ಕ್ರೀಡೆ

ಕಿಂಗ್​ ಕೊಹ್ಲಿ ಮಗ ಅಕಾಯ್‌ ಹೆಸರಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ!

ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ, ನಟಿ ಅನುಷ್ಕಾ ಶರ್ಮಾ ಅವರು ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಕೆಲ ದಿನಗಳಿಂದ ಅನುಷ್ಕಾ ಅವರು ಗರ್ಭಿಣಿ ಎಂಬ ಮಾತು ಕೇಳಿ ಬಂದಿತ್ತು. ಈಗ ವಿರುಷ್ಕಾ ಜೋಡಿ ಅಧಿಕೃತವಾಗಿ ಹೇಳಿಕೆ ನೀಡಿದೆ.

ನಮ್ಮ ಮಗನಿಗೆ ಅಕಾಯ್ ಎಂದು ಹೆಸರು ಇಟ್ಟಿದ್ದೇವೆ. ಈ ಸಂದರ್ಭದಲ್ಲಿ ನಿಮ್ಮ ಹಾರೈಕೆ, ಆಶೀರ್ವಾದ ನಮಗೆ ಬೇಕು. ನಮ್ಮ ಪ್ರೈವೆಸಿಯನ್ನು ದಯವಿಟ್ಟು ಗೌರವಿಸಿ” ಎಂದು ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದರು.

ಜೂನಿಯರ್ ವಿರಾಟ್​ ಕೊಹ್ಲಿ ಅಕಾಯ್ ಹುಟ್ಟಿದ ಎಂಟು ದಿನಕ್ಕೆ ಸಾಮಾಜಿಕ ತಾಣಗಳಲ್ಲಿ ಅಕಾಯ್‌ ಹೆಸರಲ್ಲಿ ನೂರಾರು ನಕಲಿ ಖಾತೆಗಳು ಹುಟ್ಟಿಕೊಂಡಿವೆ.

ಕೆಲ ಕಿಡಿಗೇಡಿಗಳು ಇನ್‌ಸ್ಟಾಗ್ರಾಂನಲ್ಲಿ ಅಕಾಯ್‌ ಹೆಸರಿನಲ್ಲಿ ಖಾತೆ ತೆರೆದು ಸಂದೇಶಗಳನ್ನು ಪೋಸ್ಟ್‌ ಮಾಡಲು ಶುರು ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರಿ ಟೀಕೆ ಸಹ ವ್ಯಕ್ತವಾಗಿದೆ. ಸಾಮಾಜಿಕ ತಾಣಗಳ ದುರ್ಬಳಕೆ ಮಾಡದಂತೆ ಅನೇಕರು ಮನವಿ ಸಹ ಮಾಡಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಸಾಗುತ್ತಿದ್ದು, ಈಗಾಗಲೇ ಮೊದಲ ಮೂರು ಪಂದ್ಯಗಳು ಮುಕ್ತಾಯವಾಗಿವೆ. ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ತವರಿನಲ್ಲಿ ನಡೆಯುತ್ತಿರುವ ಸಂಪೂರ್ಣ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.

ವೈಯುಕ್ತಿಕ ಕಾರಣ ನೀಡಿ ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಅನುಪಸ್ಥಿತಿಯ ಹೊರತಾಗಿಯೂ ಮೊದಲ ಮೂರು ಪಂದ್ಯಗಳ ಅಂತ್ಯದ ವೇಳೆಗೆ 2-1ರ ಮುನ್ನಡೆ ಸಾಧಿಸಿದೆ.