ಕ್ರೀಡೆ

ಪಾಕಿಸ್ತಾನದ ಈ ಹೊಸ ಬ್ಯಾಟ್ಸ್‌ಮನ್, ವಿರಾಟ್ ಕೊಹ್ಲಿಯಂತಿದ್ದಾನೆ ಅಂತಿದ್ದಾರೆ ಫ್ಯಾನ್ಸ್!

ಲಂಡನ್: ಪಾಕಿಸ್ತಾನದ ಬ್ಯಾಟ್ಸ್‌ಮನ್ ಸೌದ್ ಶಕೀಲ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ಅವರು ಕಣಕ್ಕಿಳಿದಾಗ ಕ್ರಿಕೆಟ್ ಪ್ರೇಮಿಗಳಿಗೆ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರೇ ಪಾಕಿಸ್ತಾನ ಪರ ಆಡುತ್ತಿದ್ದಾರೋ ಏನೋ ಎಂದೆನಿಸಿತು. ಇದಕ್ಕೆ ಕಾರಣ ಅವರ ಬ್ಯಾಟಿಂಗ್ ವಿರಾಟ್ ಕೊಹ್ಲಿ ಅವರಂತೆ ಆಕರ್ಷಕವಾಗಿದ್ದುದ್ದಲ್ಲ, ಬದಲಾಗಿ ಅವರು ನೋಡಲು ವಿರಾಟ್ ಕೊಹ್ಲಿ ಅವರಂತೆಯೇ ಕಾಣಿಸುತ್ತಿದ್ದುದು!

ಹೌದು, ಸೌದ್ ಶಕೀಲ್ ನೋಡಲು ವಿರಾಟ್ ಕೊಹ್ಲಿ ಅವರಂತೆಯೇ ಇದ್ದಾರೆ ಎಂದು ಹೆಚ್ಚಿನ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೆಲ್ಮೆಟ್ ಧರಿಸಿದಾಗ ಅವರು ವಿರಾಟ್ ಕೊಹ್ಲಿ ಅವರಂತೆಯೇ ಕಾಣಿಸುತ್ತಾರೆ. ಕೊಹ್ಲಿ ಅವರಂತೆ ಗಡ್ಡ ಬಿಟ್ಟಿರುವುದರಿಂದಲೂ ಕೆಲವೊಂದು ಭಂಗಿಗಳಲ್ಲಿ ಅವರನ್ನೇ ಹೋಲುತ್ತಾರೆ ಎಂದೂ ಕ್ರಿಕೆಟ್ ಪ್ರೇಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

25 ವರ್ಷದ ಶಕೀಲ್ ಪದಾರ್ಪಣೆಯ ಪಂದ್ಯದಲ್ಲಿ 5 ರನ್‌ಗೆ ಔಟಾಗಿ ನಿರಾಸೆ ಮೂಡಿಸಿದರೂ, 2ನೇ ಪಂದ್ಯದಲ್ಲಿ 56 ರನ್ ಸಿಡಿಸಿದರು. ಜತೆಗೆ 1 ವಿಕೆಟ್ ಕೂಡ ಕಬಳಿಸಿ ಆಲ್ರೌಂಡ್ ನಿರ್ವಹಣೆ ತೋರಿದರು. ‘ಈಗ ಪಾಕಿಸ್ತಾನ ಕೂಡ ವಿರಾಟ್ ಕೊಹ್ಲಿಯನ್ನು ಹೊಂದಿದೆ’ ಎಂದು ಕೆಲ ಕ್ರಿಕೆಟ್ ಪ್ರೇಮಿಗಳು ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಎಲ್ಲರೂ ಫುಟ್‌ಬಾಲ್ (ಯುರೋ ಕಪ್) ನೋಡುತ್ತಿರುವುದರಿಂದ ವಿರಾಟ್ ಕೊಹ್ಲಿ ಪಾಕಿಸ್ತಾನದ ಪರ ಆಡುತ್ತಿರುವುದು ಯಾರ ಗಮನಕ್ಕೂ ಬಂದಿಲ್ಲ ಎಂದು ಇನ್ನು ಕೆಲವರು ತಮಾಷೆ ಮಾಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್‌ಅನ್ನು ರಕ್ಷಿಸಲು ವಿರಾಟ್ ಕೊಹ್ಲಿ ಅವರೇ ಬಂದಿದ್ದಾರೆ ಎಂದು ಇನ್ನು ಕೆಲವರು ಹೇಳಿದ್ದಾರೆ.