ಕ್ರೀಡೆ

ಪಾಕ್​ ವಿರುದ್ಧದ ಗೆಲುವನ್ನು ಇಸ್ರೇಲ್​ ಅರ್ಪಿಸಿ ರಿಜ್ವಾನ್​ಗೆ ಟಾಂಗ್​ ಕೊಟ್ರಾ ಸಿರಾಜ್​? ಇಲ್ಲಿದೆ ವೈರಲ್​ ಟ್ವೀಟ್​ನ ಅಸಲಿಯತ್ತು

ನವದೆಹಲಿ: ಅ. 10ರಂದು ಹೈದರಾಬಾದ್​ನಲ್ಲಿ ನಡೆದ ವಿಶ್ವಕಪ್​ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧದ ಗೆಲುವನ್ನು ಪಾಕ್​ ಆಟಗಾರ ಮೊಹಮ್ಮದ್​ ರಿಜ್ವಾನ್​, ಇಸ್ರೇಲ್​ ಮೇಲೆ ದಾಳಿ ಮಾಡಿದ ಹಮಾಸ್​ ಉಗ್ರರಿಗೆ ಅರ್ಪಿಸಿದರು. ಇದು ಸಾಕಷ್ಟು ಟೀಕೆಗೂ ಗುರಿಯಾಗಿತ್ತು. ನಿನ್ನೆ ಪಾಕ್​ ವಿರುದ್ಧ ನಡೆದ ವಿಶ್ವಕಪ್​ ಟೂರ್ನಿಯ 12ನೇ ಪಂದ್ಯದಲ್ಲಿ ಭಾರತ ಭರ್ಜರಿ ಜಯ ದಾಖಲಿಸಿದ್ದು, ವೇಗಿ ಮೊಹಮ್ಮದ್​ ಸಿರಾಜ್​ ಗೆಲುವನ್ನು ಇಸ್ರೇಲ್​ಗೆ ಅರ್ಪಣೆ ಮಾಡಿದ್ದಾರೆ ಎಂದು ಹೇಳಲಾದ ಎಕ್ಸ್ (ಟ್ವಿಟರ್​)​ ಖಾತೆಯ ಒಂದು ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಸಾಕಷ್ಟು ಮಂದಿ ಪ್ರತಿಕ್ರಿಯೆ ಸಹ ಅದಕ್ಕೆ ನೀಡುತ್ತಿದ್ದಾರೆ.

ಸಿರಾಜ್​ ನಿಜವಾಗಿಯೂ ಪಾಕಿಸ್ತಾನಕ್ಕೆ ಟಾಂಗ್​ ಕೊಟ್ರಾ? ಟ್ವೀಟ್​ ಮಾಡಿರುವುದು ನಿಜವೇ? ಎಂಬುದನ್ನು ನಾವೀಗ ತಿಳಿಯೋಣ. ನಿನ್ನೆ ನಡೆದ ಪಂದ್ಯದಲ್ಲಿ ಪಾಕ್​ಗೆ ಆರಂಭಿಕ ಆಘಾತ ನೀಡಿದ್ದೇ ಸಿರಾಜ್​, ಶ್ರೀಲಂಕಾ ವಿರುದ್ಧ ಶತಕ ಬಾರಿಸಿ, ಗೆಲುವಿಗೆ ಕಾರಣರಾಗಿದ್ದ ಅಬ್ದುಲ್ಲಾ ಶಫೀಕ್​ರನ್ನು ಸಿರಾಜ್​ ಎಲ್​ಬಿಡಬ್ಲ್ಯು ಬಲೆಗೆ ಬೀಳಿಸುವ ಮೂಲಕ 20 ರನ್​ಗೆ ಕಟ್ಟಿಹಾಕಿದರು. ಇದಾದ ಬಳಿಕ ಉತ್ತಮವಾಗಿ ಆಡುತ್ತಾ ಕ್ರೀಸ್​ನಲ್ಲಿ ಅಂಟಿಕೊಂಡಿದ್ದ ನಾಯಕ ಬಾಬರ್​ ಅಜಾಮ್​ (50 ರನ್​, 58 ಎಸೆತ, 7 ಬೌಂಡರಿ)​ರನ್​ ಬೋಲ್ಡ್​ ಮಾಡುವ ಮೂಲಕ ತಂಡಕ್ಕೆ ಸಿರಾಜ್ ಒಳ್ಳೆಯ ಬೂಸ್ಟ್​ ನೀಡಿದರು. ಇಲ್ಲಿಂದಾಚೆಗೆ ಪಾಕ್​ ಆಟಗಾರರ ಪೆವಿಲಿಯನ್​ ಪರೇಡ್​ ಮುಂದುವರಿಯಿತು. ಅಂತಿಮವಾಗಿ ಭಾರತ ಬೌಲರ್​ಗಳು 42.5 ಓವರ್​ಗಳಲ್ಲಿ 191 ರನ್​ಗೆ ಪಾಕ್​ ತಂಡವನ್ನು ಆಲೌಟ್​ ಮಾಡಿತು.

ಟೀಮ್​ ಇಂಡಿಯಾ ನಿನ್ನೆಯ ಪಂದ್ಯದಲ್ಲಿ ಸಂಘಟಿತ ಬೌಲಿಂಗ್​ ಪ್ರದರ್ಶನ ಮಾಡಿತು. ಇದೇ ಟೀಮ್​ ಇಂಡಿಯಾದ ಗೆಲುವಿಗೆ ಮುಖ್ಯ ಕಾರಣವಾಯಿತು. ಹೀಗಾಗಿ ಸಿರಾಜ್​ ಟೀಮ್​ ಬೌಲರ್​ಗಳ ಅಮೋಘ ಪ್ರದರ್ಶನವನ್ನು ಯುದ್ಧ ಪೀಡಿತ ಇಸ್ರೇಲ್​ನ ಸಹೋದರ-ಸಹೋದರಿಯರಿಗೆ ಅರ್ಪಿಸಿ, ಟ್ವೀಟ್​ ಮಾಡಿದ್ದಾರೆ ಎನ್ನಲಾದ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಟ್ವೀಟ್​​ನಲ್ಲಿ ಏನಿದೆ?

ಪಾಕ್​ ಆಟಗಾರರ ವಿಕೆಟ್​ಗಳನ್ನು ಪಡೆದು ಟೀಮ್​ ಇಂಡಿಯಾ ಆಟಗಾರರು ಸಂಭ್ರಮಿಸಿದ ಫೋಟೋಗಳನ್ನು ಶೇರ್​ ಮಾಡಿಕೊಂಡು ಇದು ನಮ್ಮ ಇಸ್ರೇಲ್​ ಸಹೋದರ-ಸಹೋದರಿಯರಿಗೆ ಎಂದು ಬರೆಯಲಾಗಿದೆ.

ಸಿರಾಜ್​ ಮಾಡಿದ ಟ್ವೀಟ್​ ಅಲ್ಲ

ವೈರಲ್​ ಆಗಿರುವ ಟ್ವೀಟ್​ ಸಿರಾಜ್​ ಅವರು ಮಾಡಿದ್ದಲ್ಲ. ಅವರ ಅಧಿಕೃತ ಖಾತೆಯಲ್ಲಿ ಎಲ್ಲಿಯೂ ಈ ಟ್ವೀಟ್​ ಕಂಡಿಲ್ಲ. ನಿನ್ನೆ ನಡೆದ ಪಂದ್ಯದ ಬಳಿಕ ನಾವು 3 ಪಂದ್ಯವನ್ನು ಗೆದ್ದಿದ್ದೇವೆ. ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಸಿರಾಜ್​ ಟ್ವೀಟ್​ ಮಾಡಿದ್ದಾರಷ್ಟೇ. ಅದರ ಹಿಂದಿನ ಟ್ವೀಟ್​ನಲ್ಲಿ ಆಫ್ಘಾನ್​ ವಿರುದ್ಧ ರೋಹಿತ್​ ಶರ್ಮ ಶತಕ ಬಾರಿಸಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಆದರೆ, ಇಸ್ರೇಲ್​ ಮಂದಿಯನ್ನು ಉಲ್ಲೇಖಿಸಿ ಸಿರಾಜ್​ ಯಾವುದೇ ಟ್ವೀಟ್​ ಮಾಡಿಲ್ಲ.

ನಕಲಿ ಖಾತೆಯಿಂದ ಟ್ವೀಟ್​ ಮೊಹಮ್ಮದ್​ ಸಿರಾಜ್​ ಹೆಸರಲ್ಲಿ ಇರುವ ನಕಲಿ ಖಾತೆಯಿಂದ ಟ್ವೀಟ್​ ಮಾಡಲಾಗಿದೆ. ಪಾಕಿಸ್ತಾನದ ಮೊಹಮ್ಮದ್​ ರಿಜ್ವಾನ್​ ಅವರ ಟ್ವೀಟ್​ಗೆ ಟಾಂಗ್​ ಕೊಡುವ ಉದ್ದೇಶದಿಂದ ಯಾರೋ ಸಿರಾಜ್​ ಹೆಸರಲ್ಲಿ ನಕಲಿ ಖಾತೆಯನ್ನು ತೆರೆದು ಟ್ವೀಟ್​ ಮಾಡಿದ್ದಾರೆ. ಇದೀಗ ಆ ಟ್ವೀಟ್​ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಮೊಹಮ್ಮದ್​ ಸಿರಾಜ್​ ಅವರ ಅಧಿಕೃತ ಖಾತೆಯಲ್ಲಿ ಬ್ಲ್ಯೂಟಿಕ್​ ಮಾರ್ಕ್​ ಇದೆ. ಆದರೆ, ನಕಲಿ ಖಾತೆಯಲ್ಲಿ ಯಾವುದೇ ಬ್ಲ್ಯೂಟಿಕ್​ ಮಾರ್ಕ್​ ಇಲ್ಲದಿರುವುದರಿಂದ ನಕಲಿ ಖಾತೆ ಎಂಬುದು ದೃಢವಾಗಿದೆ. ವೈರಲ್​ ಆಗುತ್ತಿರುವ ಟ್ವೀಟ್​ಗೂ ಸಿರಾಜ್​ಗೂ ಯಾವುದೇ ಸಂಬಂಧವೇ ಇಲ್ಲ.

ಮೊಹಮ್ಮದ್​ ರಿಜ್ವಾನ್​ ಟ್ವೀಟ್​ನಲ್ಲಿ ಏನಿತ್ತು? ಶ್ರೀಲಂಕಾ ವಿರುದ್ಧದ ಗೆಲುವು ಮತ್ತು ಶತಕ ಗಾಜಾದಲ್ಲಿರುವ ನಮ್ಮ ಸಹೋದರ ಮತ್ತು ಸಹೋದರಿಯರಿಗೆ. ಗೆಲುವನ್ನು ನಿಮಗೆ ಅರ್ಪಿಸಲು ತುಂಬಾ ಸಂತೋಷವಾಗುತ್ತದೆ. ಇಡೀ ತಂಡಕ್ಕೆ ಅದರಲ್ಲೂ ಗೆಲುವನ್ನು ತುಂಬಾ ಸುಲಭಗೊಳಿಸಿದ ಅಬ್ದುಲ್​ ಶಫೀಕ್​ ಮತ್ತು ಹಸನ್​ ಅಲಿಗೆ ಈ ಕ್ರೆಡಿಟ್​ ಸಲ್ಲುತ್ತದೆ. ಅದ್ಭುತ ಸತ್ಕಾರ ಮತ್ತು ಬೆಂಬಲ ನೀಡಿದ ಹೈದರಾಬಾದ್​ ಜನತೆಗೆ ಅತ್ಯಂತ ಕೃತಜ್ಞರಾಗಿರುತ್ತೇವೆ ಎಂದು ರಿಜ್ವಾನ್​ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದರು.

ರಕ್ತಪಾತ ಸೃಷ್ಟಿಸಿರುವ ಹಮಾಸ್​

ಈ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ರಿಜ್ವಾನ್​ರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಅ.7ರ ಶನಿವಾರದಂದು ಮುಂಜಾನೆ ಗಾಜಾ ಪಟ್ಟಿಯಿಂದ ಇಸ್ರೇಲ್​ ಮೇಲೆ ದಿಢೀರ್​ ದಾಳಿ ಮಾಡಿ, ಯುದ್ಧಕ್ಕೆ ಮುನ್ನುಡಿ ಬರೆದಿರುವ ಹಮಾಸ್​ ಉಗ್ರರು ಇಸ್ರೇಲ್​ನಲ್ಲಿ ರಕ್ತಪಾತ ಸೃಷ್ಟಿಸಿದ್ದಾರೆ. ಶಿಶುಗಳೆಂದು ನೋಡದೆ ಶಿರಚ್ಛೇದ ಮಾಡಿ ಮೃಗೀಯವಾಗಿ ನಡೆದುಕೊಳ್ಳುತ್ತಿದ್ದರೆ. ಭಾರತವೂ ಸೇರಿದಂತೆ ಜಗತ್ತಿನ ಬಹುತೇಕರು ಹಮಾಸ್​ ಉಗ್ರರರ ನಡೆಯನ್ನು ಟೀಕೆ ಮಾಡುತ್ತಿರುವ ಈ ಸಂದರ್ಭದಲ್ಲಿ ಪಾಕ್​ ಕ್ರಿಕೆಟಿಗ ರಿಜ್ವಾನ್​, ಭಾರತದ ನೆಲದಲ್ಲೇ ನಿಂತು ತಮ್ಮ ಗೆಲುವು ಮತ್ತು ಶತಕವನ್ನು ಹಮಾಸ್​ ಉಗ್ರರಿಗೆ ಅರ್ಪಿಸಿರುವುದಲ್ಲದೆ, ಅವರನ್ನು ಪ್ರೀತಿಯ ಸಹೋದರ, ಸಹೋದರಿಯರೇ ಎಂದು ಸಂಭೋದಿಸಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ರಿಜ್ವಾನ್​ಗೆ ನೆಟ್ಟಿಗರ ತರಾಟೆ

ರಿಜ್ವಾನ್​ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು ಪಾಕಿಸ್ತಾನ ತಂಡವನ್ನು ವಾಪಸ್​ ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದಿದ್ದಾರೆ. ಅಲ್ಲದೆ, ಕ್ರಿಕೆಟ್​ ವಿಶ್ವಕಪ್​ ಟೂರ್ನಿಯನ್ನು ಹಮಾಸ್​ ಉಗ್ರರಿಗೆ ಬೆಂಬಲ ನೀಡುವ ಸಾಧನವಾಗಿ ಮಾಡಿಕೊಳ್ಳಲು ಐಸಿಸಿ ಅನುಮತಿ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಪ್ರಸ್ತುತ ರಿಜ್ವಾನ್​ ಅವರು ಅಸಂಸ್ಕೃತ ವರ್ತನೆ ಅಥವಾ ರಕ್ತಪಾತವನ್ನು ತೀವ್ರವಾಗಿ ವಿರೋಧಿಸುವ ನೆಲದಲ್ಲಿ ಇದ್ದಾರೆ. ಎಲ್ಲಿಯವರೆಗೆ ಅವರು ಭಾರತದ ನೆಲದಲ್ಲಿ ಇರುತ್ತಾರೋ ಅಲ್ಲಿಯವರೆಗೆ ಅವರು ಈ ನೆಲದ ಭಾವನೆಗಳಿಗೆ ಗೌರವ ಸಲ್ಲಿಸಬೇಕಿದೆ ಎಂದು ನಾಗೇಶ್ವರ ಸದಾಸ್​ ಎಂಬುವರು ರಿಜ್ವಾನ್​ಗೆ ಬುದ್ಧಿ ಹೇಳಿದ್ದಾರೆ. ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ, ಭಾರತ ಇಸ್ರೇಲ್‌ ಪರ ನಿಂತಿರುವುದುನ್ನು ಉಲ್ಲೇಖಿಸಿರುವ ನೆಟ್ಟಿಗ, ಆತ್ಮೀಯ ಬಿಸಿಸಿಐ, ಭಾರತ ಮತ್ತು ಪಾಕ್ ನಡುವಿನ ಪಂದ್ಯದ ಸಮಯದಲ್ಲಿ ಇಸ್ರೇಲ್​ಗೆ ಬೆಂಬಲ ಪ್ರದರ್ಶಿಸಲು ಕಪ್ಪು ಪಟ್ಟಿಗಳನ್ನು ಧರಿಸಲು ನಮ್ಮ ಆಟಗಾರರಿಗೆ ಏಕೆ ಅವಕಾಶ ನೀಡಬಾರದು? ಎಂದು ಪ್ರಶ್ನೆ ಮಾಡಿದ್ದಾರೆ.

ಪಾಕ್​ ವಿರುದ್ಧ ವಿಶ್ವಕಪ್​ ಗೆಲುವಿನ ಸರಣಿ

ನಿನ್ನೆ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್​ ಆಯ್ದುಕೊಂಡಿತು. ನಾಯಕ ರೋಹಿತ್​ ಶರ್ಮಾ ನಿರ್ಧಾರವನ್ನು ಸಮರ್ಥಿಸಿಕೊಂಡ ಭಾರತದ ಬೌಲರ್​ಗಳು ಎದುರಾಳಿ ಪಾಕ್​ ತಂಡವನ್ನು 42.5 ಓವರ್​ಗಳಲ್ಲಿ 191ಕ್ಕೆ ಆಲೌಟ್​ ಮಾಡಿದ್ದರು. ಭಾರತದ ಪರ ಜಸ್ಪ್ರೀತ್​ ಬುಮ್ರಾ (7-1-19-2), ಮೊಹಮ್ಮದ್​ ಸಿರಾಜ್ (8-0-50-2), ಹಾರ್ದಿಕ್ ಪಾಂಡ್ಯ (6-0-34-2), ಕುಲದೀಪ್ ಯಾದವ್ (10-0-35-2), ರವೀಂದ್ರ ಜಡೇಜಾ (9.5-0-38-2), ಶಾರ್ದೂಲ್​ ಠಾಕೂರ್ (2-0-12-0) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

192ರನ್​ಗಳ ಸುಲಭ ಗುರಿ ಬೆನ್ನತ್ತಿದ್ದ ಭಾರತ ತಂಡವು ನಾಯಕ ರೋಹಿತ್ ಶರ್ಮಾ (86 ರನ್, 63 ಎಸೆತ, 6 ಬೌಂಡರಿ, 6 ಸಿಕ್ಸರ್), ಶ್ರೇಯಸ್​ ಅಯ್ಯರ್​ (53 ರನ್, 62 ಎಸೆತ, 3 ಬೌಂಡರಿ, 2 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ಫಲವಾಗಿ ಸುಲಭ ಗುರಿಯನ್ನು 30.3 ಒವರ್​ಗಳಲ್ಲಿ ತಲುಪಿ ಗೆಲುವಿನ ನಗೆ ಬೀರಿತ್ತು. ಈ ಮೂಲಕ ಭಾರತ ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ಧದ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ನಿನ್ನೆಯ ಪಂದ್ಯವು ಸೇರಿದಂತೆ ವಿಶ್ವಕಪ್​ ಟೂರ್ನಿಯಲ್ಲಿ 8 ಬಾರಿ ಮುಖಾಮುಖಿಯಾಗಿದ್ದು, 8 ಬಾರಿಯೂ ಭಾರತವೇ ಜಯಿಸಿದೆ. (ಏಜೆನ್ಸೀಸ್​)