಟ್ಟಿಯನ್ನು ಸಲ್ಲಿಸಿದ ಬಳಿಕ ಬಿಸಿಸಿಐ, ಹರಾಜಿನಲ್ಲಿ ಪಾಲ್ಗೊಳ್ಳುವ ಅಂತಿಮ ಪಟ್ಟಿಯಲ್ಲಿ ಬಿಡುಗಡೆಗೊಳಿಸಲಿದೆ. ಆಂಡರ್ಸನ್ ಆ ಪಟ್ಟಿಯಲ್ಲೂ ಉಳಿದುಕೊಳ್ಳುವರೇ ಎಂಬ ಕುತೂಹಲವಿದೆ.
ಬೆನ್ ಸ್ಟೋಕ್ಸ್ ಗೈರು
2023ರ ಐಪಿಎಲ್ನಲ್ಲಿ ಕೊನೆಯದಾಗಿ ಚೆನ್ನೈ ಸೂಪರ್ಕಿಂಗ್ಸ್ ಪರ ಆಡಿರುವ ಬೆನ್ ಸ್ಟೋಕ್ಸ್, ಗಾಯದಿಂದಾಗಿ 2024ರ ಆವೃತ್ತಿಯಿಂದ ಹೊರಗುಳಿದಿದ್ದರು. 33 ವರ್ಷದ ಸ್ಟೋಕ್ಸ್ ಹಾಲಿ ವರ್ಷದ ಟಿ20 ವಿಶ್ವಕಪ್ನಲ್ಲೂ ಆಡಿರಲಿಲ್ಲ. ಇದೀಗ ಐಪಿಎಲ್ ಮೆಗಾ ಹರಾಜಿನಿಂದಲೂ ಹೊರಗುಳಿದಿದ್ದಾರೆ. ಇದರಿಂದ ಅವರು, ಮುಂದಿನ 2 ಮಿನಿ ಹರಾಜಿನಿಂದಲೂ ಹೊರಗುಳಿಯಬೇಕಾಗಿದೆ. ಯಾಕೆಂದರೆ ಹೊಸ ನಿಯಮಾವಳಿ ಪ್ರಕಾರ, ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಳ್ಳುವ ವಿದೇಶಿ ಆಟಗಾರರು ಮಾತ್ರ ಮಿನಿ ಹರಾಜಿನಲ್ಲೂ ಪಾಲ್ಗೊಳ್ಳಬಹುದಾಗಿದೆ.