ಲಖನೌ: ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿರುವ ಲಖನೌ ಸೂಪರ್ಜೈಂಟ್ಸ್ ಮತ್ತು ಆಡಿದ ಮೊದಲ 5 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್-17ರಲ್ಲಿ ಶುಕ್ರವಾರ ಮುಖಾಮುಖಿ ಆಗಲಿವೆ. ಏಕನಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾದಾಟದಲ್ಲಿ ಕೆಎಲ್ ರಾಹುಲ್ ಗೆಲುವಿನ ಲಯ ಕಾಯ್ದುಕೊಳ್ಳಲು ಪ್ರಯತ್ನಿಸಲಿದ್ದರೆ, ರಿಷಭ್ ಪಂತ್ ಪಡೆ ಗೆಲುವಿನೊಂದಿಗೆ ಪ್ಲೇಆಫ್ ಆಸೆ ಜೀವಂತವಿಡಲು ಹೋರಾಡಲಿದೆ.
ಲಖನೌ ವಿರುದ್ಧ ಇದುವರೆಗೆ ಆಡಿರುವ ಮೂರೂ ಪಂದ್ಯಗಳಲ್ಲಿ ಸೋತಿರುವ ಡೆಲ್ಲಿ ತಂಡ ಮೊದಲ ಬಾರಿ ಜಯ ಸಾಧಿಸುವ ತವಕದಲ್ಲಿದೆ. ಡೆಲ್ಲಿ ತಂಡಕ್ಕೆ ದುಬಾರಿ ರನ್ ನೀಡುತ್ತಿರುವ ಬೌಲರ್ಗಳೇ ಪ್ರಮುಖ ಸಮಸ್ಯೆಯಾಗಿದ್ದರೆ, ಲಖನೌ ತಂಡಕ್ಕೆ ಬೌಲರ್ಗಳೇ ಪ್ರಮುಖ ಬಲ ಆಗಿದ್ದಾರೆ. ಎರಡೂ ತಂಡಗಳಿಗೆ ಆಸ್ಟ್ರೆಲಿಯಾದ ಮಾಜಿ ಆಟಗಾರರಾದ ರಿಕಿ ಪಾಂಟಿಂಗ್ (ಡೆಲ್ಲಿ) ಮತ್ತು ಜಸ್ಟಿನ್ ಲ್ಯಾಂಗರ್ (ಲಖನೌ) ಕೋಚ್ ಆಗಿದ್ದಾರೆ.
ಒತ್ತಡದಲ್ಲಿ ಡೆಲ್ಲಿ ಕ್ಯಾಪಿಟಲ್ಸ್
ಕಳೆದ 2 ಪಂದ್ಯಗಳಲ್ಲಿ 230ಕ್ಕೂ ಅಧಿಕ ರನ್ ಬಿಟ್ಟುಕೊಟ್ಟು ಸೋತಿರುವ ಡೆಲ್ಲಿ ತಂಡ ಇನ್ನು ಒಂದೆರಡು ಪಂದ್ಯ ಸೋತರೆ ಪ್ಲೇಆ್ ಆಸೆಯನ್ನು ಬಹುತೇಕ ಕೈಚೆಲ್ಲಬೇಕಾಗುತ್ತದೆ. ದಣ ಆಫ್ರಿಕಾ ವೇಗಿ ಅನ್ರಿಚ್ ನೋಕಿಯಾ ದುಬಾರಿಯಾಗುತ್ತಿದ್ದರೆ, ಭಾರತೀಯ ವೇಗಿಗಳಾದ ಖಲೀಲ್ ಅಹ್ಮದ್, ಇಶಾಂತ್ ಶರ್ಮ, ಮುಕೇಶ್ ಕುಮಾರ್ ಅಸ್ಥಿರ ನಿರ್ವಹಣೆ ತೋರಿದ್ದಾರೆ. ಇನ್ನು ಬ್ಯಾಟಿಂಗ್ನಲ್ಲೂ ರಿಷಭ್ ಪಂತ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಉತ್ತಮ ಲಯದಲ್ಲಿದ್ದರೆ, ಪೃಥ್ವಿ ಷಾ ಕಳೆದೆರಡು ಪಂದ್ಯಗಳಲ್ಲಿ ತಂಡದ ಅಗ್ರ ಕ್ರಮಾಂಕಕ್ಕೆ ಬಲ ತುಂಬಿದ್ದಾರೆ. ಆದರೂ ಡೆಲ್ಲಿ ತಂಡದ ಮಧ್ಯಮ ಕ್ರಮಾಂಕ ನಿರೀಕ್ಷಿತವಾಗಿ ರನ್ ಕಲೆಹಾಕುವಲ್ಲಿ ಸಲವಾಗಿಲ್ಲ. ಆಲ್ರೌಂಡರ್ ಮಿಚೆಲ್ ಮಾರ್ಷ್ ಗಾಯದ ಸಮಸ್ಯೆಯೂ ಡೆಲ್ಲಿಗೆ ಹಿನ್ನಡೆ ತಂದಿದೆ. ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ಇನ್ನೂ ಕೆಲ ಪಂದ್ಯ ಹೊರಗುಳಿಯಲಿದ್ದಾರೆ.
ಪಡಿಕ್ಕಲ್ ಫಾರ್ಮ್ ಚಿಂತೆ
ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ರನ್ಮಳೆ ಹರಿಸಿದ್ದ ಕರ್ನಾಟಕದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಐಪಿಎಲ್ ಶುರುವಾದ ನಂತರ ರನ್ ಗಳಿಸುವುದನ್ನೇ ಮರೆತುಬಿಟ್ಟಿದ್ದಾರೆ. ಕ್ವಿಂಟನ್ ಡಿಕಾಕ್, ಕೆಎಲ್ ರಾಹುಲ್, ನಿಕೋಲಸ್ ಪೂರನ್ ಬ್ಯಾಟಿಂಗ್ನಲ್ಲಿ ಉತ್ತಮ ಕೊಡುಗೆ ನೀಡುತ್ತಿರುವ ನಡುವೆ, ವನ್ಡೌನ್ ಬ್ಯಾಟರ್ ಪಡಿಕ್ಕಲ್ ಕಳೆದ 4 ಪಂದ್ಯಗಳಲ್ಲೂ ಎರಡಂಕಿ ತಲುಪಲಾಗದೆ ಪರದಾಡಿದ್ದಾರೆ. ಈ ಬಾರಿ ರಾಜಸ್ಥಾನ ತಂಡದಿಂದ ಲಖನೌಗೆ ವರ್ಗಾವಣೆಗೊಂಡಿರುವ ಪಡಿಕ್ಕಲ್ ನಿರೀಕ್ಷೆಯನ್ನು ಉಳಿಸಿಕೊಳ್ಳಬೇಕಿದೆ. ಗುಜರಾತ್ ಎದುರು ಮಯಾಂಕ್ ಯಾದವ್ ಅರ್ಧದಲ್ಲೇ ಮೈದಾನ ತೊರೆದರೂ, ಮತ್ತೋರ್ವ ಯುವ ವೇಗಿ ಯಶ್ ಠಾಕೂರ್ 5 ವಿಕೆಟ್ ಕಬಳಿಸಿ ಮಿಂಚಿದ್ದರು. ಜತೆಗೆ ನವೀನ್ ಉಲ್ ಹಕ್, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯಿ ಒಳಗೊಂಡ ಲಖನೌ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ.
ಮುಖಾಮುಖಿ: 3
ಲಖನೌ: 3
ಡೆಲ್ಲಿ: 0
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಸಿನಿಮಾ.
*9: ರಿಷಭ್ ಪಂತ್ ಇನ್ನು 9 ರನ್ ಗಳಿಸಿದರೆ ಐಪಿಎಲ್ನಲ್ಲಿ 3 ಸಾವಿರ ರನ್ ಪೂರೈಸಲಿದ್ದಾರೆ.
*3: ಕೆಎಲ್ ರಾಹುಲ್ ಇನ್ನು 3 ಸಿಕ್ಸರ್ ಸಿಡಿಸಿದರೆ, ಟಿ20 ಕ್ರಿಕೆಟ್ನಲ್ಲಿ 300 ಸಿಕ್ಸರ್ ಪೂರೈಸಲಿದ್ದಾರೆ.