ಕ್ರೀಡೆ

ಪಾಕಿಸ್ತಾನ​ ಎದುರು ನಾಲ್ಕನೇ ಟಿ20 ಪಂದ್ಯದಲ್ಲೂ ನ್ಯೂಜಿಲೆಂಡ್​ ಜಯಭೇರಿ

ಕೆಸ್ಟ್​ಚರ್ಚ್​: ಡೆರಿಲ್​ ಮಿಚೆಲ್​ (72*) ಮತ್ತು ಗ್ಲೆನ್​ ಫಿಲಿಪ್ಸ್​ (70*) ಜೋಡಿಯ ಭರ್ಜರಿ ಜತೆಯಾಟದ ಬಲದಿಂದ ನ್ಯೂಜಿಲೆಂಡ್​ ತಂಡ ಪ್ರವಾಸಿ ಪಾಕಿಸ್ತಾನ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ 7 ವಿಕೆಟ್​ಗಳಿಂದ ಜಯಿಸಿದೆ. ಈ ಮೂಲಕ ಆತಿಥೇಯ ಕಿವೀಸ್​ 5 ಪಂದ್ಯಗಳ ಸರಣಿಯಲ್ಲಿ 4&0 ಮುನ್ನಡೆ ಸಾಧಿಸಿದೆ.

ಹಾಗ್ಲೆ ಓವಲ್​ನಲ್ಲಿ ಶುಕ್ರವಾರ ನಡೆದ ಕಾದಾಟದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಪಾಕ್​, ವಿಕೆಟ್​ ಕೀಪರ್​&ಆರಂಭಿಕ ಮೊಹಮದ್​ ರಿಜ್ವಾನ್​ (90*) ಆಸರೆಯಲ್ಲಿ 5 ವಿಕೆಟ್​ಗೆ 158 ರನ್​ ಪೇರಿಸಿತು. ಪ್ರತಿಯಾಗಿ ನಾಯಕ ಶಹೀನ್​ ಷಾ ಅಫ್ರಿದಿ (34ಕ್ಕೆ 3) ನೀಡಿದ ಆರಂಭಿಕ ಆಘಾತದಿಂದ ಕಿವೀಸ್​ 20 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ತತ್ತರಿಸಿತು. ಆಗ ಜತೆಗೂಡಿದ ಡೆರಿಲ್​ ಮಿಚೆಲ್​-ಗ್ಲೆನ್​ ಫಿಲಿಪ್ಸ್​ ಮುರಿಯದ 4ನೇ ವಿಕೆಟ್​ಗೆ 139 ರನ್​ ಪೇರಿಸಿ 18.1 ಓವರ್​ಗಳಲ್ಲೇ ಗುರಿ ತಲುಪಿಸಿದರು. ಸರಣಿಯ ಅಂತಿಮ ಪಂದ್ಯ ಭಾನುವಾರ ಇಲ್ಲೇ ನಡೆಯಲಿದೆ.

ಪಾಕಿಸ್ತಾನ: 5 ವಿಕೆಟ್​ಗೆ 158 (ರಿಜ್ವಾನ್​ 90*, ಬಾಬರ್​ 19, ನವಾಜ್​ 21*, ಮ್ಯಾಟ್​ ಹೆನ್ರಿ 22ಕ್ಕೆ 2, ಗ್ಯುರ್ಸನ್​ 27ಕ್ಕೆ 2), ನ್ಯೂಜಿಲೆಂಡ್​: 18.1 ಓವರ್​ಗಳಲ್ಲಿ 3 ವಿಕೆಟ್​ಗೆ 159 (ಅಲೆನ್​ 8, ಡೆರಿಲ್​ ಮಿಚೆಲ್​ 72*, ಗ್ಲೆನ್​ ಫಿಲಿಪ್ಸ್​ 70*, ಶಹೀನ್​ ಷಾ ಅಫ್ರಿದಿ 34ಕ್ಕೆ 3). ಪಂದ್ಯಶ್ರೇಷ್ಠ: ಡೆರಿಲ್​ ಮಿಚೆಲ್​.