ಕ್ರೀಡೆ

ಕರೊನಾ ಭೀತಿಯ ನಡುವೆ ಶೂಟಿಂಗ್​ಗೆ ಹಾಜರಾಗಿ ಟೀಕೆ ಎದುರಿಸಿದ ಕ್ರಿಸ್​ ಗೇಲ್​!

ನವದೆಹಲಿ: ವೆಸ್ಟ್​ ಇಂಡೀಸ್​ ಸ್ಫೋಟಕ ಬ್ಯಾಟ್ಸ್​ಮನ್​ ಕ್ರಿಸ್​ ಗೇಲ್​ ಅವರು ಐಪಿಎಲ್​ ಟೂರ್ನಿಗಾಗಿ ದುಬೈಗೆ ಪ್ರಯಾಣ ಬೆಳೆಸುವುದಕ್ಕೆ ಮುನ್ನ ಜಮೈಕಾದಲ್ಲಿ ವೇಗದ ಓಟಗಾರ ಉಸೇನ್​ ಬೋಲ್ಟ್​ ಅವರ ಜನ್ಮದಿನದ ಪಾರ್ಟಿಯಲ್ಲಿ ಭಾಗವಹಿಸಿ ಕರೊನಾ ಭೀತಿ ಎದುರಿಸಿದ್ದರು. ಆದರೆ ಬೋಲ್ಟ್​ಗೆ ಪಾಸಿಟಿವ್​ ಬಂದರೂ ಗೇಲ್​ಗೆ ನೆಗೆಟಿವ್​ ವರದಿ ಬಂದ ಕಾರಣ ದುಬೈಗೆ ಪ್ರಯಾಣ ಬೆಳೆಸಲು ಅವರಿಗೆ ಅನುಮತಿ ದೊರೆತಿತ್ತು. ಆದರೆ ದುಬೈಗೆ ಬಂದ ನಂತರವೂ ಗೇಲ್​ ಕಿತಾಪತಿ ಮುಂದುವರಿದಿದ್ದು, ಜಾಹೀರಾತು ಚಿತ್ರೀಕರಣವೊಂದರಲ್ಲಿ ಭಾಗವಹಿಸಿ ಟೀಕೆ ಎದುರಿಸಿದ್ದಾರೆ.

ಇಬ್ಬರು ವಿದೇಶಿ ಮಹಿಳೆಯರ ನಡುವೆ ಕುಳಿತಿರುವ ಚಿತ್ರವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಗೇಲ್​, 'ಕ್ರಿಸ್​ ಗೇಲ್​ ಅವರು ಇಲ್ಲೇನು ಮಾಡುತ್ತಿದ್ದಾರೆ? ನಾನು: ಅವರಿಗೆ ಏನು ಬೇಕೋ ಅದನ್ನು ಮಾಡುತ್ತಿರುವಂತಿದೆ! ಕಿಂಗ್​ ಗೇಲ್​ ??? ಯುನಿವರ್ಸ್​​ ಬಾಸ್​, 40 ಶೇಡ್ಸ್​​ ಆಫ್​ ಗೇಲ್​ , ಮೈ ದುಬೈ' ಎಂದು ಬರೆದುಕೊಂಡಿದ್ದಾರೆ.

ಗೇಲ್​ ಪೋಸ್ಟ್​ನ ಬೆನ್ನಲ್ಲೇ ಅಭಿಮಾನಿಗಳು ಅವರು ಬಿಸಿಸಿಐನ ಕ್ವಾರಂಟೈನ್​ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವರೇ ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ. ಬಿಸಿಸಿಐ ಮಾರ್ಗಸೂಚಿಯ ಪ್ರಕಾರ ಐಪಿಎಲ್​ ಟೂರ್ನಿಗಾಗಿ ಯುಎಇಗೆ ತೆರಳಿದ ಮೊದಲ 6 ದಿನಗಳ ಕಾಲ ಕ್ವಾರಂಟೈನ್​ನಲ್ಲಿರುವುದು ಕಡ್ಡಾಯವಾಗಿದೆ. ಆದರೆ 40 ವರ್ಷದ ಗೇಲ್​, ಕ್ವಾರಂಟೈನ್​ಗೆ ಒಳಪಡದೆ ಶೂಟಿಂಗ್​ನಲ್ಲಿ ಭಾಗವಹಿಸಿರುವುದು, ಚೆನ್ನೈ ಸೂಪರ್​ಕಿಂಗ್ಸ್​ ತಂಡಕ್ಕೆ ಕರೊನಾ ಆಘಾತ ಎದುರಾಗಿರುವ ನಡುವೆ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್​ ತಂಡದ ಹೊಸ ಜೆರ್ಸಿ ಅನಾವರಣ

ಬೋಲ್ಟ್​ ಪಾರ್ಟಿ ಮುಗಿಸಿ ಬಂದ ಬಳಿಕ ಕನಿಷ್ಠ ಕ್ವಾರಂಟೈನ್​ ನಿಯಮಗಳನ್ನಾದರೂ ಗೇಲ್​ ಪಾಲಿಸಬೇಕಾಗಿತ್ತು. ಆಟಗಾರನಾಗಿ ಜವಾಬ್ದಾರಿಯಿಂದ ಗೇಲ್​ ವರ್ತಿಸುತ್ತಿಲ್ಲ. ಅವರ ಒಂದು ತಪ್ಪಿನಿಂದ ಎಲ್ಲರಿಗೂ ಸಂಕಷ್ಟ ಎದುರಾಗಬಹುದು ಎಂಬ ಟೀಕೆಗಳು ಕೇಳಿಬಂದಿವೆ. ಗೇಲ್​ ಮುಂಬರುವ ಐಪಿಎಲ್​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್​ ತಂಡದ ಪರ ಆಡಬೇಕಾಗಿದೆ.