ಕ್ರೀಡೆ

ತವರಿನಲ್ಲಿ Team India ಸೋಲಿಗೆ ಫ್ಯಾನ್ಸ್​​ ಕಿಡಿ; ಈ ಒಂದು ಕೆಲಸ ಮಾಡುವಂತೆ ಕೇಳಿ ಬಂತು ಆಗ್ರಹ

ನವದೆಹಲಿ: ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​ ಕ್ರೀಡಾಂಗಣದಲ್ಲಿ ನಡೆದ ಭಾರತ (Team India) ಹಾಗೂ ನ್ಯೂಜಿಲೆಂಡ್​ (NewZealand) ನಡುವಿನ ಟೆಸ್ಟ್​ ಪಂದ್ಯದಲ್ಲಿ ಆತಿಥೇಯರು ಸೋಲುಂಡಿದ್ದು, ಸರಣಿಯನ್ನು ಕೈವಶ ಮಾಡಿಕೊಳ್ಳುವಲ್ಲಿ ಕಿವೀಸ್​ ಪಡೆ ಯಶಸ್ವಿಯಾಗಿದೆ. 12 ವರ್ಷಗಳ ಬಳಿಕ ತವರು ನೆಲದಲ್ಲಿ ಸರಣಿ ಸೋಲುವ ಮೂಲಕ ಭಾರತ (Team India) ಅನಪೇಕ್ಷಿತ ದಾಖಲೆಗಳಿಗೆ ಕೊರಳೊಡಿದ್ದು, ಕೋಚ್​ ಗೌತಮ್​ ಗಂಭೀರ್​ ಹಾಗೂ ನಾಯಕ ರೋಹಿತ್​ ಶರ್ಮ ವಿರುದ್ಧ ಕ್ರೀಡಾಭಿಮಾನಿಗಳು ಕಿಡಿಕಾರಿ ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ.

ತವರು ನೆಲದಲ್ಲಿ ಸತತವಾಗಿ 18 ಸರಣಿಗಳನ್ನು ಗೆಲ್ಲುವ ಮೂಲಕ ಟೀಮ್​ ಇಂಡಿಯಾ (Team India) ಎದುರಾಳಿಗಳ ವಿರುದ್ಧ ತನ್ನ ಪಾರುಪತ್ಯವನ್ನು ಮೆರೆದಿತ್ತು. 2012-13ರಲ್ಲಿ ಇಂಗ್ಲೆಂಡ್​ ವಿರುದ್ಧ ಕಡೆಯದಾಗಿ ಸೋಲನ್ನು ಅನುಭವಿಸಿದ್ದ ಭಾರತ (Team India) ತಂಡವು ಆ ಬಳಿಕ ಸತತವಾಗಿ ಗೆಲ್ಲುವ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸಿತ್ತು. ಇದೀಗ ಈ ದಾಖಲೆಯನ್ನು ನ್ಯೂಜಿಲೆಂಡ್​​ (NewZealand) ಟೆಸ್ಟ್​ ತಂಡದ ನೂತನ ನಾಯಲ ಟಾಮ್​ ಲ್ಯಾಥಮ್​ ಮುರಿದು ಹಾಕಿದ್ದು, ಭಾರತದ ನೆಲದಲ್ಲಿ ಬ್ಯಾಕ್-ಟು-ಬ್ಯಾಕ್ ಟೆಸ್ಟ್‌ಗಳನ್ನು ಗೆದ್ದ ಮೊದಲ ಪ್ರವಾಸಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಬೆಂಗಳೂರು ಹಾಗೂ ಪುಣೆಯಲ್ಲಿ ನಡೆದ ಟೆಸ್ಟ್​ ಪಂದ್ಯಗಳಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಪ್ರವಾಸಿ ತಂಡದ ಪ್ರದರ್ಶನವನ್ನು ಕ್ರೀಡಾಭಿಮಾನಿಗಳು ಹಾಡಿ ಹೊಗಳುತ್ತಿದ್ದು, ಟೀಮ್​ ಇಂಡಿಯಾದ (Team India) ಪ್ರದರ್ಶನ ಕಂಡು ಕಿಡಿಕಾರುತ್ತಿದ್ದಾರೆ. ನಾವು ನೋಡಿರುವ ವರ್ಸ್ಟ್​​ ಕ್ಯಾಪ್ಟನ್​ ಹಾಗೂ ಕೋಚ್​ ಜೋಡಿ ಇದಾಗಿದೆ. ಗೌತಮ್​ ಗಂಭೀರ್​ ಅವರ ಕೋಚ್​ ಅವಧಿಯ ಆರಂಭದಲ್ಲೇ ಈ ರೀತಿಯಾಗಿರುವುದು ಭವಿಷ್ಯದ ದೃಷ್ಠಿಯಿಂದ ಬಿಸಿಸಿಐ ಯೋಚಿಸುವುದು ಸೂಕ್ತವಾಗಿದೆ. ಕೂಡಲೇ ಗಂಭೀರ್​ ಅವರನ್ನು ಕೋಚ್​ ಸ್ಥಾನದಿಂದ ಕೆಳಗಿಳಿಸಿ ಎಂದು ಕ್ರೀಡಾಭಿಮಾನಿಗಳು ಕಮೆಂಟ್​ ಹಾಕಿದ್ದಾರೆ.

ಬ್ಯಾಟ್ಸ್​ಮನ್​ಗಳ ಪೆವಿಲಿಯನ್​ ಪೆರೇಡ್​ 

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ದುಕೊಂಡ ನ್ಯೂಜಿಲೆಂಡ್​ (NewZealand) ತಂಡವು ವಾಷಿಂಗ್ಟನ್​ ಸುಂದರ್​. ಆರ್​. ಅಶ್ವಿನ್​ ಆಫ್​ಸ್ಪಿನ್​​ ದಾಳಿಗೆ ನಲುಗಿ 259 ರನ್​ಗಳಿಗೆ ಆಲೌಟ್​ ಆಗಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್​ ಮಾಡಿದ ಟೀಮ್​ ಇಂಡಿಯಾ (Team India) 156 ರನ್‌ಗಳಿಗೆ ಆಲೌಟ್ ಆಗಿತ್ತು.  103 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ನ್ಯೂಜಿಲೆಂಡ್​ ತಂಡವು ನಾಯಕ ಟಾಮ್​ ಲಾಥಮ್​ (86 ರನ್​, 133 ಎಸೆತ, 10 ಬೌಂಡರಿ) ದಿಟ್ಟ ಬ್ಯಾಟಿಂಗ್​ ಫಲವಾಗಿ 255 ರನ್​ಗಳಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 359 ರನ್​ಗಳ ಗುರಿ ನೀಡಿತು.

ಗುರಿ ಬೆನ್ನತ್ತಿದ್ದ ಭಾರತ ತಂಡವನ್ನು ಇನ್ನಿಲ್ಲದಂತೆ ಕಾಡಿದ ಕಿವೀಸ್​ ಬೌಲರ್​​ಗಳು (NewZealand) ಪೆವಿಲಿಯನ್​ ದಾರಿ ತೋರಿಸಿದರು. ಮೊದಲ ಇನ್ನಿಂಗ್ಸ್​ನಂತೆ ಎರಡನೇ ಇನ್ನಿಂಗ್ಸ್​ನಲ್ಲೂ ಬ್ಯಾಟ್ಸ್​ಮನ್​ಗಳು ಕೈಕೊಟ್ಟ ಪರಿಣಾಮ ಟೀಮ್​ ಇಂಡಿಯಾ ಸೋಲಿಗೆ ಕೊರಳೊಡ್ಡಬೇಕಾಯಿತು. ತಂಡದ ಪರ ರವೀಂದ್​ ಜಡೇಜಾ 42 ರನ್​ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

ಸ್ಯಾಂಟ್ನರ್​ ಮಿಂಚು 

ನ್ಯೂಜಿಲೆಂಡ್ ಪರ ಎರಡನೇ ಇನ್ನಿಂಗ್ಸ್‌ನಲ್ಲೂ ಮಾರಕ ಬೌಲಿಂಗ್ ಪ್ರದರ್ಶಿಸಿದ ಮಿಚೆಲ್ ಸ್ಯಾಂಟ್ನರ್ ತಂಡದ ಗೆಲುವಿನ ಪ್ರಮುಖ ರೂವಾರಿ ಎನಿಸಿಕೊಂಡರು.  ಮೊದಲ ಇನ್ನಿಂಗ್ಸ್​ನಲ್ಲಿ ಪ್ರಮುಖ 7 ವಿಕೆಟ್ ಉರುಳಿಸಿದ್ದ ಸ್ಯಾಂಟ್ನರ್, ಎರಡನೇ ಇನ್ನಿಂಗ್ಸ್​ನಲ್ಲೂ 6 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಕಿವೀಸ್ ತಂಡ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದು, ಭಾರತದಲ್ಲಿ ಚೊಚ್ಚಲ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ.